ಮೋದಿಯನ್ನು ಪ್ರಶ್ನಿಸಲು ಸಿದ್ದರಾಮಯ್ಯನಿಗೆ ಏನು ಯೋಗ್ಯತೆ ಇದೆ: ಯಡಿಯೂರಪ್ಪ
ಮೈಸೂರು,ಮೇ.1: 'ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಲು ಅವನು ಯಾರು ? ಯಾವನ್ ರೀ ಸಿಎಂ, ಅವನೀಗೇನು ಯೋಗ್ಯತೆ ಇದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರಿಗೆ ಪಂಚ ಪ್ರಶ್ನೆಗಳ ವಿಚಾರಕ್ಕೆ ಗರಂ ಆಗಿ ಏಕವಚನದಲ್ಲೇ ಉತ್ತರಿಸಿದ ಯಡಿಯೂರಪ್ಪ, ಯಾವನ್ ರೀ ಅವನು ಸಿಎಂ ? ಪ್ರಧಾನಿಯನ್ನು ಪ್ರಶ್ನೆ ಮಾಡುವುದಕ್ಕೆ ಅವನಿಗೇನು ಯೋಗ್ಯತೆ ಇದೆ ? ತಾನೇ ನಿಂತ ನೆಲ ಕುಸಿದು ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಓಡಿ ಹೋಗುತ್ತಿರುವ ಮನುಷ್ಯ. ಟ್ವಿಟ್ಟರ್ ಬಿಟ್ಟು, ನೀವು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರೂ ಒಟ್ಟಿಗೆ ಪ್ರವಾಸ ಮಾಡಿ ನೋಡೋಣ. ನಿಮ್ಮ ಪಾರ್ಟಿ ಒಡೆದ ಮನೆಯಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದೆ ಛಿದ್ರವಾಗಿದೆ. ಒಬ್ಬಂಟಿಗನಾಗಿ ಅಲೆಯುತ್ತಿರುವ ಸಿದ್ದರಾಮಯ್ಯನಿಗೆ ಪ್ರಧಾನಿಯನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ. ನಾಚಿಕೆಯಾಗಬೇಕು ಅವರ ನಡವಳಿಕೆಗೆ ಎಂದು ಸಿಎಂ ವಿರುದ್ಧ ಬಿಎಸ್‍ವೈ ಹರಿಹಾಯ್ದರು.
ರಾಹುಲ್ ಗಾಂಧಿ ಅವರನ್ನ ಕರೆದುಕೊಂಡ ಬರಬೇಕು. ಇನ್ನೂ ಹುಚ್ಚುಚ್ಚಾಗಿ ಮಾತನಾಡಬೇಕು. ಅವಾಗ ನಮ್ಮ ಗೆಲುವಿಗೆ ಅನುಕೂಲವಾಗುತ್ತದೆ. ಅವರು ದೇಶದಲ್ಲಿ ಎಲ್ಲೇ ಪ್ರವಾಸ ಮಾಡಿದರೂ ಚುನಾವಣೆ ಗೆಲ್ಲಲು ಆಗಲಿಲ್ಲ. ಕರ್ನಾಟಕದಲ್ಲೂ ದಯನೀಯ ಸೋಲು ಅನುಭವಿಸುತ್ತಾರೆ. ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ, ಕರ್ನಾಟಕ ಮುಕ್ತ ಕಾಂಗ್ರೆಸ್ ಆಗಬೇಕು. ರಾಹುಲ್ ಗಾಂಧಿ ಬಂದರೆ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಮುಕ್ತ ಕರ್ನಾಟಕವಾಗುತ್ತದೆ. ನಾನು ಮೇ.17 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಬಿಎಸ್‍ವೈ ಪುನರುಚ್ಚರಿಸಿದರು.