ಕರ್ನಾಟಕದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ : ಮೋದಿ
ಮೈಸೂರು, ಮೇ 1: ಕರ್ನಾಟಕದಲ್ಲಿಬದಲಾವಣೆಯ ಗಾಳಿ ಬೀಸುತ್ತಿದೆ ಎಂಬ ಸುದ್ದಿ ಕೇಳಿದ್ದೆ. ಆದರೆ ಇಲ್ಲಿ ಬಂದು ನೋಡಿದಾಗ ಗೊತ್ತಾಯಿತು.ಇಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿದೆ '' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂತೇಮರಳ್ಳಿಯಲ್ಲಿ ಬಿಜೆಪಿಯ ಚುನಾವಣಾ ರ್‍ಯಾಲಿ ಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕದಲ್ಲಿ ಎದ್ದಿರುವುದು ಬಿಜೆಪಿ ಅಲೆಯಲ್ಲ, ಬಿರುಗಾಳಿ ಎಂದರು.
ಎಲ್ಲ ಗ್ರಾಮಗಳಿಗೂ ವಿದ್ಯುತ್ ನೀಡುವ ಕೇಂದ್ರದ ಯೋಜನೆ ಈಡೇರಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಲಾಗಿದೆ. ನಮ್ಮ ಅವಧಿಯಲ್ಲೇ 4 ಕೋಟಿ ಮನೆಗಳಿಗೆ ವಿದ್ಯುತ್ ನೀಡಲಿದ್ದೇವೆ ಎಂದು ಹೇಳಿದರು
2014ರಲ್ಲಿ ಕರ್ನಾಟಕದ 39 ಹಳ್ಳಿಗಳಲ್ಲಿ ವಿದ್ಯುತ್ ಇರಲಿಲ್ಲ. ನಮ್ಮ ಯೋಜನೆಗಳಿಂದ ವಿದ್ಯುತ್ ತಲುಪಿದೆ ಎಂದರು.
ಇಂದಿನ ಕಾಂಗ್ರೆಸ್ ಅಧ್ಯಕ್ಷರಿಗೆ ದೇಶದ ಇತಿಹಾಸ ಗೊತ್ತಿಲ್ಲ. ವಂದೇ ಮಾತರಂಗೆ ಗೌರವ ಕೊಡಲು ಗೊತ್ತಿಲ್ಲ . ಕಾಂಗ್ರೆಸ್ ನ ಕುಟುಂಬ ರಾಜಕಾರಣದಿಂದ ಸಮಾಜ ಹಾಳಾಗಿದೆ. ದೇಶವನ್ನು , ಪ್ರಜಾಪ್ರಭುತ್ವವನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದರು
ಕರ್ನಾಟಕ ಕಾಂಗ್ರೆಸ್ ನಲ್ಲಿ ಮುಖ್ಯ ಮಂತ್ರಿಗೆ 2+1 ಮತ್ತು ಸಚಿವರಿಗೆ 1+1 ಸೂತ್ರ ಜಾರಿಯಲ್ಲಿದೆ. ಮುಖ್ಯ ಮಂತ್ರಿ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ಮಗ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ತಮ್ಮ ಮೂಲ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಅವರನ್ನೂ ಬಲಿಕೊಡುತಿದ್ದಾರೆ. ಕೆಲವು ಸಚಿವರುಗಳಿಗೆ ಮತ್ತು ಅವರ ಮಕ್ಕಳಿಗೆ ತಲಾ 1 ಟಿಕೆಟ್ ನೀಡಲಾಗಿದೆ ಎಂದು ಲೇವಡಿ ಮಾಡಿದರು.