ಕುಮಾರಸ್ವಾಮಿ ಕನಸು ಕಾಣುವುದು ತಪ್ಪಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ: ಡಿ.ಕೆ. ಶಿವಕುಮಾರ್

Update: 2018-04-29 18:12 GMT

ಹಾಸನ,ಎ.29: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 132 ಸೀಟಿನೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು. ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುವುದು ತಪ್ಪಲ್ಲ ಹಾಗೂ ಬಿಜೆಪಿಯಂತೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಕಾಂಗ್ರೆಸ್‍ನಿಂದ ಹಮ್ಮಿಕೊಳ್ಳಲಾಗಿದ್ದ ಪಕ್ಷದ ಸಮಾವೇಶದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕನಸು ಕಾಣುವುದು ತಪ್ಪಲ್ಲ ಎಂದರು. 

ಹಾಸನ ಕ್ಷೇತ್ರದಲ್ಲಿ ಹೆಚ್.ಎಸ್. ಪ್ರಕಾಶ್ ನಾಲ್ಕು ಬಾರಿ ಶಾಸಕರಾಗಿದ್ದರೂ ಕ್ಷೇತ್ರದಲ್ಲಿ ಸರಿಯಾದ ರಸ್ತೆ, ಕುಡಿಯುವ ನೀರು ಯಾವ ಅಭಿವೃದ್ಧಿ ಮಾಡಿಲ್ಲ. ಜೊತೆಗೆ ವಿಧಾನ ಸೌಧದಲ್ಲಂತೂ ಎದ್ದು ಒಂದು ಬಾರಿ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡುವುದಿಲ್ಲ. ಇಂತವರು ಶಾಸಕರಾಗಬಾರದು. ಮನೆಯಲ್ಲಿ ಇರುವುದೇ ಸೂಕ್ತ ಎಂದು ಕುಟುಕಿದರು.

ಇನ್ನು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರು ಮಾತ್ರ ಪ್ರಶ್ನೆ ಕೇಳುತ್ತಿದ್ದರು. ಸಾರ್ವಜನಿಕರು ಹಾಕುವ ಮತಕ್ಕೆ ಕಿಮ್ಮತ್ತು ಇರಬೇಕು. ಈ ಜಿಲ್ಲೆಯಲ್ಲಿ ಇದುವರೆಗೂ ಯಾವ ಬದಲಾವಣೆ ಆಗಿಲ್ಲ. ಈಗ ಜನರು ಒಂದು ಬದಲಾವಣೆ ಬಯಸಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಕೆ. ಮಹೇಶ್ ಅವರಿಗೆ ಅವಕಾಶ ಕೊಡುವ ಮೂಲಕ ಅಭಿವೃದ್ಧಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು.

ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತ ನೀಡಿದೆ. ಪಕ್ಷಭೇದ ಮಾಡದೆ ಎಲ್ಲ ತಾಲೂಕುಗಳಿಗೂ ಸಮಾನ ಅನುದಾನ ಬಿಡುಗಡೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಬೆಂಗಳೂರಿನಲ್ಲಿ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ನಡೆಸಿ ಇಲ್ಲಿನ ಸರ್ಕಾರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ನಾಡಿನ ಯಾವ ಪ್ರಜೆಯು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಉಚಿತ ಅಕ್ಕಿ ನೀಡಿದ್ದೇವೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ಇದನ್ನು ತಿಳಿದುಕೊಳ್ಳದೆ ಇಲ್ಲಸಲ್ಲದ ಆರೋಪ ಮಾಡುತ್ತಿವೆ ಎಂದರು.

ಹಿಂದೆ ಬಿಜೆಪಿಯಿಂದ ಎಲ್ಲರೂ ಹೊರ ಬಂದಾಗ ಕೆಜೆಪಿ ಇತರೆ ಹೊಸ ಪಕ್ಷಗಳು ಉದಯವಾದವು. ಶೋಭ, ಯಡಿಯೂರಪ್ಪರವರು ಬಿಜೆಪಿಯನ್ನು ಮುಗಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಇನ್ನು ಈಶ್ವರಪ್ಪ ಬಿಜೆಪಿ ಭ್ರಷ್ಟ ಎಂದು ಹೇಳಿದ್ದರು. ಬಿಜೆಪಿ ಪಕ್ಷವನ್ನೆ ಆರೋಪ ಮಾಡಿದವರು ಇಂದು ಎಲ್ಲಾ ಹೊಸದಾಗಿ ಬಿಜೆಪಿಯಲ್ಲಿ ಇದ್ದಾರೆ ಎಂದು ಹೇಳಿದರು. ರಾಜ್ಯದ ಮತದಾರರು ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು. 

3 ವರ್ಷ ಬರಗಾಲ ಇದ್ದರೂ ನಮ್ಮ ಆಡಳಿತದಲ್ಲಿ ವಿದ್ಯುತ್ ಕೊರತೆಯಾಗದಂತೆ ಕೊಡಲಾಗಿದೆ. ಈಗಾಗಲೇ 13 ಸಾವಿರ ಎಕರೆಯಲ್ಲಿ ವಿಶ್ವದಲ್ಲೆ ದೊಡ್ಡ ಸೋಲಾರ್ ಸ್ಥಾಪಿಸಿ ದಿನದ 24 ಗಂಟೆಯೂ ವಿದ್ಯುತ್ ಕೊಡಲು ತೀರ್ಮಾನಿಸಿದ್ದೇವೆ. ಹಸಿವು ಮುಕ್ತ ರಾಜ್ಯ ಮಾಡಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನ್ನಭಾಗ್ಯವನ್ನು ಕನ್ನಭಾಗ್ಯ ಎಂದು ಕರೆದಿದ್ದಾರೆ. ಯಾವಾಗಲು ನುಡಿದಂತೆ ನಡೆಯಬೇಕು. ಆದರೆ ಬಿಜೆಪಿ ಮತ್ತು ಜೆಡಿಎಸ್ ಕೇವಲ ರೈತರ ಮಗ ಎಂದು ಹೇಳಿಕೊಳ್ಳುತ್ತಾರೆ. ಆದರೆ ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು. ದೇಶದಲ್ಲಿ ಎಲ್ಲೂ ಇಲ್ಲದ ಭಾಗ್ಯವನ್ನು ನಮ್ಮ ಆಡಳಿತ ನೀಡಿದೆ. ಮುಂದೆ 4 ಕೋಟಿ ಜನರಿಗೂ ಉಚಿತವಾಗಿ ಆರೋಗ್ಯದ ಭಾಗ್ಯ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದರು.

ಇನ್ನು ದಕ್ಷಿಣ ಹಾಗೂ ಉತ್ತರ ಭಾರತದ ರಾಜಕಾರಣಕ್ಕೆ ಭಾರೀ ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಯಾವ ತಂತ್ರಗಾರಿಕೆ ಇಲ್ಲಿ ಫಲಿಸುವುದಿಲ್ಲ. ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರ ತಾವು ಎನ್‍ಡಿಎಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿವೆ. ಕೇರಳದಲ್ಲೂ ಬಿಜೆಪಿಯ ಯಾವ ತಂತ್ರ ಫಲಿಸುವುದಿಲ್ಲ. ಕರ್ನಾಟಕದಲ್ಲಂತೂ ಬಿಜೆಪಿ ಅಧಿಕಾರ ಹಿಡಿಯುವುದಿಲ್ಲ ಎಂದು ವ್ಯಂಗ್ಯವಾಡಿದರು. 

ಮೇ.12 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಟನ್ ಒತ್ತುವುದು ಕನಕಪುರ ಕ್ಷೇತ್ರಕ್ಕೆ ಕೇಳಬೇಕು. ಹೀಗ ಯಾವ ಜೈಕಾರ ಹಾಕುವುದು ಬೇಡ. ಮೇ.15ಕ್ಕೆ ಕಾಂಗ್ರೆಸ್ ಗೆಲುವಿನೊಂದಿಗೆ ಎಲ್ಲರೂ ಒಟ್ಟಿಗೆ ಹಾಕೋಣ ಎಂದು ಕರೆ ನೀಡಿದರು.

ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ ಮಾತನಾಡಿ, ಹಾಸನ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಹೆಚ್.ಎಸ್. ಪ್ರಕಾಶ್ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ. 20 ವರ್ಷದಲ್ಲಿ ನಗರ ಇನ್ನು ಎತ್ತರಕ್ಕೆ ಬೆಳೆಯಬೇಕಾಗಿತ್ತು. ಇವರು ಪ್ರಯಾಣಿಕರ ಹಾಗೆ ಬಂದು ಹೋಗುತ್ತಾರೆ ಎಂದರು. ಈ ಬಾರಿ ಹೆಚ್.ಕೆ. ಮಹೇಶ್ ಅವರಿಗೆ ಅವಕಾಶ ನೀಡಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನಿಡೋಣ ಎಂದು ಹೇಳಿದರು.

ಹಾಸನ ಕ್ಷೇತ್ರದ ಅಭ್ಯರ್ಥಿ ಹೆಚ್.ಕೆ. ಮಹೇಶ್ ಮಾತನಾಡಿ, ಕಳೆದ ಬಾರಿ ಅಲ್ಪ ಮತಗಳಿಂದ ಸೋಲು ಅನುಭವಿಸಬೇಕಾಯಿತು. ಹಣದ ಬಲದಲ್ಲಿ ಜೆಡಿಎಸ್ ಗೆಲುವು ಪಡೆದಿದೆ ಹೊರತು ಯಾವ ಬಲದಿಂದಲೂ ಅಲ್ಲ ಎಂದ ಅವರು ಈ ಬಾರಿ ನನಗೆ ಅವಕಾಶ ಕೊಡುವ ಮೂಲಕ ಅಭಿವೃದ್ಧಿಗೆ ಮುಂದಾಗೋಣ ಎಂದರು.

ಈ ಸಂದರ್ಭದಲ್ಲಿ ಇತರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ನಗರಸಭೆ ಸದಸ್ಯರು ಸೇರಿದಂತೆ ಇತರರು ಸೇರ್ಪಡೆಗೊಂಡರು. ಡಿ.ಕೆ. ಶಿವಕುಮಾರ್ ಅಭಿಮಾನಿಗಳು ಬೃಹತ್ ಹಾರವನ್ನು ಹಾಕಿ ಗೌರವಿಸಿದರು.

ಇದೆ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಹುಡಾ ಅಧ್ಯಕ್ಷ ಎಚ್.ಆರ್.ಕೃಷ್ಣಕುಮಾರ್, ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್, ರಾಜ್ಯಸಭಾ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಮ್ಮಿಗೆ ಮೋಹನ್, ಎಸ್‍ಎಂ. ಆನಂದ್ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ಜಿ.ಟಿ. ಕುಮಾರಸ್, ನಗರಸಭೆ ಸದಸ್ಯ ರಾಜೇಶ್, ಯಶ್ವಂತ, ವನಮಾಲಾ, ತಾರಾಚಂದನ್,  ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಕೆಲವತ್ತಿ ಸೋಮಸೇಖರ್, ಮದುಸೀಧನ್, ರಾಜೇಶ್, ರಾಘವೇಂದ್ರ, ತಂಬ್ಲಾಪುರ ಗಣೇಶ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News