ಮದ್ದೂರು : ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರವಾಗಿ ಡಿಕೆಶಿ ಮತಯಾಚನೆ
ಮದ್ದೂರು,ಮೇ.3: ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳುತ್ತಾ ಜೆಡಿಎಸ್‍ಗೆ ಓಟು ಹಾಕಿ ಎನ್ನಲಾಗುತ್ತಿದೆ. ಅಂದರೆ, ಕುಮಾರಸ್ವಾಮಿ ಅವರು ಮಾತ್ರ ಮುಖ್ಯಮಂತ್ರಿ ಆಗಬೇಕು, ನಾವು ಆಗಬಾರದೇ? ಮುಖ್ಯಮಂತ್ರಿ ಸ್ಥಾನವೇನು ಪಂಚಾಯತ್ ಅಧ್ಯಕ್ಷರ ಸ್ಥಾನವೇ? ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರವಾಗಿ ಗುರುವಾರ ರೋಡ್ ಶೋ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಹೊರತುಪಡಿಸಿ ಯಾವುದೇ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಟೀಕಿಸಿದರು.
ಜೆಡಿಎಸ್ ಪಕ್ಷ ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಕೆಲವೇ ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಈ ಪಕ್ಷದ ಸಾಧನೆ ಪ್ರಾಬಲ್ಯವಿಲ್ಲ. ಜನಪ್ರಿಯ ಯೋಜನೆಗಳನ್ನು ಕೊಟ್ಟಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರ ಸರಕಾರ ಅನ್ನಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಯಾವುದೇ ಮತ, ಜಾತಿ, ಪಕ್ಷಪಾತವಿಲ್ಲದೆ ಜಾರಿಗೆ ತಂದು ಜನರ ವಿಶ್ವಾಸ ಗಳಿಸಿದೆ ಎಂದು ಅವರು ಹೇಳಿದರು.
ಎಸ್.ಎಂ.ಕೃಷ್ಣ ಅವರು ಡಿ.ಸಿ.ತಮ್ಮಣ್ಣ ಅವರು ಬಹಳ ಮೇಧಾವಿ ಎಂದು ಅವಕಾಶ ಮಾಡಿಕೊಟ್ಟರು. ಆದರೆ, ಅವರು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗಬೇಕಿದೆ. ಇದೀಗ ಯುವ ನಾಯಕನೊಬ್ಬ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದಾನೆ. ಆತನಿಗೆ ಸೂಕ್ತ ಅವಕಾಶ ಕಲ್ಪಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಮಾತನಾಡಿ, ರಾಜ್ಯ ಸರಕಾರವು ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಯೋಜನೆಗಳು ಮತಗಳಾಗಿ ಹರಿದು ಬರಲಿವೆ ಎಂದು ಆಶಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಜಿಲ್ಲಾ ಕಾಂಗ್ರಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿಪಂ ಮಾಜಿ ಅಧ್ಯಕ್ಷರಾದ ಎಸ್. ಗುರುಚರಣ್, ಕಂಠಿ ಸುರೇಶ್, ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್, ಸಂಗೀತ ನಿರ್ದೇಶಕ ಮದನ್ ಪಟೇಲ್, ಮುಖಂಡರಾದ ಲಕ್ಷ್ಮಣಕುಮಾರ್, ಕೆ.ಆರ್.ಮಹೇಶ್, ವಿ.ಕೆ.ಜಗದೀಶ್, ಪಿ.ಸಂದರ್ಶ, ಎಂ.ಪಿ.ಅಮರಬಾಬು, ಎಂ.ಸಿ.ಬಸವರಾಜು, ಸತೀಶ್, ಇತರರು ಹಾಜರಿದ್ದರು.
ಮೋದಿ ವಿರುದ್ಧ ರಾಜ್ ಬಬ್ಬರ್ ವಾಗ್ದಾಳಿ
ಉತ್ತರ ಪ್ರದೇಶದಲ್ಲಿ ನಿರಂತರ ಹತ್ಯೆಗಳು ಜರುಗುತ್ತಿದ್ದರೂ ಕ್ರಮ ಕೈಗೊಳ್ಳದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ಬಂದು ಗಂಟೆಗಟ್ಟಲೇ ಭಾಷಣ ಬಿಗಿಯುತ್ತಿರುವುದು ನಾಚಿಕೆಗೇಡು ಎಂದು ಚಿತ್ರನಟ, ಮಾಜಿ ಸಂಸದ ರಾಜ್ ಬಬ್ಬರ್ ಟೀಕಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಪರ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, 2014 ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸದ ಪ್ರಧಾನಿ, ಕಾಂಗ್ರೆಸ್ ಹಗರಣಗಳ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಕಾಂಗ್ರೆಸ್ ಬಗ್ಗೆ ಮಾತನಾಡುವ ಮೊದಲು ಬಿ.ಎಸ್.ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರು ಮಾಡಿರುವ ಹಗರಣಗಳ ಬಗ್ಗೆ ಮಾತನಾಡಲಿ ಎಂದು ಅವರು ಸವಾಲು ಹಾಕಿದರು.
ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು, ನೀವು ಜೆಡಿಎಸ್‍ಗೆ ನೀವು ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ. ಹೀಗಾಗಿ ರಾಜ್ಯದ ಕೋಮು ಸೌಹರ್ದತೆಗಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಾದೇಗೌಡರ ಕಾಲಿಗೆರಗಿದ ಡಿಕೆಶಿ
ಮದ್ದೂರು ಪಟ್ಟಣದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ರೋಡ್ ಶೋ ವಾಹನದಿಂದ ಇಳಿದು ಬಂದ ಸಚಿವ ಡಿ.ಕೆ.ಶಿವಕುಮಾರ್ ಮಾಜಿ ಸಂಸದ ಜಿ.ಮಾದೇಗೌಡರ ಕಾಲಿಗೆರಗಿ ಆಶೀರ್ವಾದ ಪಡೆದರು.