ಸುಳ್ಳು ಆರೋಪ ಮಾಡಿ ಮಠದಿಂದ ಹೊರ ಹಾಕಿಸಿದ್ದಾರೆ: ಶಿವಯೋಗಿ ಸ್ವಾಮಿ ಆರೋಪ

Update: 2018-05-03 17:42 GMT

ಬೆಂಗಳೂರು, ಮೇ 3: ನಾನು ಮದುವೆಯಾಗಿಲ್ಲ, ಮಕ್ಕಳಿಲ್ಲದಿದ್ದರೂ ನನಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿ ಸಚಿವ ವಿನಯ ಕುಲಕರ್ಣಿ ಮುರುಘಾ ಮಠದಿಂದ ಹೊರ ಹಾಕಿಸಿದ್ದಾರೆ ಎಂದು ಮುರುಘಾ ಮಠದ ಪೀಠಾಧಿಪತಿ ಶಿವಯೋಗಿ ಸ್ವಾಮಿ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "2008ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪರ ಮತಯಾಚನೆ ಮಾಡಿದೆ ಎಂಬ ದುರುದ್ಧೇಶದಿಂದ ವಿನಯ್ ಕುಲಕರ್ಣಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ತಮ್ಮ ಶಿಷ್ಯರ ಮೂಲಕ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ, ಪೀಠದಿಂದ ಹೊರ ಹಾಕಿಸಿದ್ದರು. ಅಂದಿನಿಂದ ಇಂದಿನವರೆಗೂ ನಾನು ನರಕಯಾತನೆ ಅನುಭವಿಸುತ್ತಿದ್ದೇನೆ ಎಂದು ಹೇಳಿದರು.

ಸಚಿವ ವಿನಯ ಕುಲಕರ್ಣಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದು, ಅದನ್ನು ನನ್ನ ಕೊರಳಿಗೆ ಕಟ್ಟಿ ಆತನು ಪಾರಾಗಲು ಪ್ರಯತ್ನಿಸಿದ್ದರು. ಹಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ನನ್ನ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಅಲ್ಲದೆ, ಕಾಲಿಗೆ ರಾಡ್‌ಗಳನ್ನು ಅಳವಡಿಸಿದ್ದಾರೆ. ಹೀಗಿದ್ದರೂ ನನಗೆ ಅನೈತಿಕ ಸಂಬಂಧವಿದೆ, ಮಠದ ಆಸ್ತಿಪಾಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಡುತ್ತಿದ್ದೇನೆ ಎಂಬ ಗಂಭೀರ ಆರೋಪ ಮಾಡಿ ಏಕಾಏಕಿ ಮಠದಿಂದ ಹೊರ ಹಾಕಿಸಿದ್ದಾರೆ ಎಂದು ದೂರಿದರು.

ವಿಜಯಲಕ್ಷ್ಮಿ ಸುಳ್ಳೊಳ್ಳಿ ಹಾಗೂ ಅವರ ತಂದೆ 30 ವರ್ಷಗಳಿಂದ ಮುರುಘಾ ಮಠದ ಕಟ್ಟಾ ಭಕ್ತರಾಗಿದ್ದಾರೆ. ಅವರು ಮಠದ ಹತ್ತಿರವೇ ವಾಸವಾಗಿದ್ದರು. ಅವರ ತಮ್ಮನ ಹಠಕ್ಕಾಗಿ ಅವರ ಮನೆಗೆ ಹೋಗುತ್ತಿದ್ದೆ. ನನ್ನ ಹಾಗೂ ಅವರ ನಡುವೆ ಯಾವುದೇ ಸಂಬಂಧವಿಲ್ಲ. ಆದರೆ, ಇದನ್ನೇ ನೆಪವಾಗಿಸಿಕೊಂಡು ಕುಲಕರ್ಣಿ ಪೀಠತ್ಯಾಗ ಮಾಡುವಂತೆ ಮಾಡಿಸಿದ್ದಾರೆ. ಇದರಿಂದ ನನಗೆ ಬಹಳ ಅನ್ಯಾಯವಾಗಿದೆ ಎಂದು ಅವಲತ್ತುಕೊಂಡರು.

ಕೆಲ ರಾಜಕಾರಣಿಗಳು, ಮಠಾಧೀಶರು ಹಾಗೂ ಮುರುಘಾ ಮಠದ ನಕಲಿ ಭಕ್ತರು ಸೇರಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದು, ಅದು ಸಫಲವಾಗಿಲ್ಲ. ಹೀಗಾಗಿ, ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಮಠದಿಂದ ಹೊರಗೆ ಹಾಕಿಸಿದ್ದಾರೆ. ಅಲ್ಲದೆ, ಈಗಲೂ ನನ್ನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ. ನನಗೆ ನ್ಯಾಯ ಸಿಗಬೇಕಿದೆ ಹಾಗೂ ಸಚಿವ ವಿನಯ ಕುಲಕರ್ಣಿ ಮೇಲೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News