×
Ad

ಉದ್ಯಮಿಗಳ ಸಾಲಮನ್ನಾ ಮಾಡಿದ ಮೋದಿ: ರಾಹುಲ್ ಗಾಂಧಿ ಟೀಕೆ

Update: 2018-05-03 18:36 IST

ಬೀದರ್, ಮೇ 3: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾವಿರಾರು ರೈತರ 8 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಿದರು. ಆದರೆ, ಪ್ರಧಾನಿ ಮೋದಿ 15 ಮಂದಿ ಉದ್ಯಮಿಗಳ ಕೋಟ್ಯಂತರ ರೂ.ಸಾಲಮನ್ನಾ ಮಾಡಿದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಗುರುವಾರ ಜಿಲ್ಲೆಯ ಔರಾದ್‌ನಲ್ಲಿ ಜನಾಶಿರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಬಸವಣ್ಣನವರನ್ನು ಸ್ಮರಿಸುವ ಪ್ರಧಾನಿ ಮೋದಿ ಅವರ ‘ನುಡಿದಂತೆ ನಡೆ’ ವಚನ ಪಾಲಿಸುತ್ತಿಲ್ಲ. ಆದರೆ, ಅವರ ಪಕ್ಕ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮತ್ತು ನಾಲ್ವರು ಮಾಜಿ ಸಚಿವರು ನಿಲ್ಲುತ್ತಾರೆಂದು ಟೀಕಿಸಿದರು.

ಬಿಜೆಪಿಯದ್ದು ಆರೆಸ್ಸೆಸ್ ಸಿದ್ಧಾಂತ, ನಮ್ಮದು ಎಲ್ಲರನ್ನು ಒಳಗೊಳ್ಳುವ ಸಿದ್ಧಾಂತ ಎಂದ ರಾಹುಲ್ ಗಾಂಧಿ, ಮೋದಿ ನನ್ನ ಬಗ್ಗೆ ಏನು ಬೇಕಾದರೂ ಹೇಳಲಿ. ನಾನು ಅವರ ಬಗ್ಗೆ ವೈಯಕ್ತಿಕವಾಗಿ ಟೀಕೆ ಮಾಡುವುದಿಲ್ಲ. ಅವರು ಇಡೀ ದೇಶದ ಪ್ರಧಾನಿ, ನನಗೂ ಪ್ರಧಾನಿ ಎಂದು ಕುಟುಕಿದರು.

ನೀವು ನೀರವ್ ಮೋದಿ ಬಗ್ಗೆ ಏಕೆ ಒಂದೂ ಮಾತು ಆಡ್ತಿಲ್ಲ? ನೀರವ್ ಮೋದಿ ಸಾವಿರಾರು ಕೋಟಿ ರೂ.ಲೂಟಿ ಮಾಡಿಕೊಂಡು ಓಡಿ ಹೋದರೂ, ನೀವು ಶಾಂತವಾಗಿ ಇರ್ತೀರಿ ಹೇಗೆ? ಅಮಿತ್ ಶಾ ಪುತ್ರ ಮೋಸ ಮಾಡಿದ್ದಾರೆ. ನೀವು ಈ ಬಗ್ಗೆ ಒಂದೂ ಮಾತು ಆಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

‘ಶೋಲೆ’ ಚಿತ್ರದಲ್ಲಿ ಗಬ್ಬರ್‌ಸಿಂಗ್ ಪಾತ್ರದಾರಿಯೊಬ್ಬರಿದ್ದರು. ನೀವು ಜಾರಿಗೆ ತಂದ ಸರಕು ಸೇವಾ ತೆರಿಗೆ (ಜಿಎಸ್ಟಿ) ಅಂದ್ರೆ ಗಬ್ಬರ್ ಸಿಂಗ್ ಟ್ಯಾಕ್ಸ್  ಮೂಲಕ ಎಲ್ಲರನ್ನೂ ದಿವಾಳಿ ಮಾಡ್ತಿದ್ದೀರಿ ಎಂದು ರಾಹುಲ್ ಗಾಂಧಿ ಇದೇ ವೇಳೆ ಲೇವಡಿ ಮಾಡಿದರು.

‘ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ದಲಿತರ ಹತ್ಯೆ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರು ಏಕೆ ದಲಿತರ ಹತ್ಯೆ ಬಗ್ಗೆ ಮಾತನಾಡುತ್ತಿಲ್ಲ. ‘ಭೇಟಿ ಬಚಾವೊ’ ಎಂದು ಹೇಳುವ ಮೋದಿ, ಯುಪಿಯಲ್ಲಿ ಬಿಜೆಪಿ ಶಾಸಕ ಬಾಲಕಿ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿದ್ದು, ಕಥುವಾ ಅತ್ಯಾಚಾರ ಪ್ರಕರಣವನ್ನು ಬಿಜೆಪಿ ನಾಯಕರು ಸಮರ್ಥಿಸಿದ್ದಾರೆ. ಈ ಬಗ್ಗೆ ಅವರ ಮೌನವೇಕೇ?’
-ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News