'ನಾವು ಯಾರಿಗೂ ಮತ ಚಲಾಯಿಸುವುದಿಲ್ಲ, ಓಟು ಕೇಳಲು ಯಾರೂ ಬರಬೇಡಿ'

Update: 2018-05-02 17:32 GMT

ಚಿಕ್ಕಮಗಳೂರು, ಮೇ 2: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜ್ಯದ ಕೆಲವೆಡೆ ಕಾಂಗ್ರೆಸ್ ಪಕ್ಷದವರಿಗೆ ಮತ ಹಾಕುವುದಿಲ್ಲ, ಬಿಜೆಪಿಗೆ ಮತಹಾಕುವುದಿಲ್ಲ, ಮತ ಕೇಳಲು ಬರಬೇಡಿ ಎಂಬಿತ್ಯಾದಿಯಾಗಿ ಬೋರ್ಡು, ಫಲಕ ಹಾಕುವುದನ್ನು ನೋಡಿದ್ದೇವೆ. ಆದರೆ ಚಿಕ್ಕಮಗಳೂರಿನಲ್ಲಿ ವ್ಯಕ್ತಿಯೊಬ್ಬರು ಯಾವ ಪಕ್ಷದವರಿಗೂ ಮತ ಹಾಕುವುದಿಲ್ಲ, ಮತ ಕೇಳಲೂ ಬರಬಾರದೆಂದು ಮನೆ ಎದುರು ಫಲಕ ಹಾಕಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.

ಚಿಕ್ಕಮಗಳೂರು ನಗರದ ರಾಮನಹಳ್ಳಿ ಬಡಾವಣೆಯಲ್ಲಿರುವ ಬಿ.ವಿ.ಜಯಂತ್ ಎಂಬವರೇ ಹೀಗೆ ತಮ್ಮ ಮನೆಯ ಮುಂದೆ ಫಲಕ ಹಾಕಿಕೊಂಡಿರುವ ವ್ಯಕ್ತಿಯಾಗಿದ್ದಾರೆ. ಬಿ.ವಿ.ಜಯಂತ್ ಈ ಹಿಂದೆ ನಗರದ ಡಿಪ್ಲೊಮಾ ಕಾಲೇಜಿನಲ್ಲಿ ಸರಕಾರಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. 
ವೃತ್ತಿಯಲ್ಲಿದ್ದ ವೇಳೆ ಅವರು ಶಿಕ್ಷಣ ಇಲಾಖೆಯಲ್ಲಿನ ಕೆಲ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದರು ಎನ್ನಲಾಗಿದ್ದು, ಇದರಿಂದಾಗಿ ಇಲಾಖಾಧಿಕಾರಿಗಳು ಇವರನ್ನು ಪದೇಪದೇ ವರ್ಗಾವಣೆ ಮಾಡಿ ಕಿರುಕುಳ ನೀಡಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ಅವರು ಕೆಲ ರಾಜಕಾರಣಿಗಳ ಬಳಿ ಸಹಾಯಕ್ಕಾಗಿ ಮನವಿ ಮಾಡಿದ್ದು, ರಾಜಕಾರಣಿಗಳು ಬೆಂಬಲ ನೀಡಿರಲಿಲ್ಲ. ಇದರಿಂದಾಗಿ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಇದೀಗ ಚುನಾವಣೆ ಆಗಮಿಸಿರುವುದರಿಂದ ತಮಗೆ ಅಂದು ಸಹಾಯ ಮಾಡದ ರಾಜಕಾರಣಿಗಳ ಮೇಲಿನ ಸಿಟ್ಟಿನಿಂದಾಗಿ ಅವರು ತಮ್ಮ ಮನೆಯ ಮುಂದೆ 'ಓಟು ಕೇಳಲು ಯಾವ ಪಕ್ಷದವರೂ ತನ್ನ ಮನೆಯ ಬಳಿಗೆ ಬರಬಾರದು. ನಮ್ಮ ಮನೆಯ ಯಾವ ಸದಸ್ಯರೂ ಮತದಾನ ಮಾಡುವುದಿಲ್ಲ' ಎಂದು ಫಲಕ ಹಾಕಿಕೊಂಡಿದ್ದಾರೆನ್ನಲಾಗಿದೆ.

ನಾನು ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಿರಿಯ ಅಧಿಕಾರಿಗಳು ವಿನಾಕಾರಣ ವರ್ಗಾವಣೆ ಮಾಡಿ ನನ್ನ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಅಧಿಕಾರಿಗಳು, ಜಿಲ್ಲಾಡಳಿತ, ರಾಜಕಾರಣಿಗಳಲ್ಲಿ ಮನವಿ ಮಾಡಿ ಅನ್ಯಾಯದ ಬಗ್ಗೆ ದೂರು ಹೇಳಿಕೊಂಡರೂ ಯಾರೂ ನನ್ನ ಸಮಸ್ಯೆಗೆ ಸ್ಪಂದಿಸಿಲ್ಲ. ಕಾನೂನು ಹೋರಾಟದಿಂದಲೂ ನನಗೆ ನ್ಯಾಯ ಸಿಕ್ಕಿಲ್ಲ. ಇದರಿಂದ ಯಾವುದೇ ಸರಕಾರ ಬಂದರೂ ಜನ ಸಾಮಾನ್ಯರಿಗೆ ಸಂಕಷ್ಟ ತಪ್ಪುವುದಿಲ್ಲ ಎಂಬುದು ಮನವರಿಕೆಯಾಗಿದೆ. ಆದ್ದರಿಂದ ನಾನು ನನ್ನ ಕುಟುಂಬ ಯಾವುದೇ ಪಕ್ಷಗಳ ಯಾವ ಅಭ್ಯರ್ಥಿಗಳಿಗೂ ಮತ ಹಾಕುವುದಿಲ್ಲ. ನನ್ನ ಮನೆಗೆ ಓಟು ಕೇಳಲು ಅಥವಾ ಮನವೊಲಿಸಲು ಯಾವುದೇ ರಾಜಕಾರಣಿಗಳು, ಅಧಿಕಾರಿಗಳು ಬರುವ ಅಗತ್ಯವಿಲ್ಲ. ಎಲ್ಲರಿಗೂ ಉತ್ತರಿಸಲು ಸಾಧ್ಯವಿಲ್ಲದ ಕಾರಣಕ್ಕೆ ಬೋರ್ಡ್ ಹಾಕಿದ್ದೇನೆ

- ಬಿ.ವಿ.ಜಯಂತ್, ಬೋಡ್ ಹಾಕಿರುವ ಮನೆ ಮಾಲಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News