ಹಾವೇರಿ: ಆತ್ಮಹತ್ಯೆಗೆ ಯತ್ನಿಸಿದ ಕೆಜೆಪಿ ಅಭ್ಯರ್ಥಿ

Update: 2018-04-30 13:44 GMT

ಹಾವೇರಿ, ಎ. 30: ಪಕ್ಷದ ಚಿಹ್ನೆ ಬದಲಾಗಿದ್ದಕ್ಕೆ ಕೆಜೆಪಿ ಅಭ್ಯರ್ಥಿಯೊಬ್ಬರು ಮನನೊಂದು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ವಿಫಲಯತ್ನ ನಡೆಸಿರುವ ಘಟನೆ ಸೋಮವಾರ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಜಿಲ್ಲೆಯ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಅಭ್ಯರ್ಥಿ ಹರೀಶ ಇಂಗಳಗೊಂದಿ(35) ಎಂದು ಗುರುತಿಸಲಾಗಿದೆ.

ಹರೀಶ್ ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಪಕ್ಷದ ಚಿಹ್ನೆ ತೆಂಗಿನಕಾಯಿ ಬದಲು ತೆಂಗಿನಮರ ಸಿಕ್ಕಿದ್ದಕ್ಕೆ ಬೇಸರ ವ್ಯಕ್ತಪಡಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಅಭ್ಯರ್ಥಿ ಹರೀಶರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಹರೀಶ್ ಇಂಗಳಗೊಂದಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಪ್ರಕರಣ ಸಂಬಂಧ ಹಾವೇರಿ ನಗರ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News