×
Ad

‘ಸಿದ್ದ ರೂಪಯ್ಯ’ ಸರಕಾರದಿಂದ ಕರ್ನಾಟಕ ಸಾಲದ ಸುಳಿಗೆ: ಪ್ರಧಾನಿ ನರೇಂದ್ರ ಮೋದಿ ಆರೋಪ

Update: 2018-05-03 18:43 IST

ಬಳ್ಳಾರಿ, ಮೇ.3: ಕರ್ನಾಟಕ ರಾಜ್ಯದಲ್ಲಿ ‘ಸಿದ್ದ ರೂಪಯ್ಯ’ ಸರಕಾರ ಆಡಳಿತ ನಡೆಸುತ್ತಿದ್ದು, ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ತುಂಗಾಭದ್ರ ನದಿ ಪಕ್ಕದಲ್ಲೇ ಇದ್ದರೂ ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ಬೆಳೆಗೆ ನೀರು ಸಿಗುತ್ತಿಲ್ಲ. ತುಂಗಾಭದ್ರದಲ್ಲಿನ ಹೂಳೆತ್ತಲು ಈ ಸರಕಾರಕ್ಕೆ ಸಾಧ್ಯವಾಗಿಲ್ಲ. ಇಂತಹ ಸರಕಾರ ನಿಮಗೆ ಬೇಕಾ? ಎಂದು ಪ್ರಶ್ನಿಸಿದರು.

ಬಳ್ಳಾರಿ ಜನರಿಗೆ ನಾವು ಆಶ್ವಾಸನೆ ನೀಡುತ್ತಿದ್ದೇವೆ. ನಿಮ್ಮ ಸಮಸ್ಯೆಗಳನ್ನು ಬಿಜೆಪಿ ಈಡೇರಿಸುತ್ತದೆ. ಬರೀ ಬಳ್ಳಾರಿ ಮಾತ್ರವಲ್ಲ, ಎಲ್ಲೆಡೆ ನೀರು, ಕಾಲುವೆ ಒದಗಿಸಲು ಬದ್ಧ ಎಂದ ಅವರು, ಮಹಾರಾಷ್ಟ್ರ ಸರಕಾರದ ಮಾದರಿಯಲ್ಲೆ ತುಂಗಾಭದ್ರ ಹೂಳೆತ್ತಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ದಲಿತ ವಿರೋಧಿ: ಕಾಂಗ್ರೆಸ್ ಕುಟಿಲ ರಾಜಕೀಯ ಮಾಡುತ್ತಿದ್ದು, ದಲಿತ ವಿರೋಧಿಯಾಗಿದೆ. ಹಿಂದುಳಿದ ವರ್ಗಗಳಿಗೂ ಆ ಪಕ್ಷ ಏನೂ ಮಾಡಿಲ್ಲ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಿಕ ಮಾನ್ಯತೆ ನೀಡಲು ಕೇಂದ್ರ ಸರಕಾರ ಮುಂದಾದರೆ, ಅದಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ರಾಜ್ಯಸಭೆಯಲ್ಲಿ ಮಸೂದೆಗೆ ಅನುಮತಿ ನೀಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.

ದಲಿತರ ಮತ ಗಳಿಕೆಗೆ ಖರ್ಗೆ ಸಿಎಂ ಮಾಡುತ್ತೇವೆಂದ ಕಾಂಗ್ರೆಸ್, ಚುನಾವಣೆ ಬಳಿಕ ಏನೂ ಮಾಡಲಿಲ್ಲ. ಅದೇ ರೀತಿ ಲಿಂಗಾಯತ ನಾಯಕ ನಿಜಲಿಂಗಪ್ಪಗೂ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ದೂರಿದ ಅವರು, ಸಿಎಂ ಸಿದ್ದರಾಮಯ್ಯ ಲೋಕದಳ, ಜನತಾದಳ, ವಿವಿಧ ದಳಗಳಲ್ಲೆ ಮುಗಿದ ಮೇಲೆ ಕಾಂಗ್ರೆಸ್‌ಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು.

ವಿಜ್ಞಾನಿ ಅಬ್ದುಲ್ ಕಲಾಂ ಹಾಗೂ ಶೋಷಿತ ಸಮುದಾಯದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ, ಅದೇ ರೀತಿ ಹಿಂದುಳಿದ ವರ್ಗದ ಚಹಾ ಮಾರಾಟ ಮಾಡುವ ವ್ಯಕ್ತಿಯನ್ನು ಪ್ರಧಾನಿ ಮಾಡಿದ್ದು ಬಿಜೆಪಿಯೇ ಎಂದು ಹೇಳಿದರು.

ದಕ್ಷಿಣದ ವಿರೋಧಿಯಲ್ಲ: ಬಿಜೆಪಿ ಉತ್ತರ ಭಾರತದ ಪಾರ್ಟಿ ಎಂದು ಲೇವಡಿ ಮಾಡುತ್ತಾರೆ. ಆದರೆ, ದಕ್ಷಿಣ ಭಾರತದ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಮಾಡಿದ್ದು, ತಮಿಳುನಾಡಿನ ಒಬ್ಬ ಮಹಿಳೆ ನಿರ್ಮಲಾ ಸೀತಾರಾಮನ್ ಅವರನ್ನು ರಕ್ಷಣಾ ಸಚಿವೆ ಮಾಡಿದ್ದು ಬಿಜೆಪಿ. ನಾವು ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳಿದರು.

ಬಳ್ಳಾರಿ ಅಭಿವೃದ್ದಿ ಅಂದರೆ ಇಲ್ಲಿ ಜೀನ್ಸ್ ಉದ್ಯಮಕ್ಕೆ 6 ಸಾವಿರ ಕೋಟಿ ರೂ. ಯೋಜನೆ ರೂಪಿಸಲಿದೆ ಎಂದ ಅವರು, ಬಳ್ಳಾರಿ ಅಭಿವೃದ್ಧಿಯಾದರೆ ಕರ್ನಾಟಕ ಅಭಿವೃದ್ಧಿಯಾಗಲಿದ್ದು, ಆ ಮೂಲಕ ದೇಶ ಅಭಿವೃದ್ಧಿ ಸಾಧ್ಯ. ಹೀಗಾಗಿ ಬಿಜೆಪಿ ಬೆಂಬಲಿಸಿ ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News