×
Ad

ಶಾಸಕ ಸಿಟಿ ರವಿಯಿಂದ ಚುನಾವಣೆ ಗೆಲ್ಲಲು ಮತದಾರರಿಗೆ ಸೀರೆ ಆಮಿಷ: ಎಚ್.ಎಚ್.ದೇವರಾಜ್ ಆರೋಪ

Update: 2018-05-01 22:38 IST

ಚಿಕ್ಕಮಗಳೂರು, ಮೇ 1: ಜಿಲ್ಲೆಯಲ್ಲಿ ಈ ಬಾರಿ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುವುದು ಹುಸಿಯಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್. ಹೆಚ್. ದೇವರಾಜ್  ಹೇಳಿದರು. 

ನಗರದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಸಿ.ಟಿ.ರವಿ ಸೋಲಿನ ಹತಾಶೆಯಿಂದ ಅನ್ಯಮಾರ್ಗ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಕೈಗೊಂಡರು ಸಹ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಚುನಾವಣಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.

ಶಾಸಕ ಸಿ.ಟಿ.ರವಿ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮತದಾರರಿಗೆ ಹಣ, ಹೆಂಡ ಹಂಚುತ್ತಿದ್ದಾರೆ. ಸೋಮವಾರ ಖಾಸಗಿ ಸರಕು ಸಾಗಣೆ ಸಂಸ್ಥೆಗೆ ಬಂಡಲ್‍ಗಟ್ಟಲೇ ಸೀರೆಗಳು ಬಂದಿದ್ದು, ಪ್ರಧಾನಿ ಮೋದಿ ಜಿಲ್ಲೆಗೆ ಆಗಮಿಸುತ್ತಿದ್ದು, ಕಾರ್ಯಕ್ರಮಕ್ಕೆ ಹಂಚಲು ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸ್ ಇಲಾಖೆ ರಾಜಕೀಯ ಪಕ್ಷವೊಂದು ತರಿಸಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದು ಯಾವ ರಾಜಕೀಯ ಪಕ್ಷ ಎಂದು ಬಹಿರಂಗಪಡಿಸಬೇಕು ಹಾಗೂ ಹಣ, ಹೆಂಡವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಗೆ ಸಂಪರ್ಕ ಕಲ್ಪಿಸುವ ವಾಹನಗಳನ್ನು ಚೆಕ್‍ಪೋಸ್ಟ್‍ನಲ್ಲಿ ಸರಿಯಾಗಿ ತಪಾಸಣೆ ನಡೆಸುತ್ತಿಲ್ಲ, ಸಿ.ಟಿ.ರವಿಯವರ ಸಂಬಂಧಿಯೊಬ್ಬರ ಕಾರು ನಗರದಲ್ಲಿ ಗುಪ್ತಗಾಮಿನಿಯಂತೆ ಓಡಾಡುತ್ತಿದ್ದು, ಕಾರನ್ನು ತಪಾಸಣೆಗೆ ಒಳಪಡಿಸದಿರುವುದು ಚುನಾವಣಾಧಿಕಾರಿಗಳು ಅಕ್ರಮಗಳಿಗೆ ಬೆಂಬಲಿಸುವ ಅನುಮಾನ ಮೂಡುತ್ತಿದೆ ಎಂದು ದೂರಿದರು.

ಬಂಡಲ್‍ಗಟ್ಟಲೆ ಸೀರೆಗಳನ್ನು ಹಂಚಲು ತರಿಸಿದ್ದಾರೆ. ಅದು 80ರೂ. ಮೌಲ್ಯದಾಗಿದ್ದು, ಇಂತಹ ಸೀರೆಗಳನ್ನು ಅವರ ಹೆಂಡತಿ, ಮಕ್ಕಳಿಗೆ ಉಡಿಸಲಿ ಎಂದು ಲೇವಡಿ ಮಾಡಿದ ಅವರು, ನೈತಿಕತೆ, ಕಾರ್ಯಕ್ರಮದ ಆಧಾರದ ಮೇಲೆ ಮತ ಕೇಳಲಿ, ಅದನ್ನು ಬಿಟ್ಟು ಇಂತಹ ಅನ್ಯಮಾರ್ಗ ಅನುಸರಿಸುತ್ತಿರುವುದು ನಾಚೀಕೆಗೇಡಿನ ಸಂಗತಿ ಎಂದರು. 

ಹಣ, ಹೆಂಡ ಹಂಚಿ ಗೆಲುವು ಸಾಧಿಸಲು ಸಾಧ್ಯವಿಲ್ಲ, ಈ ಬಾರಿ ನಡೆಯುವ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಹಣಾಹಣಿ ನಡೆಯಲಿದೆ. ಪ್ರಾದೇಶಿಕ ಪಕ್ಷದ ಕಡೆ ಜನರು ಮುಖ ಮಾಡಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಜೆಡಿಎಸ್ ಪಕ್ಷದಿಂದ ದೂರು ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಜಮೀರ್ ಅಹಮದ್, ಮಂಜಪ್ಪ, ಎಂ.ಡಿ. ರಮೇಶ್ ಇದ್ದರು. 

ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯುಕ್ತರು ಕೇಂದ್ರ ಸರ್ಕಾರದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಚುನಾವಣಾಧಿಕಾರಿಗಳು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಹೀಗಾದರೇ ಯಾರಿಗೆ ದೂರು ನೀಡುವುದು ಎಂದು ಅಸಮಾಧಾನ ವ್ಯಕ್ತಪಡಿಸಿದ ಹೆಚ್. ಹೆಚ್. ದೇವರಾಜ್, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ ಪೊಲೀಸ್ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಲಾಗುವುದು. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ

- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ.

ಬಿಜೆಪಿಗರು ಕೀಳುಮಟ್ಟದ ಹೇಳಿಕೆ ನೀಡುವುದನ್ನು ನಿಲ್ಲಿಸಿ: ಜೆಡಿಎಸ್ ಅಭ್ಯರ್ಥಿ ಬಿ.ಹೆಚ್. ಹರೀಶ್ 20 ಕೋಟಿಗೆ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಹಾಗಾದರೇ ಕೊಂಡುಕೊಂಡವರು ಯಾರು ಎಂದು ಹೇಳಿ. ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುವುದನ್ನು ಬಿಜೆಪಿಗರು ನಿಲ್ಲಿಸಿ.
- ಎಚ್.ಎಚ್. ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News