×
Ad

ಹನೂರು ಕ್ಷೇತ್ರದ ಜನತೆ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ: ಜೆಡಿಎಸ್ ಮುಖಂಡ ಮಹದೇವಸ್ವಾಮಿ

Update: 2018-05-02 23:40 IST

ಹನೂರು,ಮೇ.02: ಕ್ಷೇತ್ರದ ಜನತೆ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದು, ಬದಲಾವಣೆ ಬಯಸಿದ್ದಾರೆ. ಆಗಾಗಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಜೆಡಿಎಸ್ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ತಿಳಿಸಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನೂರು ಕ್ಷೇತ್ರದಲ್ಲಿ ಕುಟುಂಬ ರಾಜಕಾರಣಕ್ಕೆ ಜನರು ಬೇಸತ್ತು ಜೆ.ಡಿ.ಎಸ್ ನತ್ತ ಮುಖ ಮಾಡುತ್ತಿದ್ದಾರೆ. ಹಿಂದಿನ ರಾಜಕಾರಣದಲ್ಲಿ ಹೆಚ್.ನಾಗಪ್ಪ ಮತ್ತು ರಾಜೂಗೌಡರಿಗಿದ್ದ ಜನಪರ ಕಾಳಜಿ ಆ ಕುಟುಂಬಗಳ ವಾರಸುದಾರರಿಗಿಲ್ಲ. ಕ್ಷೇತ್ರದಲ್ಲಿ ಜನರು ಮೂಲಭೂತ ಸೌಕರ್ಯ ವಂಚಿತರಾಗಿ ಹತಾಶರಾದ ಸಂದರ್ಭದಲ್ಲಿ ಸೂರಾಪುರದ ರಾಚೇಗೌಡರ ನಂತರ  ಹಿಂದುಳಿದ ವರ್ಗಗಳ ಅಭ್ಯರ್ಥಿ ಎಂ.ಆರ್ ಮಂಜುನಾಥ್  ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವುದು ಜನರಿಗೆ ಸಂತೋಷವಾಗಿದೆ ಮತ್ತು ಸಾವಿರಾರು ಜನರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಪಕ್ಷ ಸೇರುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಹೇಳಿದರು. ಈ ಬಾರಿ ಕಾಂಗ್ರೆಸ್ ಮೂರನೆ ಸ್ಥಾನ ಪಡೆಯುವುದರಲ್ಲಿ ಯಾವುದೇ ಅನುಮಾನ ಬೇಡ. ಮಂಜುನಾಥ್ ರವರನ್ನು ಮತದಾರರು ಅಭೂತ ಪೂರ್ವವಾಗಿ ಜಯಶೀಲರಾಗಿ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು. 

ಹಾಲಿ ಶಾಸಕರು ಕಳೆದ 10 ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ ಹಿನ್ನಲೆಯಲ್ಲಿ ಮತ ಪ್ರಚಾರಕ್ಕೆ ತೆರಳುವ ಗ್ರಾಮಗಳಲ್ಲಿ ಜನತೆ ಇವರಿಗೆ ಸ್ಪಂದಿಸುತ್ತಿಲ್ಲ. ಮುಖಭಂಗವನ್ನು ಅನುಭವಿಸುತ್ತಿದ್ದಾರೆ. ಇದರಿಂದ ಸಂಸದ ಆರ್. ಧ್ರುವನಾರಾಯಣ್ ಅವರೊಂದಿಗೆ ಮತಪ್ರಚಾರದಲ್ಲಿ ತೊಡಗಿದ್ದಾರೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದಿಂದ ಬೇಸತ್ತಿರುವ ಜನತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು 3ನೇ ಸ್ಥಾನಕ್ಕಿರಿಸಲಿದ್ದಾರೆ. ಜತೆಗೆ ಬಿಜೆಪಿ ಪಕ್ಷ ಕ್ಷೇತ್ರದ 242 ಬೂತ್‍ಗಳ ಪೈಕಿ 40 ಬೂತ್‍ಗಳಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಉತ್ತಮ ಆಡಳಿತ ಹಾಗೂ ಹಲವು ಜನಪರ ಯೋಜನೆಗಳು ಮಂಜುನಾಥ್ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯ ಬಸವರಾಜು, ಗ್ರಾಪಂ ಸದಸ್ಯೆ ರಾಣಿಬಾಯಿ, ಮುಖಂಡರಾದ ಮಂಗಲ ರಾಜಶೇಖರ್, ರುದ್ರರಾಧ್ಯ, ರಾಜು, ನಟರಾಜು, ಕಿರಣ್ ಹಾಗೂ ಇನ್ನಿತರರು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News