ಶಿವಮೊಗ್ಗ ಕ್ಷೇತ್ರದಲ್ಲಿ ಜೋರಾಗುತ್ತಿದೆ 'ಜಾತಿ-ಧರ್ಮ ರಾಜಕಾರಣ'

Update: 2018-04-30 17:10 GMT

ಶಿವಮೊಗ್ಗ, ಎ. 30: ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ, ವಿಧಾನಸಭಾ ಚುನಾವಣಾ ಪ್ರಚಾರ ಕಣ ದಿನ ಕಳೆದಂತೆ ರಂಗೇರತೊಡಗಿದೆ. ಮತದಾರರ ಮನವೊಲಿಕೆಗೆ ನಾನಾ ಕಸರತ್ತುಗಳು ನಡೆಯಲಾರಂಭಿಸಿವೆ. ಈ ನಡುವೆ ಕ್ಷೇತ್ರದಲ್ಲಿರುವ ಪ್ರಬಲ ಸಮುದಾಯದ ಮತಗಳಿಕೆಗೆ ಗುಪ್ತ ಕಾರ್ಯತಂತ್ರಗಳು ನಡೆಯಲಾರಂಭಿಸಿವೆ. 'ಜಾತಿ - ಧರ್ಮ ರಾಜಕಾರಣ' ಬಿರುಸುಗೊಂಡಿದೆ. 

ಈ ನಡುವೆ ಕೆಲ ಜಾತಿ ಸಂಘಟನೆಗಳು ಕೂಡ ಇಂತಹ ಪಕ್ಷ - ಅಭ್ಯರ್ಥಿಗೆ ಬೆಂಬಲಿಸುವಂತೆ ಸಮುದಾಯದವರಿಗೆ ಕರೆ ನೀಡಲಾರಂಭಿಸಿವೆ. ಹಾಗೆಯೇ ಆಯಾ ಪಕ್ಷಗಳಲ್ಲಿರುವ ನಾಯಕರು ತಮ್ಮ ಜಾತಿಯವರ ಸಭೆ ಸೇರಿಸಿ, ಪಕ್ಷದ ಅಭ್ಯರ್ಥಿಯ ಪರವಾಗಿ ಸಮುದಾಯದ ಮತ ಧ್ರುವೀಕರಣಕ್ಕೆ ಯತ್ನಿಸುತ್ತಿರುವುದು ಇತ್ತೀಚಿನ ಹೊಸ ಬೆಳವಣಿಗೆಯಾಗಿದೆ. 

ಇನ್ನೊಂದೆಡೆ ಅಭ್ಯರ್ಥಿಗಳು ಪ್ರಬಲ ಕೋಮಿಗೆ ಸೇರಿದ ಮಠ-ಮಂದಿರ, ದರ್ಗಾ, ಚರ್ಚ್‍ಗಳಿಗೆ ಭೇಟಿಯಿತ್ತು ಧಾರ್ಮಿಕ ಪ್ರಮುಖರ ಆಶೀರ್ವಾದ ಪಡೆಯುತ್ತಿದ್ದಾರೆ. ಇದನ್ನು ಸಮೂಹ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಆ ಸಮುದಾಯದವರ ಗಮನ ಸೆಳೆಯುವ ಕೆಲಸ ಮಾಡಲಾರಂಭಿಸಿದ್ದಾರೆ. 

ಮತಯಾಚನೆಗೆ ತೆರಳಿದ ಸಂದರ್ಭಗಳಲ್ಲಿ, 'ತಾವು ಶಾಸಕರಾಗಿ ಆಯ್ಕೆಯಾದರೆ ನಿಮ್ಮ ಸಮುದಾಯದ ಧಾರ್ಮಿಕ ಸ್ಥಳಗಳ ಅಭಿವೃದ್ದಿಗೆ ಅಗತ್ಯ ಕ್ರಮಕೈಗೊಳ್ಳುತ್ತೇವೆ. ಸಮುದಾಯ ಭವನ ಮತ್ತಿತರ ಕೆಲಸ ಕಾರ್ಯಗಳಿಗೆ ನೆರವಾಗುತ್ತೇವೆ' ಎಂಬಿತ್ಯಾದಿ ಆಶ್ವಾಸನೆಗಳನ್ನು ಕೆಲ ಅಭ್ಯರ್ಥಿಗಳು ನೀಡುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ. 

ಗಾಳ: ಪ್ರಬಲ ಕೋಮುಗಳ ಮತಗಳಿಕೆಯ ಉದ್ದೇಶದಿಂದಲೇ, ವಿವಿಧ ಪಕ್ಷಗಳಲ್ಲಿರುವ ಪ್ರಬಲ ಸಮುದಾಯಕ್ಕೆ ಸೇರಿದ ನಾಯಕರನ್ನು ಸೆಳೆದುಕೊಳ್ಳುವ ಕೆಲಸವನ್ನು ಪ್ರಮುಖ ರಾಜಕೀಯ ಪಕ್ಷಗಳು ನಡೆಸಲಾರಂಭಿಸಿವೆ. ಈ ಕಾರಣದಿಂದ ಮುಂದಿನ ದಿಗಳಲ್ಲಿ ಪಕ್ಷಾಂತರ ಪರ್ವ ಮತ್ತಷ್ಟು ಬಿರುಸುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. 

ಮತ್ತೊಂದೆಡೆ ಪ್ರಬಲ ಕೋಮಿಗೆ ಸೇರಿದ ಪಕ್ಷದ ಪ್ರಭಾವಿ ನಾಯಕರನ್ನು ಕ್ಷೇತ್ರಕ್ಕೆ ಕರೆತಂದು, ಅವರ ಮೂಲಕ ಮತಯಾಚನೆ ಮಾಡುವ ಕೆಲಸವನ್ನು ಕೂಡ ಕೆಲ ಅಭ್ಯರ್ಥಿಗಳು ನಡೆಸುತ್ತಿದ್ದಾರೆ. ಹಾಗೆಯೇ ಮತ್ತೆ ಕೆಲವರು ಅತ್ಯಂತ ಗುಪ್ತವಾಗಿ ಆಯಾ ಜಾತಿ-ಧರ್ಮದವರ ಔತಣ ಕೂಟ, ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಿ ಮತಯಾಚಿಸುತ್ತಿರುವ ಮಾಹಿತಿಗಳು ಕೂಡ ಕೇಳಿಬರುತ್ತಿವೆ. 

ಕೆಲ ರಾಜಕೀಯ ಪಕ್ಷ ಹಾಗೂ ನಾಯಕರು ಮತಯಾಚನೆ ಹಾಗೂ ಬಹಿರಂಗ ಸಭೆಗಳಲ್ಲಿ, ಧರ್ಮ ಹಾಗೂ ಇತರೆ ಸೂಕ್ಷ್ಮ ವಿಷಯಗಳನ್ನು ಭಾಷಣಗಳಲ್ಲಿ ವಿಶೇಷವಾಗಿ ಪ್ರಸ್ತಾಪಿಸುತ್ತಿರುವುದು ಕಂಡುಬರುತ್ತಿದೆ. ಪ್ರಚೋದನಕಾರಿ ಮಾತುಗಳನ್ನಾಡುತ್ತಿದ್ದಾರೆ. ಇದರ ಹಿಂದೆ ಮತಗಳಿಕೆಯ ಉದ್ದೇಶವಿರುವುದು ಸುಳ್ಳಲ್ಲ. 'ಎದುರಾಳಿ ಪಕ್ಷವು ಸಮುದಾಯಗಳ ಓಲೈಕೆ, ತುಷ್ಠೀಕರಣ ಮಾಡುತ್ತಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದರೆ ನಿಮ್ಮ ಸಮುದಾಯದ ರಕ್ಷಣೆ ಮಾಡುತ್ತೇವೆ. ನಮ್ಮ ಪಕ್ಷದಿಂದ ಮಾತ್ರ ನಿಮ್ಮ ಹಿತರಕ್ಷಣೆ ಸಾಧ್ಯ...' ಎಂಬಿತ್ಯಾದಿ ಧರ್ಮಾಧಾರಿತ ಮಾತುಗಳು ಕೆಲ ರಾಜಕೀಯ ನಾಯಕರ ಬಾಯಿಂದ ಪುಂಖಾನುಪುಂಖವಾಗಿ ಹೊರಬೀಳುತ್ತಿರುವುದರ ಹಿಂದೆಯೂ ನಿರ್ದಿಷ್ಟ ಸಮುದಾಯದ ಮತಗಳಿಕೆಯ ತಂತ್ರ ಅಡಗಿದೆ ಎನ್ನಲಾಗಿದೆ. 

ಅಭ್ಯರ್ಥಿಗಳಿಗೆ ಬೆಂಬಲ : ನಾಯಕರ ಕಿತ್ತಾಟ!
ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲಿಸುವ ವಿಷಯದಲ್ಲಿ ಕೆಲ ಸಮುದಾಯಗಳ ನಾಯಕರಲ್ಲಿ ಭಿನ್ನಮತ ಭುಗಿಲೇಳುವಂತೆ ಮಾಡಿದೆ. ಒಂದೆಡೆ ಪ್ರತ್ಯೇಕ ಸಂಘಟನೆ, ಬಣ ಮಾಡಿಕೊಂಡು ಇಂತಹ ಅಭ್ಯರ್ಥಿಗೆ ತಮ್ಮ ಸಮುದಾಯ ಬೆಂಬಲಿಸಲಿದೆ ಎಂದು ನಾಯಕರು ಹೇಳುತ್ತಿದ್ದಾರೆ. ಅದೇ ಸಮುದಾಯಕ್ಕೆ ಸೇರಿದ ನಾಯಕರು ನಮ್ಮ ಸಮುದಾಯದ ಬೆಂಬಲವೇನಿದ್ದರೂ ಬೇರೆಯ ಅಭ್ಯರ್ಥಿಗೆ ಎಂದು ತಿರುಗೇಟು ನೀಡುತ್ತಿದ್ದಾರೆ. ನಾಯಕರ ಕಿತ್ತಾಟವು ಸಮುದಾಯದವರನ್ನು ಗೊಂದಲದಲ್ಲಿ ಸಿಲುಕಿ ಬೀಳುವಂತೆ ಮಾಡುತ್ತಿದೆ. 

ಜಾತಿ ಸಮೀಕರಣ
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮುಸ್ಲಿಂ, ಬ್ರಾಹ್ಮಣ, ಲಿಂಗಾಯತ-ವೀರಶೈವ, ಕುರುಬ, ದಲಿತ-ಹಿಂದುಳಿದ ವರ್ಗಕ್ಕೆ ಸೇರಿದ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಯಾವುದೇ ಅಭ್ಯರ್ಥಿಯ ಸೋಲು-ಗೆಲುವಿನಲ್ಲಿ ಈ ವರ್ಗಗಳ ಮತದಾರರೇ ನಿರ್ಣಾಯಕವಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಬಲ ಸಮುದಾಯಗಳ ಮತದಾರರು ಯಾವ ಅಭ್ಯರ್ಥಿಯ ಪರವಾಗಿ ಬೆಂಬಲಕ್ಕೆ ನಿಲ್ಲಬಹುದು ? ಎಂಬಿತ್ಯಾದಿ ಚರ್ಚೆಗಳು ರಾಜಕೀಯ ವಲಯದಲ್ಲಿ ಬಿರುಸಿನಿಂದ ನಡೆಯಲಾರಂಭಿಸಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News