ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಡಾ.ರಫೀಕ್ ಅಹಮದ್ ಚುನಾವಣಾ ಪ್ರಚಾರ
ತುಮಕೂರು.ಮೇ.01: ತುಮಕೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಡಾ.ರಫೀಕ್ ಅಹಮದ್ ಮಂಗಳವಾರ ವಾರ್ಡ್ ನಂ 34-35ರಲ್ಲಿ ಚುನಾವಣೆ ಪ್ರಚಾರ ನಡೆಸಿದರು.
ಮೊದಲಿಗೆ ಕ್ಯಾತ್ಸಂದ್ರದಲ್ಲಿರುವ ಶ್ರೀಚಂದ್ರಮೌಳೀಶ್ವರ ದೇವಾಲಯಕ್ಕೆ ಕಾಂಗ್ರೆಸ್‍ನ ಸ್ಥಳೀಯ ಮುಖಂಡರಾದ ಆನಂದಪ್ಪ, ಜಯರಾಮು,ಮಾಜಿ ಮೇಯರ್ ಹಾಗೂ ಹಾಲಿ ಪಾಲಿಕೆ ಸದಸ್ಯರಾದ ಯಶೋಧ ಶ್ರೀನಿವಾಸ್, ಉಪಮೇಯರ್ ಧನಲಕ್ಷ್ಮಿ ರವಿ,ಕಲ್ಲಹಳ್ಳಿ ದೇವರಾಜು, ಮಾಜಿ ವಕ್ಫ್ ಬೋರ್ಡ ಅಧ್ಯಕ್ಷ ನಯಾಜ್, ಯಾಸ್ಮಿನ್ ತಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಟೋ ರಾಜು, ಮೈದಾಳ ಗ್ರಾಪಂ ಮಾಜಿ ಅಧ್ಯಕ್ಷ ಮೂರ್ತಿ, ಲಕ್ಷ್ಮಿಕಾಂತ್, ಗೀತಮ್ಮ, ವೇಣುಗೋಪಾಲ್ ಮತ್ತಿತರರೊಂದಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಕ್ಯಾತ್ಸಂದ್ರದ ಪೇಟೆ ಬೀದಿ, ನರಸಿಂಹರಾಜ ಕಾಲೋನಿ, ಅಂಬೇಡ್ಕರ್ ಕಾಲೋನಿ, ಬಸವೇಶ್ವರ ನಗರ, ಚಂದ್ರಮೌಳೇಶ್ವರ ಬಡಾವಣೆ,ಮೈದಾಳ ರಸ್ತೆಯ ಹೊಸ ಬಡಾವಣೆಗಳ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ತಿಳಿಸಿ, ಮತಯಾಚನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ಡಾ.ರಫೀಕ್ ಅಹಮದ್, ಕಳೆದ ಐದು ವರ್ಷಗಳಲ್ಲಿ ಕ್ಯಾತ್ಸಂದ್ರದ ಸುತ್ತಮುತ್ತ ಪ್ರದೇಶಗಳಲ್ಲಿ ಹಲವಾರು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ಪ್ರಮುಖವಾಗಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪೇಟೆ ಬೀದಿಯನ್ನು ಸರಿಪಡಿಸುವ ಮೂಲಕ ಜನರ ಸುಗಮ ಸಂಚಾರಕ್ಕೆ ಅನುಮಾಡಿಕೊಡಲಾಗಿದೆ. ಇವೆಲ್ಲಾ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರಿಂದ ಮತ ಕೇಳುತ್ತಿದ್ದೇನೆ ಎಂದರು.
ಮುಂದಿನ ಐದು ವರ್ಷಗಳಲ್ಲಿ ತುಮಕೂರು ನಗರವನ್ನು ವ್ಯವಸ್ಥಿತವಾಗಿ ಅಭಿವೃದ್ದಿಪಡಿಸುವುದು ನನ್ನ ಗುರಿ. ಈಗಾಗಲೇ ಸ್ಮಾರ್ಟ್‍ಸಿಟಿಯಲ್ಲಿ ತುಮಕೂರು ನಗರಕ್ಕೆ 2300 ಕೋಟಿ ರೂ ಅನುದಾನ ಮೀಸಲಾಗಿದೆ. ಈ ಹಣವನ್ನು ಬಳಸಿಕೊಂಡು ಇಡೀ ನಗರವನ್ನು ಸಂಪೂರ್ಣವಾಗಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿದ ನಗರವಾಗಿ ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡಸಲಾಗುವುದು. ಬಡವರು, ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಈ ಬಡಾವಣೆಯ ಜನರು ಒಂದಿಲೊಂದು ರೀತಿ ಸರಕಾರ ವಿವಿಧ ಯೋಜನೆಗಳ ಲಾಭ ಪಡೆದಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಡಾ.ರಫೀಕ್ ಅಹಮದ್ ನುಡಿದರು.