ರಸ್ತೆ ಬದಿಗೆ ಉರುಳಿದ ಬಸ್ : ಮೂವರಿಗೆ ಗಾಯ
Update: 2018-05-03 17:52 IST
ಗುಂಡ್ಲುಪೇಟೆ,ಮೇ.3: ಊಟಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿ ಮೂವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಮೇ 2ರ ನಸುಕಿನಲ್ಲಿ ಊಟಿಯಿಂದ ಬೆಂಗಳೂರಿಗೆ 45 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಹಾಕಿದ್ದ ಕಬ್ಬಿಣದ ತಡೆಗೋಡೆಯನ್ನು ಮುರಿದು ಅರಣ್ಯ ಪ್ರದೇಶದೊಳಗೆ ಮಗುಚಿಬಿದ್ದಿದೆ. ತಮಿಳುನಾಡಿನ ಮಧುಮಲೈ ಅರಣ್ಯದ ಕಾರುಕುಡಿ ಬಳಿ ನಡೆದ ಘಟನೆಯಲ್ಲಿ ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಗೂಡಲೂರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಸಾರಿಗೆ ಸಂಸ್ಥೆಯ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್ ಕುಮಾರ್, ತಾಂತ್ರಿಕ ಅಧಿಕಾರಿ ಮಲ್ಲೇಶ್ ಆಸ್ಪತ್ರೆ ಹಾಗೂ ಘಟನಾಸ್ಥಳಕ್ಕೆ ಭೇಟಿ ನೀಡಿದ್ದರು.