ಕಾಂಗ್ರೆಸ್- ಬಿಜೆಪಿಯ ಪಾಪದ ಕೊಡ ತುಂಬಿದೆ: ಎಚ್.ಡಿ ಕುಮಾರಸ್ವಾಮಿ

Update: 2018-04-30 18:14 GMT

ಸಕಲೇಶಪುರ,ಎ.30: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪಾಪದ ಕೊಡ ತುಂಬಿದೆ. ಬಿಜೆಪಿ ಅಭ್ಯರ್ಥಿ ಬೆಂಗಳೂರಿನಲ್ಲಿ ಬಡ್ಡಿ ವ್ಯಾಪಾರಿ ಎಂದು ಕಟುವಾಗಿ ಟೀಕಿಸಿದ ಮಾಜಿ ಮುಖ್ಯಮಂತ್ರಿ ಜೆಡಿಎಸ್ ವರಿಷ್ಠ ಎಚ್.ಕೆ ಕುಮಾರಸ್ವಾಮಿ ಜೆಡಿಎಸ್‍ನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಬಡ್ಡಿ ವ್ಯಾಪಾರಿ ನೀಡಿರುವ ಹಣದಿಂದ ಎರಡು ದಿನಗಳು ಮಾತ್ರ ಜನ ಬದುಕಬಹುದು ಎನ್ನುತ್ತಾ ಬಿಎಸ್‍ಪಿಯ ಮಾಯಾವತಿರವರು ನಮ್ಮ ಜೊತೆ ಕೈಜೋಡಿಸಿದ್ದಾರೆ. ರಾಜ್ಯದಲ್ಲಿ ಹೊಂದಾಣಿಕೆ ಮುಖಾಂತರ ನಾವು ಅಧಿಕಾರಕ್ಕೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ 3810 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದರೆ ಖಜಾನೆ ಬರಿದಾಗುತ್ತದೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೇರಿದ 24 ಗಂಟೆಗಳಲ್ಲಿ ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು ಶುಂಠಿ, ಕಾಫಿ, ಮೆಣಸು ಸೇರಿದಂತೆ ಎಲ್ಲಾ ರೀತಿಯ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದರೆ ಕೈಗಾರಿಕೋದ್ಯಮಿಗಳು ಮಾಡಿರುವ ಕೋಟಿಗಟ್ಟಲೆ ಸಾಲವನ್ನು ಮನ್ನಾ ಮಾಡುತ್ತಾರೆ. ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯಿಂದ ಸಾವಿರಾರು ರೈತರು ಬೀದಿಪಾಲಾಗಿದ್ದು  ರೈತರ ಸಮಸ್ಯೆಗಳಿಗೆ ಮುಕ್ತಿ ನೀಡಲು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಾಗಿದೆ. ಸುಮರು 4300 ಕೋಟಿ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲವಿದ್ದು, ಇದನ್ನು ಸಹ ನಾವು ಮನ್ನಾ ಮಾಡಲು ಯೋಜಿಸಿದ್ದೇವೆ. ಗರ್ಭಿಣಿಯರಿಗೆ, ಕೂಲಿ ಕಾರ್ಮಿಕರಿಗೆ, 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಪ್ರತಿ ತಿಂಗಳೂ 5000 ನೀಡುವ ಯೋಜನೆ ಸಹ ರೂಪಿಸಲಾಗಿದೆ ಎಂದರು.

ಮಲೆನಾಡಿನಲ್ಲಿ ಆನೆ ದಾಳಿಯಿಂದ ಬೆಳೆ ಹಾಗೂ ಪ್ರಾಣ ನಾಶವಾಗುತ್ತಿದ್ದು, ಶಾಶ್ವತ ಪರಿಹಾರಕ್ಕಾಗಿ ಆನೆ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಾಡಿನ ಸಮಸ್ಯೆಗಳನ್ನು ಬಗೆಹರಿಸದೆ ಪರಸ್ಪರ ಆರೋಪಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಿ ಹೈಕಮಾಂಡ್‍ಗೆ ದೇಣಿಗೆ ನೀಡುತ್ತಿದ್ದಾರೆ. ಸಿದ್ದರಾಮಯ್ಯನವರಿಗೆ ಜೆಡಿಎಸ್ ಬಗ್ಗೆ ಚರ್ಚೆ ಮಾಡಲು ಯಾವುದೇ ವಿಷಯವಿಲ್ಲ. ಜೆಡಿಎಸ್ ಎಂದರೆ ಬಿಜೆಪಿ ಬಿ ಟೀಂ ಎಂದು ಆಪಾದಿಸುತ್ತಿದ್ದ ಅವರು ನಿನ್ನೆಯಿಂದ ಹೊಸ ಗಾಳಿ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಕುಮಾರಸ್ವಾಮಿ ಅಮಿತ್ ಶಾ ಜೊತೆಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಆರೋಪಿಸಿದ್ದಾರೆ. ಅವರು ಹೇಳಿದ ಸಮಯದಲ್ಲಿ ನಾನು ಮಹಾಲಕ್ಷ್ಮೀ ಲೇಔಟ್‍ನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದೆ. ಇಂತಹ ಕೀಳು ಮಟ್ಟದ ಮುಖ್ಯಮಂತ್ರಿಯನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ನಿರಂತರ ಕೋಮು ಗಲಭೆ ವಾತಾವರಣ ಸೃಷ್ಟಿಸಿದವರು ಸಿದ್ದರಾಮಯ್ಯ. ಮುಸ್ಲಿಂ ಬಂಧುಗಳಿಗೆ ರಕ್ಷಣೆ ಜೆಡಿಎಸ್‍ನಿಂದ ಮಾತ್ರ ಸಾಧ್ಯ ಎಂದರು.

ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವು ಭಾಗ್ಯಗಳನ್ನು ನೀಡಿದ್ದರು ಸಹ ಸೌಭಾಗ್ಯ ಮಾತ್ರ ಜನತೆಗೆ ಸಿಗಲಿಲ್ಲ. ಕುಮಾರಸ್ವಾಮಿರವರು ಈ ಬಾರಿ ಅಧಿಕಾರಕ್ಕೇರಿದರೆ ರೈತರು ಹಾಗೂ ಜನಸಾಮಾನ್ಯರ ಪರ ಅಧಿಕಾರ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡು ಬಾರಿ ಅವಧಿಗೆ ನಾನು ಈ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದು, ಹಲವು ಅಭಿವೃದ್ದಿ ಕಾರ್ಯಗಳನ್ನು ನಾನು ಮಾಡಿದ್ದೇನೆ. ಅಲ್ಪಸಂಖ್ಯಾತರು ಹಾಗೂ ದಲಿತರ ರಕ್ಷಣೆಗಾಗಿ ಜೆಡಿಎಸ್ ಅಧಿಕಾರಕ್ಕೇರುವ ಅಗತ್ಯವಿದೆ ಎಂದರು.

ಈ ಸಂಧರ್ಭದಲ್ಲಿ ಬಾಳ್ಳುಪೇಟೆಯ ದೀಕ್ಷಿತ್ ದೇವೆಗೌಡರ ಬಗ್ಗೆ ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿ.ಪ ಸದಸ್ಯರುಗಳಾದ ಚಂಚಲಾ ಕುಮಾರಸ್ವಾಮಿ, ಜೆಡಿಎಸ್ ಸಕಲೇಶಪುರ ತಾಲೂಕು ಅಧ್ಯಕ್ಷ ಸೋಮಶೇಖರ್, ಚಂಚಲ ಕುಮಾರಸ್ವಾಮಿ, ಸುಪ್ರದೀಪ್ತ್ ಯಜಮಾನ್, ಉಜ್ಮಾ ರಿಜ್ವಿ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ, ಜೆಡಿಎಸ್ ಮುಖಂಡರುಗಳಾದ ಜಾತಹಳ್ಳಿ ಪುಟ್ಟಸ್ವಾಮಿ ಗೌಡ, ಇಬ್ರಾಹಿಂ ಯಾದ್ಗಾರ್, ಸಚ್ಚಿನ್ ಪ್ರಸಾದ್, ಪ್ರಜ್ವಲ್ ಗೌಡ, ಬಿಎಸ್‍ಪಿ ಮುಖಂಡರುಗಳಾದ ಸ್ಟೀವನ್ ಪ್ರಕಾಶ್, ಲಕ್ಷ್ಮಣ್ ಕೀರ್ತಿ ಮುಂತಾದವರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News