ಜೆಡಿಎಸ್, ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ : ಡಿ.ಕೆ ಶಿವಕುಮಾರ್
ಮಂಡ್ಯ, ಎ.30: ಶ್ರೀರಂಗಪಟ್ಟಣ ಕ್ಷೇತ್ರದ ಯಲಿಯೂರು, ಸುಂಡಹಳ್ಳಿ, ಸಿದ್ದಯ್ಯನಕೊಪ್ಪಲು, ಇಂಡುವಾಳು ಸೇರಿದಂತೆ ಹಲವೆಡೆ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಯಾವುದೇ ಕಾರಣಕ್ಕೂ ಜೆಡಿಎಸ್, ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲವೆಂದರು.
ದೇವೇಗೌಡರನ್ನು ನಾವು ಪ್ರಧಾನಮಂತ್ರಿ ಮಾಡಿದ್ದೆವು. ಅಂದು ಜೆಡಿಎಸ್‍ನಲ್ಲಿ ಇದ್ದವರು ಇಂದು ಕಾಂಗ್ರೆಸ್ ಸೇರಿದ್ದಾರೆ ಅಂದರೆ ಆ ಪಕ್ಷದಲ್ಲಿ ಏನೋ ತೊಂದರೆ ಇದೆ ಎಂದು ಅವರು ಲೇವಡಿ ಮಾಡಿದರು.
ಜೆಡಿಎಸ್‍ಗೆ ನಾಯಕತ್ವದ ಕೊರತೆ ಇದೆ. ಅದು ದೂರದೃಷ್ಟಿ ಇಲ್ಲದ ಪಕ್ಷ. ಜೆಡಿಎಸ್‍ಗೆ ಅಭ್ಯರ್ಥಿಗಳಿಲ್ಲದೆ ನಮ್ಮ ಪಕ್ಷದವರನ್ನು ಕರೆದು ಟಿಕೆಟ್ ಕೊಟ್ಟಿದ್ದಾರೆ. ಇವರು ಅಧಿಕಾರ ಹಿಡಿಯಲು ಸಾಧ್ಯವೆ? ಜೆಡಿಎಸ್ ಅಭ್ಯರ್ಥಿಗೆ ಅನುಕಂಪವೇ ಇಲ್ಲ ಎಂದರು.
ಇನ್ನು ತಮ್ಮ ಮಗನಿಗೆ ಟಿಕೆಟ್ ಪಡೆಯಲು ಸಾಧ್ಯವೇ ಆಗದ ಯಡಿಯೂರಪ್ಪ ಅಧಿಕಾರ ಗಳಿಸಲು ಸಾಧ್ಯವೆ ಎಂದ ಅವರು, ಭವಿಷ್ಯ ಕಾಣಬೇಕಾದರೆ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.
ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ, ಹಾಸ್ಯನಟ ಸಾಧುಕೋಕಿಲ, ಜಿಪಂ ಸದಸ್ಯ ತೂಬಿನಕೆರೆ ರಾಮಲಿಂಗಯ್ಯ, ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ, ಇತರ ಮುಖಂಡರು ಹಾಜರಿದ್ದರು.