ಬ್ರಿಟನ್ ಆಂತರಿಕ ಕಾರ್ಯದರ್ಶಿ ರಾಜೀನಾಮೆ

Update: 2018-04-30 17:45 GMT

ಲಂಡನ್, ಎ. 30: ಸುದೀರ್ಘ ಅವಧಿಯ ಬ್ರಿಟನ್ ನಿವಾಸಿಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸಿ ಕೆಟ್ಟದಾಗಿ ನಡೆಸಿಕೊಂಡ ಹಗರಣಕ್ಕೆ ಸಂಬಂಧಿಸಿ ಬ್ರಿಟನ್‌ನ ಆಂತರಿಕ ಕಾರ್ಯದರ್ಶಿ ಆ್ಯಂಬರ್ ರೂಡ್ ರವಿವಾರ ರಾಜೀನಾಮೆ ನೀಡಿದ್ದಾರೆ.

ಆಂತರಿಕ ವ್ಯವಹಾರಗಳ ಕಾರ್ಯದರ್ಶಿಯ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಪ್ರಧಾನಿ ತೆರೇಸಾ ಮೇ ಕಚೇರಿ ರವಿವಾರ ತಡ ರಾತ್ರಿ ಪ್ರಕಟಿಸಿದೆ.

‘ವಿಂಡ್‌ರಶ್ ಹಗರಣ’ದ ಬಗ್ಗೆ ರೂಡ್ ಸೋಮವಾರ ಸಂಸತ್ತಿನಲ್ಲಿ ಹೇಳಿಕೆಯೊಂದನ್ನು ನೀಡುವವರಿದ್ದರು.

 ಅಕ್ರಮ ವಲಸೆಯನ್ನು ಕಡಿಮೆ ಮಾಡುವ ಸರಕಾರದ ಅಭಿಯಾನದ ಭಾಗವಾಗಿ ಸುದೀರ್ಘ ಕಾಲದಿಂದ ಬ್ರಿಟನ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಅಕ್ರಮ ವಲಸಿಗರೆಂದು ಪರಿಗಣಿಸಿ ಕಿರುಕುಳ ನೀಡಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಪ್ರಕರಣ ಹಲವು ದಿನಗಳ ಕಾಲ ಬ್ರಿಟನ್ ಪತ್ರಿಕೆಗಳ ಪ್ರಮುಖ ಸುದ್ದಿಯಾಗಿತ್ತು. ಕನ್ಸರ್ವೇಟಿವ್ ಸರಕಾರದ ಕಠಿಣ ವಲಸೆ ನೀತಿಗಳಿಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

‘ಗಾರ್ಡಿಯನ್’ ವರದಿಯ ಪರಿಣಾಮ

‘‘ಎರಡನೇ ಮಹಾಯುದ್ಧದ ಬಳಿಕ ಕೆರಿಬಿಯನ್‌ನಿಂದ ಬ್ರಿಟನ್‌ಗೆ ಬಂದ ಕೆಲವು ಜನರಿಗೆ ಇತ್ತೀಚೆಗೆ ಬ್ರಿಟನ್‌ನಲ್ಲಿ ಆರೋಗ್ಯ ಸೇವೆಯನ್ನು ನಿರಾಕರಿಸಲಾಗಿದೆ ಹಾಗೂ ಗಡಿಪಾರು ಮಾಡುವ ಬೆದರಿಕೆಯನ್ನು ಒಡ್ಡಲಾಗಿದೆ. ಯಾಕೆಂದರೆ, ಬ್ರಿಟನ್‌ನಲ್ಲಿ ವಾಸಿಸುವ ತಮ್ಮ ಹಕ್ಕನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಾಬೀತುಪಡಿಸಲು ಅವರಿಗೆ ಸಾಧ್ಯವಾಗಿಲ್ಲ’’ ಎಂಬುದಾಗಿ ‘ಗಾರ್ಡಿಯನ್’ ಪತ್ರಿಕೆ ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಬ್ರಿಟನ್ ಸರಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News