ಕಾರ್ಮಿಕ ವರ್ಗ ಒಂದಾದರೆ ಕೋಮುವಾದಿ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಮಣಿಸಬಹುದು: ಡಿ.ಎ. ವಿಜಯ ಭಾಸ್ಕರ್
ದಾವಣಗೆರೆ,ಮೇ.01: ಕಾರ್ಮಿಕ ವರ್ಗ ಒಂದಾದರೆ ಕೋಮುವಾದಿ ಬಿಜೆಪಿಯನ್ನು ಈ ಚುನಾವಣೆಯಲ್ಲಿ ಮಣಿಸಬಹುದು ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಡಿ.ಎ. ವಿಜಯ ಭಾಸ್ಕರ್ ಕರೆ ನೀಡಿದರು.
ಇಲ್ಲಿನ ಜಯದೇವ ವೃತ್ತದ ಭಾರತ ಕಮ್ಯೂನಿಸ್ಟ್ ಪಕ್ಷ, ಎಐಟಿಯುಸಿ ಜಿಲ್ಲಾ ಮಂಡಳಿ ವತಿಯಿಂದ ಆಯೋಜಿಸಿದ್ದ ಮೇ ದಿನಾಚರಣೆ, ಹುತಾತ್ಮರ 48ನೇ ವಾರ್ಷಿಕೋತ್ಸವದ ಬಹಿರಂಗ ಸಭೆಯನ್ನು ಕಂಜುರಾ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೆ ಬಂದ ಮೋದಿ, ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ. ರೈತ ಉತ್ಪನ್ನ ಬೆಳೆಯಲು ವಿನಿಯೋಗಿಸಿದ ಬಂಡವಾಳದ ಮೇಲೆ ಒಂದೂವರೆ ಪಟ್ಟು ಹಣ ಸೇರಿಸಿ ವೈಜ್ಞಾನಿಕ ಬೆಂಬಲ ಬೆಲೆಯೂ ನೀಡಲಿಲ್ಲ. ಆದರೆ, ಅವರು ಅಧಿಕಾರಕ್ಕೆ ಬಂದಾಕ್ಷಣ ಕಾರ್ಮಿಕರ ಹಕ್ಕು ಸರ್ವನಾಶ ಮಾಡಲು ಮುನ್ನುಡಿ ಬರೆದರು ಎಂದು ದೂರಿದರು.
ದಾರ್ಶನಿಕರ ನಾಡಿನಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕುತಂತ್ರ ಯಶಸ್ಸು ಮಾಡಲು ದುಡಿಯುವ ವರ್ಗದ ಜನತೆ ಎಂದೂ ಬಿಡಲ್ಲ ಎಂಬುದನ್ನು ಸಾರಿ ಹೇಳಲು, ಈ ಚುನಾವಣೆಯಲ್ಲಿ ಕೋಮುಶಕ್ತಿಗಳಿಗೆ ಆಸ್ಪದ ನೀಡದಂತೆ ಕಾಂಗ್ರೆಸ್ ಬೆಂಬಲಿಸಬೇಕು ಎಂದರು.
ಮೋದಿಯ ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಅಂಗನವಾಡಿ, ಬಿಸಿಯೂಟ ಸೇರಿದಂತೆ ಸ್ಕೀಂ ವರ್ಕರ್ಸ್‍ಗಳಿಗೆ ಕೇಂದ್ರದಿಂದ ಕೊಡ ಮಾಡುತ್ತಿದ್ದ ವೇತನಾನುದಾನ ಕಡಿತಗೊಳಿಸಿದರು. ಗ್ರಾಮೀಣರಿಗೆ ಉದ್ಯೋಗ ಕೊಡಲು ಇರುವ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ನಾಶ ಮಾಡಲು ಮುಂದಣಿ ಇಟ್ಟರು ಎಂದು ದೂರಿದರು.
ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಗುಣಶೇಖರನ್ ಮಾತನಾಡಿ, ದುಡಿಯುವ ವರ್ಗ ವಿರೋಚಿತ ಹೋರಾಟದ ಫಲವಾಗಿ ಕೆಲ ಹಕ್ಕು ಪಡೆದಿದ್ದರೂ. ಅವು ಕೇವಲ ಶೇ. 10ರಷ್ಟು ಕಾರ್ಮಿಕರಿಗೆ ಮಾತ್ರ ಸಿಗುತ್ತಿವೆ. ಇನ್ನುಳಿದ ಶೇ. 90ರಷ್ಟು ಕಾರ್ಮಿಕರಿಗೆ ಯಾವುದೇ ಹಕ್ಕುಗಳು ಸಿಗದೇ ಕಾಂಟ್ರಾಕ್ಟರ್ ಪದ್ಧತಿಯಲ್ಲಿ ಕೆಲಸಕ್ಕೆ ಸೇರಿ ಗುಲಾಮರಾಗಿದ್ದಾರೆ. ಮೋದಿ ಸರ್ಕಾರ ಕಾರ್ಪೋರೇಟ್‍ಶಾಹಿಗಳಿಗೆ ದೇಶವನ್ನು ಮಾರಾಟಕ್ಕೆ ಇಟ್ಟಿರುವ ಕಾರಣದಿಂದಲೇ ಮಾಲೀಕರು ಕಾರ್ಮಿಕರ ಮೇಲೆ ಶೋಷಣೆ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದರು.
ಎಐಟಿಯುಸಿ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಮಾತನಾಡಿ, ಜಾತಿ-ಭಾಷೆ-ಧರ್ಮ ಬದಿಗೊತ್ತಿ ದುಡಿಯುವ ವರ್ಗದ ಜನರಪರವಾಗಿ ಹೋರಾಟ ಮಾಡುತ್ತಿರುವುದು ಯಾವುದಾದರು ಪಕ್ಷಗಳಿದ್ದರೆ ಅವು ಸಿಪಿಐ ಸೇರಿದಂತೆ ಎಡ ಪಕ್ಷಗಳು ಮಾತ್ರ. ಕಾರ್ಮಿಕ ವರ್ಗದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ, ಸಮಾಜವಾದ ತಂದೇ ತರುತ್ತೇವೆಂಬ ಸಂಕಲ್ಪ ಎಲ್ಲರೂ ಮಾಡಬೇಕೆಂದರು.
ಬಹಿರಂಗ ಸಭೆಗೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮೇ ದಿನಾಚರಣೆಯ ಮೆರವಣಿಗೆ ನಡೆಸಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ಆನಂದರಾಜ್, ತಾಲೂಕು ಅಧ್ಯಕ್ಷ ಟಿ.ಎಸ್.ನಾಗರಾಜ, ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ್, ಎಂ.ಬಿ. ಶಾರದಮ್ಮ, ಟಿ.ಹೆಚ್.ನಾಗರಾಜ್, ಮಹಮದ್ ಭಾಷಾ, ಗುಡಿಹಳ್ಳಿ ಹಾಲೇಶ್, ಐರಣಿ ಚಂದ್ರು, ಪರಮೇಶಪ್ಪ, ವಿ.ಲಕ್ಷ್ಮಣ್, ಅರುಣ್, ಸಿ.ಜಯಣ್ಣ, ರುದ್ರಮ್ಮ ಬೆಳಲಗೆರೆ, ನಿಂಗಮ್ಮ, ದಾದಾಪೀರ್, ಟಿ.ಕೆ.ಲಕ್ಷ್ಮಣ ನಾಯ್ಕ, ಆವರಗೆರೆ ವಾಸು ಇದ್ದರು.