ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಕೊಡಗು ಜಿಲ್ಲೆಗೆ ರಾಜ್ಯದಲ್ಲಿ 3 ನೇ ಸ್ಥಾನ

Update: 2018-04-30 18:27 GMT

ಮಡಿಕೇರಿ,ಎ.30: ಪ್ರಸಕ್ತ 2018ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶಗಳು ಪ್ರಕಟವಾಗಿದ್ದು, ಕೊಡಗು ಜಿಲ್ಲೆ ಶೇ.83.94 ಫಲಿತಾಂಶದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದು ಕೊಂಡಿದೆ.

ಪಿಯುಸಿ ಪರೀಕ್ಷೆಗೆ ಜಿಲ್ಲೆಯ ವಿವಿಧ ಕಾಲೇಜುಗಳ 3251 ಬಾಲಕಿಯರು, 2959 ಬಾಲಕರು ಸೇರಿದಂತೆ 6210 ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಶೇ.83.94 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 

ಕಳೆದ 2017 ನೇ ಸಾಲಿನಲ್ಲಿ ಕೊಡಗು ಶೇ.75.83 ಫಲಿತಾಂಶದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಪಡೆದಿದ್ದರೆ, ಈ ಬಾರಿಯೂ ಅದೇ ಸ್ಥಾನವನ್ನು ಉಳಿಸಿಕೊಂಡಿದೆ. ಆದರೆ ಶೇಕಡಾವಾರು ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ.

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಮಡಿಕೇರಿಯ ಸಂತ ಮೈಕೆಲರ ಶಾಲೆಯ ಗಗನ್ ಸಿ. 587 ಅಂಕ(ಶೇ.97.83)ಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾನೆ. 

ಸಂತ ಮೈಕಲರ ಪಿಯು ಕಾಲೇಜು: ಮಡಿಕೇರಿಯ ಸಂತ ಮೈಕೆಲರ ಶಾಲೆಯ 184 ವಿದ್ಯಾರ್ಥಿಗಳಲ್ಲಿ 183 ಮಂದಿ ಉತ್ತಿರ್ಣರಾಗುವ ಮೂಲಕ ಶೇ.99.45 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 83 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗ ಶೇ.100 ಫಲಿತಾಂಶದ ಸಾಧನೆ ಮಾಡಿದೆ. ಕಳೆದ 9 ವರ್ಷಗಳಿಂದ ಶಾಲೆ ವಾಣಿಜ್ಯ ವಿಭಾಗದಲ್ಲಿ ಜಿಲ್ಲಾ ಮಟ್ಟದಲ್ಲಿ ರ್ಯಾಂಕ್ ಪಡೆಯುತ್ತಿರುವುದು ವಿಶೇಷ.

ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜು: ವೀರಾಜಪೇಟೆ ಸಂತ ಅನ್ನಮ್ಮ ಪಿಯು ಕಾಲೇಜು ಪಿಯುಸಿ ಪರೀಕ್ಷೆಯಲ್ಲಿ ಶೇ. 95.46 ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 194 ಹಾಗೂ ವಿಜ್ಞಾನ ವಿಭಾಗದ 137 ಸೇರಿದಂತೆ ಒಟ್ಟು 331 ವಿದಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 316 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿ ಅಯ್ಯಪ್ಪ 577 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದರೆ, ವಾಣಿಜ್ಯ ವಿಭಾಗದ ದೇವಿಕ 576 ಅಂಕಗಳನ್ನು ಮತ್ತು ವಿಜ್ಞಾನ ವಿಭಾಗದಲ್ಲಿ ಅನುಷ 573 ಅಂಕಗಳನ್ನು ಪಡೆದು ಆಯಾ ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ನಿಧಿ 560 ಅಂಕಗಳನ್ನು ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 67 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 196 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 43 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಂತಮೇರಿ: ಸುಂಟಿಕೊಪ್ಪದ ಸಂತಮೇರಿ ಆಂಗ್ಲ ಮಾಧ್ಯಮ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ಶೇ.95.45 ಫಲಿತಾಂಶವನ್ನು ಪಡೆದು ಕೊಂಡಿದೆ.

ಸಂತಮೇರಿ ಆಂಗ್ಲ ಮಾಧ್ಯಮ ಪದವಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಒಟ್ಟು 22 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು 5 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಶಾಲಾ ವ್ಯವಸ್ಥಾಪಕರಾದ ಫಾದರ್ ಎಡ್ವರ್ಡ್ ವಿಲಿಯಂ ಸಲ್ಡಾನ ಮಕ್ಕಳ ಸಾಧನೆಗೆ ಅಭಿನಂದನೆ ವ್ಯಕ್ತಪಡಿಸಿದ್ದಾರೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News