ನಾಗಮಂಗಲ: ಚಲುವರಾಯಸ್ವಾಮಿ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ

Update: 2018-04-29 18:16 GMT

ನಾಗಮಂಗಲ, ಎ.29: ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿಯವರ ಬೆಂಬಲಿಗ ರಿಯಲ್ ಎಸ್ಟೇಟ್ ಉದ್ಯಮಿ ಲಕ್ಷ್ಮೀನಾರಾಯಣ ಅವರ ಸುಖಧರೆ ಗ್ರಾಮದ ಮನೆ ಮೇಲೆ ರವಿವಾರ ಬೆಳಗಿನ ಜಾವದಲ್ಲಿ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶನಿವಾರ ಸಂಜೆ ಮೈಸೂರಿನಿಂದ 6 ಕಾರುಗಳಲ್ಲಿ ಆಗಮಿಸಿದ 30 ಅಧಿಕಾರಿಗಳ ತಂಡ ಗ್ರಾಮಕ್ಕೆ ಆಗಮಿಸಿತು. ಆದರೆ, ಲಕ್ಷ್ಮಿನಾರಾಯಣ್ ಕುಟುಂಬಸ್ಥರು ಇರಲಿಲ್ಲ. ದೂರವಾಣಿ ಮೂಲಕ ಬೆಂಗಳೂರಿನಲ್ಲಿದ್ದ ಲಕ್ಷ್ಮಿನಾರಾಯಣ್ ಅವರು ಆಗಮಿಸುವಂತೆ ಸೂಚಿಸಿದರು.

ಭಾನುವಾರ ಬೆಳಗಿನ ಜಾವ ಲಕ್ಷ್ಮಿನಾರಾಯಣ್ ಗ್ರಾಮಕ್ಕೆ ಆಗಮಿಸಿದ ನಂತರ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಸುಮಾರು ಮೂರು ತಾಸುಗಳು ತಪಾಸಣೆ ನಡೆಸಿದಾಗ ಕೇವಲ 30 ಸಾವಿರ ರೂ. ಮಾತ್ರ ಸಿಕ್ಕಿದ್ದಾಗಿ ತಿಳಿದು ಬಂದಿದೆ.

ಬೀರುವಿನ ಕೀ ಇಲ್ಲವೆಂದು ತಿಳಿದ ಅಧಿಕಾರಿಗಳು ಹಾರೆಯಿಂದ ಬಾಗಿಲು ಒಡೆದು ಕೆಲವು ದಾಖಲೆಪತ್ರಗಳನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆದಿದ್ದ 30 ಸಾವಿರ ರೂ.ಗಳನ್ನು ಲಕ್ಷ್ಮಿನಾರಾಯಣ್ ಕೈಗಿತ್ತು, ಮೇ 1 ರಂದು ಮೈಸೂರಿನ ಕಚೇರಿಗೆ ವಿಚಾರಣೆಗೆ ಬರಲು ತಿಳಿಸಿ ತೆರಳಿದರು.

ಇದೇ ವೇಳೆ ಲಕ್ಷ್ಮಿನಾರಾಯಣ್‍ರವರ ಸಂಬಂಧಿಗಳಾದ ಧನಂಜಯ್ಯ, ರಾಮೇಗೌಡರ ಮನೆಗಳಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದರು.
ನಾಗಮಂಗಲ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಚಲುವರಾಯಸ್ವಾಮಿ ಪರವಾಗಿ ಹಣ ಸಂಗ್ರಹಿಸರುವ ಮಾಹಿತಿ ಮೇರೆಗೆ ಈ ದಾಳಿ ನಡೆಸಿರಬಹುದು ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News