ಶ್ರೀರಾಮುಲು ಮೊದಲು ಸರಿಯಾಗಿ ಕನ್ನಡ ಮಾತನಾಡಲು ಕಲಿಯಲಿ : ಸಿಎಂ ಸಿದ್ದರಾಮಯ್ಯ

Update: 2018-05-03 14:18 GMT

ಹರಿಹರ,ಮೇ.3:ನಮ್ಮಲ್ಲೇ ಕುಡಿಯುವ ನೀರಿಗೆ ತೊಂದರೆ ಕಾಣಿಸಿಕೊಳ್ಳುತ್ತಿದೆ. ಈ ಮಧ್ಯೆ ತಮಿಳುನಾಡಿಗೆ ಹೇಗೆ ನೀರು ಹರಿಸಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಮಾದ್ಯಮದವರನ್ನೇ ಪ್ರಶ್ನಿಸಿದರು.

ನಗರದ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ ಪರ ಪ್ರಚಾರ ಸಭೆ ಕಾರ್ಯಕ್ರಮಕ್ಕೂ ಮುನ್ನಾ ಹೆಲಿಪ್ಯಾಡ್‍ನಲ್ಲಿ ಮಾದ್ಯಮದವರೊಂದಿಗೆ ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡಲೇ ಬೇಕು ಎಂದು ಸೂಚನೆ ನೀಡಿರುವ ಬಗ್ಗೆ ಮಾತನಾಡಿ, ನಮ್ಮಲ್ಲಿ ನೀರಂತೂ ಇಲ್ಲ. ಸುಪ್ರೀಂಕೋರ್ಟ್ ಸಂಪೂರ್ಣ ಆದೇಶದ ಬಗ್ಗೆ ಇನ್ನು ಮಾಹಿತಿ ಇಲ್ಲ. ನಾನು ರಾಜ್ಯದ ಪರ ವಕೀಲರ ಜೊತೆ ಮಾತನಾಡುತ್ತೇನೆ. ಯಾವುದಕ್ಕೂ ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದುವರೆಯಲಿದ್ದೇನೆ ಎಂದರು.

ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಸಲು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಮೊದಲು ಶ್ರೀರಾಮುಲು ಸರಿಯಾಗಿ ಕನ್ನಡ ಮಾತನಾಡಲು ಕಲಿಯಲಿ. ಇಂತಹ ವ್ಯಕ್ತಿ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರು ಮುಖ್ಯವಾಗಿ ಮಹಾದಾಯಿ ಯೋಜನೆ ಬಗೆಹರಿಸುವ ಕುರಿತು ಗೋವಾ ಸರ್ಕಾರದೊಂದಿಗೆ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ. ಅದರ ಬಗ್ಗೆ ಚಕಾರವೆತ್ತುತ್ತಿಲ್ಲ. ಪ್ರಧಾನಿ ಕೇವಲ ಮಾತನಾಡುತ್ತಾರೆಯೇ  ಹೊರತು ಯಾವುದನ್ನು ಬಗೆಹರಿಸುವುದಿಲ್ಲ. ಬಿಜೆಪಿಯವರು ಅಂಬೇಡ್ಕರ್ ನೀಡಿದ ಸಂವಿಧಾನ ತಿರುಚಲು ಹೊರಟಿದ್ದಾರೆ. ಒಂದು ವೇಳೆ ಆ ರೀತಿ ಏನಾದರು ಆದರೆ ದುರಂತವೇ ಸಂಭವಿಸುತ್ತದೆ. ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಸಾಮಾಜಿಕ ಅವಕಾಶ ನೀಡಬೇಕೆಂದು ನಮ್ಮ ಸಂವಿಧಾನ ಹೇಳಿದೆ. ಇದನ್ನೇ ಅಂಬೇಡ್ಕರ್ ಹಾಗೂ ಗಾಂಧೀಜಿಯವರು ಹೇಳಿರುವುದು ಇದನ್ನು ಒಪ್ಪಿಕೊಳ್ಳಬೇಕು. ಆದರೆ, ಬಿಜೆಪಿಯವರು ಅದನ್ನು ತಿರುಚಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.  

ದೇವೇಗೌಡರು ಸಂಸದರಾಗಿದ್ದಾರೆ. ಆದರೆ, ಒಂದು ದಿನವಾದರು ರೈತರ ಸಾಲಮನ್ನಾ ಮಾಡಿ ಎಂದು ಕೇಂದ್ರದ ಮೇಲೆ ಯಾವುದೇ ಒತ್ತಡ ತಂದಿಲ್ಲ. ಈ ಬಗ್ಗೆ ಕೇಳಿದರೆ ಹಿಂದೇಟು ಹಾಕುತ್ತಾರೆ. ದೇವೇಗೌಡರು ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾದರೆ ನಾನು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು. ಇದೆಲ್ಲಾ ಕೇವಲ ನಾಟಕ ಮಾತ್ರ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಸುಮ್ಮನೆ ಸುಳ್ಳುಗಳನ್ನು ಹೆಣೆಯುತ್ತಾರೆ. ನಾವು ಅಂದು ಜೆಡಿಎಸ್ ಪಕ್ಷದಲ್ಲಿ ಇರದಿದ್ದರೆ ಇಂದು ಪಕ್ಷದ ಗುರುತೇ ಇರುತ್ತಿರಲಿಲ್ಲ. ಅದನ್ನು ಮೊದಲು ದೇವೇಗೌಡರು ಅರಿತುಕೊಳ್ಳಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News