×
Ad

ನೌಕರರು ಚುನಾವಣಾ ಕರ್ತವ್ಯಕ್ಕೆ ತಪ್ಪಿಸಿಕೊಳ್ಳುವುದು ಅಪರಾಧ: ಸಂಜೀವ್‌ಕುಮಾರ್

Update: 2018-05-03 18:10 IST

ಬೆಂಗಳೂರು, ಮೇ 3: ಚುನಾವಣಾ ಕರ್ತವ್ಯಕ್ಕೆ ಸರಕಾರಿ ನೌಕರರು ತಪ್ಪಿಸಿಕೊಳ್ಳುವುದು ಅಪರಾಧವಾಗಿದ್ದು, ಒಂದು ವೇಳೆ ತಪ್ಪಿಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

ರಾಜ್ಯಾದ್ಯಂತ ಚುನಾವಣಾ ಕಾರ್ಯಕ್ಕೆ ಒಟ್ಟು 3.50ಲಕ್ಷ ಸಿಬ್ಬಂದಿ ಬೇಕಾಗುತ್ತದೆ. ಪ್ರತಿ ಮತಗಟ್ಟೆಗೆ ಐವರು ಸಿಬ್ಬಂದಿ ಬೇಕು. ಇವಿಎಂ ಎಂ-3ಇರುವಲ್ಲಿ ನಾಲ್ಕು ಜನ ಸಾಕು. ಚುನಾವಣಾ ಆಯೋಗದ ಸೆಕ್ಷನ್ 134ರ ಪ್ರಕಾರ ಚುನಾವಣಾ ಕರ್ತವ್ಯಕ್ಕೆ ತಪ್ಪಿಸಿಕೊಳ್ಳುವುದು ಅಪರಾಧವಾಗಿದೆ ಎಂದು ತಿಳಿಸಿದರು.

ಚುನಾವಣಾ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿರುವ ಪ್ರಕರಣಗಳ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಿದೆ. 1500ಮಂದಿ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಇವರೆಲ್ಲರಿಗೂ ಈಗಾಗಲೆ ಎಚ್ಚರಿಕೆ ನೀಡಲಾಗಿದೆ. ಆದರೆ, ಇತರೆ ಜಿಲ್ಲೆಗಳಲ್ಲಿ ಬಹುತೇಕ ನೌಕರರು ಹಾಜರಾಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5.69ಕೋಟಿಗೆ ಏರಿಕೆ ಆಗಲಿದೆ. ಮಹಿಳಾ ಮತದಾರರ ನೋಂದಣಿ ಪ್ರಮಾಣ ಶೇ.16ರಷ್ಟು ಹೆಚ್ಚಳವಾಗಿದೆ. ಪುರುಷ ಮತ್ತು ಮಹಿಳಾ ಮತದಾರರ ಅನುಪಾತ 1000ಕ್ಕೆ 997ಇದೆ. 2013ರಲ್ಲಿ ಆ ಪ್ರಮಾಣ 952 ಇತ್ತು. ಈ ಬಾರಿ 15.44ಲಕ್ಷ ಯುವ ಮತದಾರರು ಹೆಸರು ನೋಂದಾಯಿಸಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News