ಶಿವಮೊಗ್ಗ: ಭೋಜನ ಕೂಟಕ್ಕೆ ಚುನಾವಣಾ ಆಯೋಗದಿಂದ ತಡೆ
ಶಿವಮೊಗ್ಗ, ಎ. 29: ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಸೋಮವಾರ ರಾತ್ರಿ ಆಯೋಜಿಸಲಾಗಿದ್ದ ಭೋಜನ ಕೂಟಕ್ಕೆ ಚುನಾವಣಾ ಆಯೋಗ ತಡೆ ಹಾಕಿದ್ದು, ತಯಾರಿಸಿಡಲಾಗಿದ್ದ ಊಟ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.
ಎನ್‍ಡಿವಿ ಹಾಸ್ಟೆಲ್ ಆವರಣದಲ್ಲಿ ವೀರಶೈವ ಜಾಗೃತ ಮತದಾರರ ವೇದಿಕೆ ಮತಯಾಚನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಿಗದಿತ ವೇಳೆಗೆ ವೇದಿಕೆ ಕಾರ್ಯಕ್ರಮ ನಡೆದು ಪೂರ್ಣಗೊಂಡಿತ್ತು.
ಆದರೆ ಹಾಸ್ಟೆಲ್ ಪಕ್ಕದ ವೀರಶೈವ ಕಲ್ಯಾಣ ಮಂದಿರದಲ್ಲಿ ವಿರುಪಾಕ್ಷಪ್ಪ ಎಂಬವರ 77 ನೇ ಹುಟ್ಟುಹಬ್ಬದ ಪ್ರಯುಕ್ತ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಮಾಹಿತಿ ರವಾನೆಯಾಗಿತ್ತು. ಇದರ ಆಧಾರದ ಮೇಲೆ ಆಯೋಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದರು.
ಈ ವೇಳೆ ನಿಗದಿತ ವೇಳೆಯ ಸಮಯ ಮೀರಿ ನಡೆದ ಭೋಜನ ವ್ಯವಸ್ಥೆಯಿಂದಾಗಿ, ಚುನಾವಣ ಆಯೋಗವು ಅನ್ನ ಸಾಂಬಾರ್ ಹಾಗೂ ಚಿತ್ರಾನ್ನ ಸೇರಿದಂತೆ 150 ಪ್ಲೇಟ್ ಭೋಜನವನ್ನ ಸೀಜ್ ಮಾಡಿದೆ. ಈ ಕುರಿತಂತೆ ಸಂಬಂಧಿಸಿದವರ ವಿರುದ್ದ ದೂರು ದಾಖಲಿಸುವ ಕುರಿತಂತೆ ಪರಿಶೀಲನೆ ನಡೆಸುತ್ತಿದೆ.