×
Ad

ಚಿಕ್ಕಮಗಳೂರು: ವಿ.ಆರ್.ಎಲ್ ಗೋದಾಮಿನಲ್ಲಿ ಸೀರೆಗಳ ಬಂಡಲ್ ಪ್ರಕರಣ; ಸಮಗ್ರ ತನಿಖೆಗೆ ಕಾಂಗ್ರೆಸ್ ಒತ್ತಾಯ

Update: 2018-05-01 22:34 IST

ಚಿಕ್ಕಮಗಳೂರು, ಮೇ 1: ಸೋಮವಾರ ಖಾಸಗಿ ಕಂಪನಿಯ ಗೋದಾಮಿನಲ್ಲಿ ಸಿಕ್ಕ ಸೀರೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್ ಒತ್ತಾಯಿಸಿದರು. 

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 9ರಂದು ನಡೆಯಲಿರುವ ಪ್ರಧಾನಿ ಮೋದಿಯವರ ಪ್ರಚಾರ ಕಾರ್ಯಕ್ರಮಕ್ಕೆ ಸೀರೆಗಳನ್ನು ಗುಜರಾತ್‍ನಿಂದ ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ, ಬಟ್ಟೆ ಅಂಗಡಿಯ ಮಾಲೀಕರೇ ಈ ಸೀರೆಗಳನ್ನು ತರಿಸಿದ್ದಾರೆಯೇ ಅಥವಾ ರಾಜಕೀಯ ಪಕ್ಷದವರು ಸೀರೆಗಳನ್ನು ತರಿಸಿದ್ದಾರೆಯೇ ಎಂಬುದನ್ನು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಬಟ್ಟೆ ಅಂಗಡಿಯ ಮಾಲೀಕರೊಬ್ಬರು ಸೀರೆಗಳನ್ನು ತರಿಸಿದ್ದಾರೆ ಎಂದು ಕತೆ ಕಟ್ಟಲಾಗುತ್ತಿದೆ. ಬಟ್ಟೆ ಅಂಗಡಿಯ ಮಾಲಿಕರು ಒಂದೇ ಮಾದರಿಗೆ, ಒಂದೇ ಬೆಲೆಯ ಸೀರೆಗಳನ್ನು ಇಷ್ಟೊಂದು ಪ್ರಮಾಣದಲ್ಲಿ ತರಿಸಲು ಸಾಧ್ಯವಿಲ್ಲ. ಅಂಗಡಿ ಮಾಲಕರು ಎರಡು ವರ್ಷಗಳಿಂದ ಈ ಗುಣಮಟ್ಟದ ಸೀರೆಗಳನ್ನು ತರಿಸಿದ್ದಾರೆಯೋ ಎಂಬುದನ್ನು ತನಿಖೆ ಮಾಡಬೇಕು ಎಂದರು.

ಸಿ.ಟಿ.ರವಿಯವರು ಸೀರೆ ವಿಚಾರದಲ್ಲಿ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ ಅವರು, ಮತದಾರರಿಗೆ ಆಮಿಷ ಒಡ್ಡಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನ್ಯಮಾರ್ಗದಲ್ಲಿ ಹಣ, ಹೆಂಡ ಹಂಚುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅಕ್ರಮ ಚಟುವಟಿಕೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಸಿ.ಟಿ.ರವಿಯವರು ಸ್ವಯಂ ಘೋಷಿತವಾಗಿ ನಾನೊಬ್ಬ ರಾಜ್ಯ ನಾಯಕ ಎಂದು ಬಿಂಬಿಸಿಕೊಂಡು ಸಿ.ಎಂ. ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಾ.ಜಿ. ಪರಮೇಶ್ವರ್ ವಿರುದ್ಧ ಹೇಳಿಕೆ ನೀಡುತ್ತಿದ್ದರು. ಈಗ ಪಕ್ಕದ ಕ್ಷೇತ್ರಕ್ಕೆ ಹೋಗಿ ಮತಯಾಚನೆ ಮಾಡಲು ಅವರಿಗೆ ಆಗುತ್ತಿಲ್ಲ. ಜನರ ಎದುರು ಹೋಗಲು ಮುಖವಿಲ್ಲದಂತಾಗಿದೆ. ತಮ್ಮ ಕ್ಷೇತ್ರದಲ್ಲಿಯೇ ತಮ್ಮ ಪತ್ನಿ ಹಾಗೂ ಸಂಬಂಧಿಕರೊಂದಿಗೆ ರಾತ್ರಿ ವೇಳೆಯಲ್ಲಿ ಮಾತಯಾಚನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಳೆದ ಬಾರಿ ಚುನಾವಣೆಯಲ್ಲಿ ರವಿಕಿರಣ ಎಂಬ ಪುಸ್ತಕವನ್ನು ಹೊರ ತಂದಿದ್ದರು. ಈ ಬಾರಿ ಉದಯರವಿ ಎಂಬ ಪುಸ್ತಕ ಹೊರ ತಂದಿದ್ದಾರೆ. ಪುಸ್ತಕದಲ್ಲಿ ಸಿ.ಎಂ.ಕಾರ್ಯಕ್ರಮಗಳನ್ನು ಅನಿಲ ಭಾಗ್ಯವನ್ನು ತಾವೇ ತಂದಿದ್ದು ಎಂದು ಬರೆದುಕೊಂಡಿದ್ದಾರೆ. ಎಂ.ಜಿ.ರಸ್ತೆ ಹಿಂದೆ ಹೇಗಿತ್ತು, ಈಗ ಹೇಗಿದೆ ಎಂದು ಪೋಟೋ ಹಾಕಿಕೊಂಡಿದ್ದಾರೆ. ಅವರಿಗೆ ನಾಚೀಕೆಯಾಗಬೇಕು ಎಂದರು.

ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಸಿ.ಎಸ್. ಅಕ್ಮಲ್, ಮಲ್ಲೇಸ್ವಾಮಿ, ಕಾರ್ತಿಕ್, ಹೊನ್ನೇಶ್, ಶಿವಕುಮಾರ್, ರೂಬಿನ್ ಮೋಸೆಸ್ ಸೇರಿದಂತೆ ಅನೇಕರು ಇದ್ದರು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜೋಹರ್ ಅಂಜಮನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆಯಲ್ಲಿರುವುದರಿಂದ ಕಾಂಗ್ರೆಸ್ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.
-ಮಂಜೇಗೌಡ, ಕಾಂಗ್ರೆಸ್ ಮುಖಂಡ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News