ದಾವಣಗೆರೆ: ಮೇ 3, 4 ರಂದು ಸಿಎಂ ಸಿದ್ದರಾಮಯ್ಯ ಚುನಾವಣಾ ಪ್ರಚಾರ
ದಾವಣಗೆರೆ,ಮೇ.01: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಮೇ 3 ಹಾಗೂ 4 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 3ರಂದು ಬೆಳಿಗ್ಗೆ 11ಕ್ಕೆ ಹರಿಹರದ ಗಾಂಧಿ ಮೈದಾನದಲ್ಲಿ ಪ್ರಚಾರ ಸಭೆ ನಡೆಸುವರು. ಮಧ್ಯಾಹ್ನ 1.30ಕ್ಕೆ ಮಾಯಕೊಂಡ ಸರಕಾರಿ ಹೈಸ್ಕೂಲ್ ಮೈದಾನದಲ್ಲಿ ಪ್ರಚಾರ ನಡೆಸುವರು. ಮೇ 4ರಂದು ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.
ಜಗಳೂರು ಕ್ಷೇತ್ರದ ಪುಷ್ಪಾ ಲಕ್ಷ್ಮಣಸ್ವಾಮಿ ಮನವೊಲಿಕೆಗೆ ಯತ್ನಿಸಿದರೂ ಸಫಲವಾಗಿಲ್ಲ. ಈ ಕುರಿತು ಬ್ಲಾಕ್ ಅಧ್ಯಕ್ಷರಿಂದ ವರದಿ ತರಿಸಿಕೊಳ್ಳಲಾಗುತ್ತಿದ್ದು, ವರದಿ ನಂತರ ಈ ಕುರಿತು ವರಿಷ್ಠರಿಗೆ ವರದಿ ನೀಡಿ, ಪುಷ್ಪಾ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.
ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೇಟ್ ಕೇಳಿದ್ದೆ. ಆದರೆ, ವರಿಷ್ಠರ, ಜಿಲ್ಲಾ ಮುಖಂಡರ ಸೂಚನೆ ಮೆರೆಗೆ ಹಿಂದೆ ಸರಿದು, ಈಗ ಪಕ್ಷದ ಅಭ್ಯರ್ಥಿಗಳ ಪರ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಎಲ್ಲಾ ಎಂಟೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದಿನೇಶ್ ಶೆಟ್ಟಿ, ಅಯೂಬ್ ಪೈಲ್ವಾನ್, ಮುತ್ತಣ್ಣ, ಮುಜಾಹಿದ್, ನಾಗರಾಜ್, ಖಾಲೀದ್, ಇಮ್ತಿಯಾಜ್, ಯುವರಾಜ್ ಸೈಯದ್ ತೋಫಿನ್, ಸಂದೀಪ್ ಮತ್ತಿತರರಿದ್ದರು.