ಎಚ್-1ಬಿ ವೀಸಾ ನಿಯಮ ಉಲ್ಲಂಘನೆ: ಭಾರತೀಯ ಅಮೆರಿಕನ್ ಐಟಿ ಕಂಪೆನಿಗೆ ದಂಡ

Update: 2018-05-02 16:31 GMT

ವಾಶಿಂಗ್ಟನ್, ಮೇ 2: ಕ್ಯಾಲಿಫೋರ್ನಿಯದಲ್ಲಿರುವ ಭಾರತೀಯ ಅಮೆರಿಕನ್ ಒಡೆತನದ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದು ಎಚ್-1ಬಿ ವೀಸಾ ಕಾರ್ಯಕ್ರಮದ ನಿಯಮಗಳಿಗೆ ಅನ್ವಯವಾಗಿ 12 ವಿದೇಶೀಯರಿಗೆ ವೇತನ ನೀಡಿಲ್ಲ ಎಂದು ಆರೋಪಿಸಲಾಗಿದ್ದು, ಈ ಉದ್ಯೋಗಿಗಳಿಗೆ 1,73,044 ಡಾಲರ್ (ಸುಮಾರು 1.15 ಕೋಟಿ ರೂಪಾಯಿ) ಹೆಚ್ಚುವರಿ ವೇತನ ನೀಡುವಂತೆ ಬುಧವಾರ ಸೂಚಿಸಲಾಗಿದೆ. ಈ ಪೈಕಿ ಹೆಚ್ಚಿನ ಉದ್ಯೋಗಿಗಳು ಭಾರತೀಯರು.

ಅಮೆರಿಕದ ಕಾರ್ಮಿಕ ಇಲಾಖೆಯ ವೇತನ ಮತ್ತು ಅವಧಿ ವಿಭಾಗ ನಡೆಸಿದ ತನಿಖೆಯಲ್ಲಿ ಈ ಅವ್ಯವಹಾರ ಬೆಳಕಿಗೆ ಬಂದಿದೆ.

ಕ್ಲೌಡ್‌ವಿಕ್ ಟೆಕ್ನಾಲಜೀಸ್ ಇಂಕ್ ಎಂಬ ಐಟಿ ಕಂಪೆನಿಯು ಎಚ್-1ಬಿ ವೀಸಾ ಅಡಿಯಲ್ಲಿ ಭಾರತೀಯ ಉದ್ಯೋಗಿಗಳನ್ನು ಅಮೆರಿಕಕ್ಕೆ ಕರೆ ತಂದಿತ್ತು. ನೇಮಕಾತಿಯ ವೇಳೆ ಅವರಿಗೆ ತಿಂಗಳಿಗೆ 8,300 ಡಾಲರ್ (ಸುಮಾರು 5.53 ಲಕ್ಷ ರೂಪಾಯಿ) ವೇತನ ನೀಡುವ ಭರವಸೆಯನ್ನು ನೀಡಿತ್ತು. ಆದರೆ, ಅವರಿಗೆ ತಿಂಗಳಿಗೆ ಕೇವಲ 800 ಡಾಲರ್ (53,380 ರೂಪಾಯಿ) ಸಂಬಳ ನೀಡಲಾಗಿತ್ತು.

ಕ್ಯಾಲಿಫೋರ್ನಿಯ ಸಿಲಿಕಾನ್ ವ್ಯಾಲಿಯ ನೆವಾರ್ಕ್‌ನಲ್ಲಿ ಕಚೇರಿ ಹೊಂದಿರುವ ಕ್ಲೌಡ್‌ವಿಕ್ ಟೆಕ್ನಾಲಜೀಸ್ ಕಂಪೆನಿಯನ್ನು ಭಾರತೀಯ ಅಮೆರಿಕನ್ ಮಣಿ ಛಾಬ್ರ ಸ್ಥಾಪಿಸಿದ್ದಾರೆ ಎಂಬುದಾಗಿ ಕಂಪೆನಿಯ ವೆಬ್‌ಸೈಟ್ ಹೇಳುತ್ತದೆ.

ಬ್ಯಾಂಕ್ ಆಫ್ ಅಮೆರಿಕ, ಕಾಮ್‌ಕಾಸ್ಟ್, ಹೋಮ್ ಡಿಪೋ, ಇನ್‌ಟ್ಯೂಟ್, ಜೆಪಿ ಮೋರ್ಗನ್, ನೆಟ್‌ಆ್ಯಪ್, ಟಾರ್ಗೆಟ್, ವೀಸಾ ಮತ್ತು ವಾಲ್‌ಮಾರ್ಟ್ ತನ್ನ ಗ್ರಾಹಕರು ಎಂಬುದಾಗಿ ಐಟಿ ಕಂಪೆನಿ ಹೇಳುತ್ತದೆ.

ಎಚ್-1ಬಿ ವೀಸಾ ಕಾರ್ಯಕ್ರಮದಡಿ ಕೊಡಬೇಕಾದ ವೇತನಕ್ಕಿಂತ ತುಂಬಾ ಕಡಿಮೆ ವೇತನವನ್ನು ಉದ್ಯೋಗಿಗಳಿಗೆ ನೀಡಲಾಗುತ್ತಿತ್ತು ಹಾಗೂ ಅವರ ವೇತನಗಳಿಂದ ಕಾನೂನುಬಾಹಿರ ಕಡಿತಗಳನ್ನು ಮಾಡಲಾಗುತ್ತಿತ್ತು ಎನ್ನುವುದು ತನಿಖೆಯಿಂದ ಬಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News