ಮೂಡಿಗೆರೆಯಲ್ಲಿ ಲಾರಿ-ಕಾರು ಢಿಕ್ಕಿ; ನಾಟೆಕಲ್‍ನ ಇಬ್ಬರು ಮಹಿಳೆಯರು ಮೃತ್ಯು
ಮೂಡಿಗೆರೆ, ಮೇ.3: ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಇನೋವಾ ಕಾರೊಂದು ತಾಲೂಕಿನ ಕೃಷ್ಣಾಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದಕ್ಕೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಹಿಳೆ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ 6 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮೃತಪಟ್ಟವರು ಮಂಗಳೂರಿನ ದೇರಳೆಕಟ್ಟೆ ಸಮೀಪ ನಾಟೆಕಲ್‍ನ ಅಸ್ಮಾ (50) ಮತ್ತು ಸೌದಾ (48) ಎಂದು ತಿಳಿದುಬಂದಿದೆ. ಇವರು ಮಂಗಳೂರಿನ ನಾಟೆಕಲ್‍ನಿಂದ ಸಕಲೇಶಪುರಕ್ಕೆ ತಮ್ಮ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಮೂಡಿಗೆರೆಯಿಂದ ಗೋಣಿಬೀಡು ಕಡೆಗೆ ಸಾಗುತ್ತಿದ್ದ ಲಾರಿಯೊಂದಕ್ಕೆ ಕೃಷ್ಣಾಪುರದ ಬಳಿ ಕಾರು ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಇಸ್ಮಾಯೀಲ್ (60), ತಮ್ಸಿಯಾ (40), ಅಯಾನ್ (10), ತನೀಸ್ (16), ಸೀಧಾ (16) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.