ಪ್ರಧಾನಿ 'ಶ್ರೀಶ್ರೀ ಸುಳ್ಳೇಂದ್ರ ಮೋದಿ' ಎಂದು ಹೆಸರು ಬದಾಲಾಯಿಸಿಕೊಳ್ಳಲಿ : ಪ್ರಕಾಶ್‍ ರೈ

Update: 2018-05-03 15:19 GMT

ಚಿಕ್ಕಮಗಳೂರು, ಮೇ 3: "ನರೇಂದ್ರ ಮೋದಿ ಮಹಾ ಸುಳ್ಳುಗಾರ. ಆತ ಸುಳ್ಳಿನ ಮೋಡಿಯ ಮೂಲಕ ಈ ಹಿಂದೆ ಅವರು ನೀಡಿದ ಭರವಸೆಗಳನ್ನು ಜನರಿಂದ ಮರೆಸುತ್ತಿದ್ದಾರೆ. ತಾವು ಮಾತನಾಡಿದರೆ ಜನರನ್ನು ಜನರನ್ನು ಬಡಿದೆಬ್ಬಿಸುತ್ತಿದ್ದೆ. ಹೀಗಾಗಿ ಮೊದಲು ಮಾತನಾಡದಂತೆ ತಮಗೆ ತಡೆಒಡ್ಡುವ ಪ್ರಯತ್ನ ಮಾಡಿದವರು ಈಗ ಜನ ನಮ್ಮ ಮಾತನ್ನು ಕೇಳದಂತೆ ತಡೆ ಒಡ್ಡುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಬಹುಭಾಷಾ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್‍ ರೈ ಹೇಳಿದ್ದಾರೆ.

ನಗರದ ಅಂಡೇಛತ್ರದ ಬಳಿ ಇಂದು, 'ಸಂವಿಧಾನ ಉಳಿವಿಗಾಗಿ ಕರ್ನಾಟಕ' ಎಂಬ ಸಂಘಟನೆ ಆಯೋಜಿಸಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ  ಮಾತನಾಡಿದ ಅವರು, "ಈ ಹಿಂದೆ ತಾವು ಮಾತನಾಡಲು ಆರಂಭಿಸಿದಾಗ ತಮ್ಮ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದರು. ಈಗ ಜನ ನಮ್ಮ ಮಾತನ್ನು ಕೇಳದಂತೆ ಮಾಡಲು ಮೀಟಿಂಗ್ ರದ್ದು ಮಾಡುತ್ತಿದ್ದಾರೆ" ಎಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆಯಬೇಕಾದ ತಮ್ಮ ಕಾರ್ಯಕ್ರಮವನ್ನು ಜಿಲ್ಲಾಡಳಿತ ರದ್ದುಪಡಿಸಿದ ಬಗ್ಗೆ ಪರೋಕ್ಷವಾಗಿ ಟೀಕಿಸಿದರು.

ಪ್ರಧಾನಿಯನ್ನು ಪ್ರಶ್ನಿಸಿದ ಅವರು, "ನಾವು ಬೇರೆಯವರ ವೈಯಕ್ತಿಕ ವಿಷಯ, ಬೇರೆಯವರ ಪತ್ನಿಯ ಬಗ್ಗೆ ಮಾತನಾಡುವುದಿಲ್ಲ. ನೀವು ಈ ಹಿಂದೆ ಜನತೆಗೆ ನೀಡಿದ ಭರವಸೆಗಳನ್ನು ಏಕೆ ಈಡೇರಿಸಿಲ್ಲ ಎಂಬುದನ್ನು ಪ್ರಶ್ನಿಸುತ್ತಿರುವುದಾಗಿ ಹೇಳಿದ ಪ್ರಕಾಶ್‍ ರೈ, ಪ್ರಶ್ನೆ ಕೇಳಿದರೆ ಅದು ಉಪದೇಶವಲ್ಲ. ಜನರನ್ನು ಬುದ್ದಿವಂತರಾಗಿಸುವುದು. ನಿಮ್ಮ ಮಾತುಗಳು ಮೋಡಿ ಮಾಡಿ ನಿಮ್ಮ ಭರವಸೆ ಬಗ್ಗೆ ಜನರನ್ನು ಮರೆಸುತ್ತದೆ. ಆದರೆ ತಮ್ಮ ಮಾತು ಅವರನ್ನು ಬಡಿದೆಬ್ಬಿಸುತ್ತದೆ.ಭಯ ನಿಮ್ಮನ್ನು ಕಾಡುತ್ತದೆ. ಈಗಾಗಲೇ ಸೋಲು ನಿಮ್ಮ ಕಣ್ಣಮುಂದೆ ನಿಂತಿದೆ. ನಿಮಗೆ ಎರಡೇದಾರಿ ಇರುವುದು ಕಣ್ಣು ಮುಚ್ಚಿಕೊಳ್ಳಿ ಅಥವಾ ಅತ್ತ ಕಡೆ ತಿರುಗಿ ಎಂದು ವ್ಯಂಗ್ಯದ ಚಾಟಿ ಬೀಸಿದ ಅವರು ಮೇ 15 ರಂದು ಜನತೆ ಅದನ್ನು ಹೇಳುತ್ತಾರೆ" ಎಂದರು.

ನೀವು ಎಂತಹ ಕೆಟ್ಟ ಮಾತುಬೇಕಾದರೂ ವೇದಿಕೆಗಳಲ್ಲಿ ಮಾತನಾಡಬಹುದು. ವಿರೋಧಿಸುವವರನ್ನು ನಾಯಿ, ಕುರಿ, ಕತ್ತೆಗಳೆಂದು ಕರೆಯಬಹುದು. ಆದರೆ ಸುಳ್ಳರನ್ನು ಸುಳ್ಳರು ಎಂದು ಕರೆದರೆ ನಿಮಗೆ ಏಕೆ ಕಷ್ಟ ಎಂದು ತಮ್ಮನ್ನು ವಿರೋಧಿಸುವವರನ್ನು ಪ್ರಶ್ನಿಸಿದ ಅವರು, ನೀವು  ಶ್ರೀಶ್ರೀ ಸುಳ್ಳೇಂದ್ರ ಮೋದಿ ಎಂದ  ಹೆಸರು ಬದಾಲಾಯಿಸಕೊಳ್ಳಿ, ಎಷ್ಟು ಸುಳ್ಳು ಹೇಳುತ್ತೀರಿ ನೀವು ಎಂದು ಅವರು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರು.

"ನಾವು ಅಂದುಕೊಂಡಿದ್ದೆವು ನೀವು ಸತ್ಯಹೇಳಬಹುದು ಎಂದು ಆದರೆ ಬಂದವರೇ ಮಾಜಿ ಪ್ರಧಾನಿ ದೇವೇಗೌಡರನ್ನು ಹೊಗಳಲು ಶುರುಮಾಡಿದಿರಿ. ಕಳೆದ ಒಂದೂವರೆ ವರ್ಷದ ಹಿಂದೆ ದೇವೇಗೌಡರು ಪತ್ರ ಬರೆದರೂ ತಾವು ಉತ್ತರಿಸಲಿಲ್ಲ. ಕಳೆದ 2014ರಲ್ಲಿ ದೇವೇಗೌಡರನ್ನು ಆಶ್ರಮಕ್ಕೆ ಹೋಗಲು ಹೇಳಿದ್ದು ನಮಗೆ ಇನ್ನೂ ನೆನಪಿದೆ. ಸುಳ್ಳಿನ ಮೇಲೆ ಸುಳ್ಳು ಹೇಳಿದರೆ ಜನ ನಂಬುತ್ತಾರೆ ಎಂಬುವುದು ನಿಮ್ಮ ಭ್ರಮೆ" ಎಂದರು.

"ಇಂದಿನ ಚುನಾವಣಾ ಭಾಷಣದಲ್ಲಿ ದಲಿತರ ಕಾರ್ಡನ್ನು ಬಳಸುತ್ತಾರಂತೆ. ದಲಿತರಿಗೆ ಕರ್ನಾಟಕದ ಸರ್ಕಾರ, ಕರ್ನಾಟಕದ ಜನತೆ ಮರ್ಯಾದೆ ಕೊಡುತ್ತಿಲ್ಲ. ದಲಿತರಿಗೆ ಮಣೆಹಾಕುತ್ತಿಲ್ಲ. ಅದು ಮತ್ತೊಂದು ಸುಳ್ಳಲ್ಲವೇ. ತಮ್ಮ ಪಕ್ಷ ಆಡಳಿತದಲ್ಲಿರುವ ಉತ್ತರಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಹಲ್ಲೆಗಳನ್ನು ನಾವು ಮರೆತಿಲ್ಲ. ನೀವು ಕಚೇರಿಗೆ ಹೋಗಿ ನಿಮ್ಮ ಟೇಬಲ್ ಮೇಲಿರುವ ನಿಮ್ಮದೇ ಪಕ್ಷದ ಜನರಿಂದ ಆಯ್ಕೆಯಾದ ಐವರು ಸಂಸದರು ಬರೆದಿರುವ ಪತ್ರಗಳನ್ನು ಒಮ್ಮೆ ತೆರೆದು ನೋಡಿ. ದಲಿತರಾದ ತಾವುಗಳು ಮುಕ್ತವಾಗಿ ಹೊಣೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕರಾಗಿ ನಿಮಗೆ ಸಲ್ಲಿಸಿರುವ ದೂರನ್ನು ಗಮನಿಸಿ. ಎಲ್ಲಿ ದಲಿತರಿಗೆ ಮರ್ಯಾದೆ ದೊರೆಯುತ್ತಿಲ್ಲ ಎಂಬುದನ್ನು ಹೇಳಿ" ಎಂದರು

ಹೆಣ್ಣುಮಕ್ಕಳು ಸುರಕ್ಷಿತವಾಗಿರಲು ಕರ್ನಾಟಕದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದು ತಾವು ಚುನಾವಣಾ ಪ್ರಚಾರದಲ್ಲಿ ಹೇಳುತ್ತಿದ್ದೀರಿ. ತಮ್ಮ ಈ ಹೇಳಿಕೆ ನಗು ತರಿಸುತ್ತಿಲ್ಲವೇ. ನೀವು ಪ್ರಚಾರ ಭಾಷಣ ಮಾಡಿ, ಆದರೆ ಸುಳ್ಳು ಹೇಳುವುದು ಬೇಡ. ಓರ್ವ ಮಹಿಳೆ ಮೇಲೆ ಒಂದು ವರ್ಷದಿಂದ ಸಂಸದರೋರ್ವರು ಅತ್ಯಾಚಾರ ಮಾಡುತ್ತಿದ್ದು, ರಕ್ಷಿಸಿ ಎಂದು ದೂರು ನೀಡಿದರೆ ಆಕೆಯ ತಂದೆಯನ್ನು ಜೈಲಿನಲ್ಲಿ ಹಾಕಿ ಹೊಡೆದು ಕೊಲೆ ಮಾಡಿದ್ದಲ್ಲದೆ ಇದುವರೆಗೂ ಅತ್ಯಾಚಾರಿಯ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆದರೆ ತಾವು ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ತಮ್ಮ ಪಕ್ಷದ ಸರ್ಕಾರ ಬರಬೇಕೆಂದು ಹೇಳುತ್ತಿದ್ದೀರಿ ಎಂದು ಟೀಕಿಸಿದರು.

ಆರಂಭದಲ್ಲಿ ಮಾತನಾಡಿದ ಕರ್ನಾಟಕದ ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಸಿ.ಟಿ.ರವಿಗೆ ಸೋಲುವ ಭೀತಿ ಆವರಿಸಿಕೊಂಡಿದ್ದು, ಕಳೆದ ಹದಿನೈದು ವರ್ಷದಿಂದ ನಿರಂಕುಶ ಅಧಿಕಾರದ ಮೂಲಕ ಕೋಟಿ ಕೋಟಿ ಲೂಟಿ ಹೊಡೆದಿದ್ದು, ರಾಜ್ಯ ಟಾಪ್ ಟೆನ್ ಭ್ರಷ್ಟಾಚಾರಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಜನತೆ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸೋಲು ಕಾಣಿಸಬೇಕು. ಸಂವಿಧಾನವನ್ನು ಗೆಲ್ಲಿಸಬೇಕೆಂದು ಹೇಳಿದರು.

ಪರಿಸರ ಹೋರಾಟಗಾರ ಕಲ್ಕುಳಿ ವಿಠಲಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಜರಾತಿನ ಶಾಸಕ ಜಿಗ್ನೇಶ್ ಮೇವಾನಿ ಮಾತನಾಡಿದರು. ಕೋಸೌವೇಯ ಗೌಸ್ ಮೊಹಿದ್ದೀನ್ ಮತ್ತಿತರು ಮುಖಂಡರು ಭಾಗಿಯಾಗಿದ್ದರು.

ಗುರುವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ನಿಗದಿಯಾಗಿದ್ದ ಸ್ವಾಭಿಮಾನಿ ಸಮಾವೇಶ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಗರದ ಅಂಡೆಛತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾವೇಶ ಆರಂಭಕ್ಕೂ ಮುನ್ನ ಸಾರ್ವಜನಿಕರು ಸ್ಥಳದಲ್ಲಿ ಸೇರಿದ್ದರು. ಮೇವಾನಿ, ರೈ ಬಂದಾಗ ಜಯಘೋಷ ಮುಗಿಲು ಮುಟ್ಟಿತ್ತು. ಮೇವಾನಿ, ಪ್ರಕಾಶ್ ರೈ ಅವರ ಪ್ರತೀ ಮಾತಿಗೂ ಚಪ್ಪಾಳೆ ಮುಗಿಲು ಮುಟ್ಟಿತ್ತು. ಕಾರ್ಯಕ್ರಮದ ನಂತರ ಅಭಿಮಾನಿಗಳು ಇಬ್ಬರ ಸೆಲ್ಪಿಗೆ ಮುಗಿಬಿದ್ದರು. ಇದನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News