ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ: ಕುಮಾರಸ್ವಾಮಿ
ಕೊಪ್ಪ, ಎ.30: ಶೃಂಗೇರಿಯಂತ ಕ್ಷೇತ್ರದಲ್ಲಿ ಹಳದಿ ಎಲೆ ರೋಗ, ಒತ್ತುವರಿ ಸಮಸ್ಯೆ, ಕಸ್ತೂರಿ ರಂಗನ್ ವರದಿಯಂತಹ ಸಮಸ್ಯೆಗಳು ಕೃಷಿಯನ್ನೇ ನಂಬಿದ ಮಲೆನಾಡಿನ ರೈತ ಹಾಗೂ ಕೃಷಿ ಕಾರ್ಮಿಕರ ಕುಟುಂಬಗಳ ಬದುಕನ್ನು ಕಸಿದಿದೆ. ಇಲ್ಲಿನ ಯುವ ಜನತೆ ಪಟ್ಟಣದ ಕಡೆ ಮುಖ ಮಾಡಿ ನಿಂತಿದೆ. ಈ ಚುನಾವಣೆಯಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯ ನಿಮ್ಮ ಬದುಕಿನಲ್ಲಿ ಹೊಸ ಬೆಳಕನ್ನು ತರುವ ನಿರ್ಣಯವಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸೋಮವಾರ ಕೊಪ್ಪದ ಲಾಲ್‍ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಕುಮಾರಪರ್ವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆಯ ಜೊತೆಗೆ ಮಂತ್ರಿಯಾಗಿ ಕೆಲಸ ಮಾಡಿದ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಯ ಮೂಲಕ ಇಡೀ ರಾಜ್ಯಕ್ಕೆ ಮಾದರಿಯೆನಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಿದ ಎಚ್.ಜಿ. ಗೋವಿಂದಗೌಡರ ಸುಪುತ್ರ ಎಚ್.ಜಿ. ವೆಂಕಟೇಶ್ ನಮ್ಮ ಪಕ್ಷದ ಅಭ್ಯರ್ಥಿ. ಇವರನ್ನು ಗೆಲ್ಲಿಸಿ ನನ್ನ ಜೊತೆ ಕಳುಹಿಸಿಕೊಡಿ. ಶೃಂಗೇರಿಯನ್ನು ಉಳಿಸುವ ಕೆಲಸವನ್ನು ನಾನು ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಮತ್ತು ಅಮಿತ್ ಶಾ ಒಂದೇ ವಿಮಾನದಲ್ಲಿ ಕುಳಿತುಕೊಂಡು ಚರ್ಚೆ ಮಾಡಿ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಮ್, ಜೆಡಿಎಸ್ ಎಂದರೆ ಜನತಾದಳ ಸಂಘಪರಿವಾರ ಎಂಬ ಸಿದ್ದರಾಮಯ್ಯನವರ ಹೇಳಿಕೆಗಳು ಪ್ರಪಂಚದ ಎಂಟನೇ ಅದ್ಭುತ. ಸಿದ್ದರಾಮಯ್ಯನವರು ಹೇಳಿರುವ ಸಮಯದಲ್ಲಿ ನಾನು ಬೆಂಗಳೂರಿನ ಮಹಾಲಕ್ಷ್ಮೀ ಲೇಜೌಟ್ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರಿವಾಗಿ ಮತಯಾಚನೆ ಮಾಡುತ್ತಿದ್ದೆ. ಅಮಿತ್ ಶಾ ಬೆಳಗಾವಿಯಲ್ಲಿದ್ದರು. ಇದನ್ನು ತಿಳಿದುಕೊಳ್ಳುವ ವ್ಯವದಾನವೂ ಇಲ್ಲದೇ ಟಿ.ವಿ. ಮಾದ್ಯಮದವರು ಪ್ರಸಾರ ಮಾಡುತ್ತಾರೆ. ನನಗೆ ಅಮಿತ್ ಶಾ ಕಟ್ಟಿಕೊಂಡು ಏನಾಗಬೇಕು. ರಾಷ್ಟ್ರೀಯ ಪಕ್ಷಗಳಿಂದ ನಮ್ಮ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಇಲ್ಲಿ ಹಿಂದೂ, ಮುಸಲ್ಮಾನ ಸೇರಿದಂತೆ ಎಲ್ಲಾ ವರ್ಗದ ಜನ ಸೌಹಾರ್ಧದಿಂದ ಬಾಳಬೇಕಾಗಿದೆ. ಜಾತಿಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಅಮಯಾಕ ಮಕ್ಕಳನ್ನು ಬಲಿಪಡೆದುಕೊಂಡು ನಿಮ್ಮ ಬದುಕಿನ ಜೊತೆ ಚೆಲ್ಲಾಟವಾಡುವ ಇಂತಹ ರಾಷ್ಟ್ರೀಯ ಪಕ್ಷಗಳು ನಮಗೆ ಅಗತ್ಯವಿಲ್ಲ ಎಂದರು.
ನಿಮ್ಮ ಕುಟುಂಬವನ್ನು ಯಾವ ರೀತಿ ಉದ್ಧಾರ ಮಾಡಬೇಕು. ಕಷ್ಟಗಳನ್ನು ಯಾವ ರೀತಿ ಬಗೆಹರಿಸಬೇಕು. ನಿಮ್ಮ ಆದಾಯವನ್ನು ಯಾವ ರೀತಿ ವೃದ್ಧಿಮಾಡಬೇಕು ಎಂಬುದು ನನ್ನ ಚಿಂತನೆ. 70 ವರ್ಷ ಅವರನ್ನು ಏನೂ ತಪ್ಪು ಮಾಡಿದರೂ ಸಹಿಸಿಕೊಂಡಿದ್ದೀರಿ, ನನಗೂ ಐದು ವರ್ಷದ ಅವಕಾಶ ನೀಡಿ. ನಿಮ್ಮ ಕುಟುಂಬಗಳನ್ನು ಉಳಿಸಿಕೊಳ್ಳಲು ಯಾವ ರೀತಿ ಕಾರ್ಯಕ್ರಮ ಕೊಡಬೇಕು ಎಂಬ ಚಿಂತನೆ ನನ್ನದು. ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಬದುಕಿಗೆ ಯಾವ ರೀತಿ ಶಕ್ತಿ ಕೊಡುತ್ತೇನೆ. ಅಲ್ಪಸಂಖ್ಯಾತ ಬಂಧುಗಳ ಮಕ್ಕಳ ಶಿಕ್ಷಣಕ್ಕೆ ಯಾವ ರೀತಿಯ ಕಾರ್ಯಕ್ರಮ ಕೊಡುತ್ತೇನೆ ಪರೀಕ್ಷೆ ಮಾಡಿ ನೋಡಿ ಎಂದರು.
ಸಿದ್ದರಾಮಯ್ಯ ಸರಕಾರ 5 ವರ್ಷದಲ್ಲಿ 1 ಕೋಟಿ ಉದ್ಯೋಗ ನೀಡುವುದಾಗಿ ತಿಳಿಸಿತ್ತು. ಆದರೆ ಸರಕಾರಿ ಕಚೇರಿಗಳಲ್ಲೇ 2.5 ಲಕ್ಷ ಹುದ್ದೆಗಳು ಖಾಲಿಯಿವೆ. ಇದನ್ನು ತುಂಬುವ ಪ್ರಯತ್ನ ಮಾಡಿದ್ದರೆ 1 ಲಕ್ಷಕ್ಕೂ ಹೆಚ್ಚು ಎಸ್‍ಸಿ ಎಸ್‍ಟಿ ಕುಟುಂಬಗಳು ಉದ್ಯೋಗ ಪಡೆದುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದವು. ಮಲೆನಾಡಿನ ಯುವಜನತೆ ಬೇರೆಡೆಗೆ ಗುಳೆ ಹೋಗುವ ಪ್ರಸಂಗ ಎದುರಾಗುತ್ತಿರಲಿಲ್ಲ ಎಂದರು.
ಈ ಚುನಾವಣೆಯಲ್ಲಿ ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ 24 ಅಧಿಕಾರ ಸ್ವೀಕರಸಿದ 24 ಗಂಟೆಯೊಳಗೆ ರಾಜ್ಯದ ರೈತರ ಸಹಕಾರಿ ಸಂಸ್ಥೆ, ಮತ್ತು ರಾಷ್ಟ್ರೀಕತ ಬ್ಯಾಂಕ್‍ಗಳಲ್ಲಿ ಮಾಡಿರುವ ರೂ. 52,000 ಕೋಟಿ ಸಾಲವನ್ನು ಮನ್ನಾ ಮಾಡುತ್ತೇನೆ. ಸ್ತ್ರೀಶಕ್ತಿ ಸಂಘಗಳಲ್ಲಿ ಮಹಿಳೆಯರು ಮಾಡಿರುವ ರೂ.4,300 ಕೋಟಿ ಮನ್ನ ಮಾಡುತ್ತೇನೆ. 65 ವರ್ಷ ವಯಸ್ಸಾದ ಹಿರಿಯರಿಗೆ ಪ್ರತಿ ತಿಂಗಳು 5,000 ಪಿಂಚಣಿ ನೀಡುವುದು, ಗರ್ಬಿಣಿ ಸ್ತ್ರೀಯರಿಗೆ ರೂ. 36,000 ನೀಡುವ ಬಗ್ಗೆ ಪ್ರಣಾಳಿಕೆಯಲ್ಲಿ ಸೇರಿಸಿದ್ದೇನೆ. ಅಲ್ಲದೇ ರೈತರು ಒಂದು ಸಲ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ ಹೋದರೆ ಮನೆಬಾಗಿಲಿಗೆ ಸಂಬಂಧಿಸಿದ ದಾಖಲೆಗಳು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಅಭ್ಯರ್ಥಿ ಎಚ್.ಜಿ. ವೆಂಕಟೇಶ್ ಮಾತನಾಡಿ, ಕುಮಾರಸ್ವಾಮಿಯವರ ಆತ್ಮೀಯತೆ, ಅವರ ಚಿಂತನೆ ನಾನು ರಾಜಕೀಯ ಬರಲು ಪ್ರೇರಣೆ ನೀಡಿತು. ನಿಮ್ಮೆಲ್ಲರ ಒಮ್ಮತದ ತೀರ್ಮಾನದ ಮೇಲೆ ನನ್ನನ್ನು ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಜನಸಾಮಾನ್ಯರ ಧ್ವನಿಯಾಗಿ ಇರಲು ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯ. ನನ್ನ ತಂದೆಯವರು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಆದೇ ರೀತಿ ನಾನು ಸಹ ಶಾಸಕನಾಗಿ ಕೆಲಸ ಮಾಡುತ್ತೇನೆ ಎಂದರು.
ಬಿಎಸ್ಪಿಯ ಜಿಲ್ಲಾ ಸಂಚಾಲಕ ಕೆ.ಎಂ. ಗೋಪಾಲ್ ಮಾತನಾಡಿ, ಕರ್ನಾಟಕ ರೈತ ಸಮೂಹ ರಾಷ್ಟ್ರೀಯ ಪಕ್ಷಗಳ ವಿಶ್ವಾಸ ಕಳೆದುಕೊಂಡಿದ್ದಾರೆ. ಭರವಸೆ ಕಳೆದುಕೊಂಡಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸಾಲ ಮನ್ನಾ ಮಾಡುವ ಘೋಷಣೆಯ ಮೂಲಕ ರೈತರಿಗೆ ಭರವಸೆ ತುಂಬುವ ಕೆಲಸ ಕುಮಾರಸ್ವಾಮಿ ಮಾಡಿದ್ದಾರೆ. ಈವರೆಗೆ ಅಸಮರ್ಥರನ್ನು ಆರಿಸಿದ್ದೀರಿ. ಈ ಬಾರಿ ನಮ್ಮ ಸಮರ್ಥ ಅಭ್ಯರ್ಥಿ ಎಚ್.ಜಿ. ವೆಂಕಟೇಶ್‍ರನ್ನು ಗೆಲ್ಲಿಸಿ ಎಂದರು.
ಸಮಾವೇಶದಲ್ಲಿ ಪಕ್ಷದ ಮುಖಂಡರಾದ ಎಚ್.ಟಿ. ರಾಜೇಂದ್ರ, ಬಿ.ಎಚ್. ದಿವಾಕರ್, ವಸಂತಕುಮಾರ್, ಶರತ್ ಡಿ.ಕಲ್ಲೆ, ಕಣಿವೆ ವಿನಯ್, ಲೇಖಾ ವಸಂತ್, ಎಚ್.ಎಸ್.ಕಳಸಪ್ಪ, ಆಶಾ ಪೆರೀಸ್, ಮೈಮುನ್ನೀಸಾ ಮುಂತಾದವರಿದ್ದರು.
ಸಮಾವೇಶಕ್ಕೂ ಮುನ್ನ ಪಟ್ಟಣದ ಶ್ರೀವೀರಭದ್ರಸ್ವಾಮಿ ದೇವಸ್ಥಾನದಿಂದ ಕಾರ್ಯಕರ್ತರ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ನಡೆದಾಡಿದ ನೆಲ. ವಿಚಾರ ಕ್ರಾಂತಿಗೆ ಅಹ್ವಾನ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಯುವಕರಿಗೆ ಕರೆಕೊಟ್ಟಿದ್ದರು. ಆದರೆ ದುರಂತ ಮತ್ತು ಕ್ರೂರ ವ್ಯಂಗ್ಯವೆಂದರೆ ಕುವೆಂಪುರವರ ವಿಚಾರಕ್ರಾಂತಿಗೆ ಬೀಜಬಿತ್ತಿದ ಈ ನೆಲದಲ್ಲಿ ಮಲೆನಾಡಿನ ಯುವಕರಿಗೆ ಕೊಟ್ಟಿದ್ದ ಕರೆ ಮಂಕಾಗಿ ಮಸುಕಾಗಿ, ಕಡೆ ಗುಲಾಬಿಯ ತೋಟದಲ್ಲಿ ದತ್ತೂರಿ ಬೆಳೆ ಹುಟ್ಟಿದಂತ ವಿಪರ್ಯಾಸ ಈ ಕ್ಷೇತ್ರದಲ್ಲಿ ಕೆಲ ವರ್ಷಗಳಿಂದ ನಡೆಯುತ್ತಿದೆ. 2 ರಾಷ್ಟ್ರೀಯ ಪಕ್ಷಗಳ ಮಧ್ಯೆ ಒಂದು ಪ್ರಾದೇಶಿಕ ಪಕ್ಷದ ಸೆಣಸಾಟ ನಡೆಯುತ್ತಿದೆ. ಕರ್ನಾಟಕದ ಸಮೃದ್ಧ ಆಸ್ಮಿತೆ ಮತ್ತು ಸ್ವಾಭಿಮಾನವನ್ನು ಎತ್ತಿಹಿಡಿಯುವ ದಿಟ್ಟ ನಡೆಯ ರೂಪದಲ್ಲಿ ಎಚ್.ಡಿ. ಕುಮಾರಸ್ವಾಮಿಯವರು ನಮ್ಮೆಲ್ಲರ ಸಂಕೇತವಾಗಿದ್ದಾರೆ. ರೈತಾಪಿ ಜನರ ಗ್ರಾಮೀಣ ಜನರ ಗಟ್ಟಿ ದ್ವನಿಯಾಗಿದ್ದಾರೆ. ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ, ಸವಲತ್ತುಗಳು ಎರಡೂ ರಾಷ್ಟ್ರೀಯ ಪಕ್ಷಗಳಿಂದ ಸಿಕ್ಕಿಲ್ಲ. ಆದ್ದರಿಂದ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‍ನ್ನು ಬೆಂಬಲಿಸಬೇಕು. ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ ಆಗಬೇಕು. ಕ್ಷೇತ್ರದ ಅಭ್ಯರ್ಥಿ ಪ್ರಾಮಾಣಿಕ, ಪಾರದರ್ಶಕ ನಡವಳಕೆಯ ಎಚ್.ಜಿ. ವೆಂಕಟೇಶ್‍ರಂತವರನ್ನು ಗೆಲ್ಲಿಸಿ ಕಳುಹಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕಿದೆ.
-ವೈ ಎಸ್ ವಿ ದತ್ತ, ಕಡೂರು ಶಾಸಕ, ಜೆಡಿಎಸ್ ಅಭ್ಯರ್ಥಿ