ಜಾತಿ ಹುಣ್ಣಿನ ಮೇಲೆ ಉಣ್ಣಲು ಕುಳಿತ ನೊಣಗಳು!

Update: 2018-05-04 05:25 GMT

ಗ್ರಾಮ ವಾಸ್ತವ್ಯ, ದಲಿತರ ಮನೆಯಲ್ಲಿ ವಾಸ್ತವ್ಯ ಎಂಬ ರಾಜಕಾರಣ ತೀವ್ರ ಚರ್ಚೆಯಾದುದು ಕುಮಾರ ಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ. ದಲಿತರೊಬ್ಬರ ಮನೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಂಗುವ ವಿಷಯ ಬೇರೆ ಬೇರೆ ರೀತಿಯಲ್ಲಿ ಧನಾತ್ಮಕವಾಗಿ ಮತ್ತು ಋಣಾತ್ಮಕವಾಗಿ ಚರ್ಚಿಸಲ್ಪಟ್ಟಿತು. ‘ಇದು ಅಸ್ಪಶ್ಯತೆಯ ಪೋಷಣೆಯ ಇನ್ನೊಂದು ರೂಪ. ಪರೋಕ್ಷವಾಗಿ ದಲಿತರಿಗೆ ಮಾಡುವ ಅವಮಾನ’ ಎಂದೂ ಬಣ್ಣಿಸಲ್ಪಟ್ಟಿತ್ತು. ಮುಖ್ಯಮಂತ್ರಿಯ ವಾಸ್ತವ್ಯಕ್ಕಾಗಿ ಬಂದಿದ್ದ ಐಶಾರಾಮಿ ಸಲಕರಣೆಗಳು ಅವರ ಜೊತೆಗೇ ವಾಪಸ್ ಹೋದದ್ದನ್ನೂ ಟೀಕಿಸಲಾಯಿತು. ಇದೇ ಸಂದರ್ಭದಲ್ಲಿ, ಮುಖ್ಯಮಂತ್ರಿಯೊಬ್ಬ ನೇರವಾಗಿ ಪ್ರಜೆಗಳ ಮನೆಯಲ್ಲಿ ತಂಗಿ ಆ ಊರಿನ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಜನರಿಗೆ ಹತ್ತಿರವಾಗಲು ಸಾಧ್ಯ ಎಂದು ಕೆಲವು ಚಿಂತಕರು ಅಭಿಪ್ರಾಯಪಟ್ಟರು. ಅದೇನೇ ಇದ್ದರೂ, ಈ ಗ್ರಾಮವಾಸ್ತವ್ಯ ಕುಮಾರಸ್ವಾಮಿಗೆ ಒಂದಿಷ್ಟು ಜನಪ್ರಿಯತೆಯನ್ನು ನೀಡಿತು ಎನ್ನುವುದು ಸುಳ್ಳಲ್ಲ.

ಇದಾದ ಬಳಿಕ ಸುದ್ದಿಯಾದದ್ದು ಪೇಜಾವರ ಶ್ರೀಗಳ ದಲಿತ ಕೇರಿ ಭೇಟಿ. ದಲಿತರ ಕೇರಿಗೆ ತೆರಳಿದ ಪೇಜಾವರ ಶ್ರೀಗಳು ತಮ್ಮ ಪಾದಗಳನ್ನು ತೊಳೆಯಲು ದಲಿತರಿಗೆ ‘ಅವಕಾಶ’ವನ್ನು ನೀಡಿದರು. ಕ್ರೈಸ್ತ ಧರ್ಮದ ಜಾಗತಿಕ ನಾಯಕ ಪೋಪ್ ವರ್ಷಕ್ಕೊಮ್ಮೆ ತಮ್ಮ ಕೈಯಾರೆ ಭಕ್ತರ ಪಾದಗಳನ್ನು ತೊಳೆಯುವ ಪದ್ಧತಿ ಇದೆ. ಮನುಷ್ಯ ಮನುಷ್ಯನ ಪಾದ ಮುಟ್ಟುವುದು, ತೊಳೆಯುವುದು ಗುಲಾಮತನದ ಸಂಕೇತವಾದರೂ, ಒಬ್ಬ ಹಿರಿಯ ಧರ್ಮಾಧಿಕಾರಿ ಭಕ್ತರ ಪಾದ ತೊಳೆಯುವುದಕ್ಕೂ ಭಕ್ತ ಧರ್ಮಾಧಿಕಾರಿಯ ಪಾದ ತೊಳೆಯುವುದಕ್ಕೂ ವ್ಯತ್ಯಾಸವಿದೆ. ಪೋಪ್ ಭಕ್ತರ ಪಾದ ತೊಳೆದರೆ ಅದು ಸಮಾನತೆಯನ್ನು ಸಾಂಕೇತಿಸುತ್ತದೆ. ಅದೇ ಭಕ್ತ ಪೋಪ್‌ನ ಪಾದ ತೊಳೆದಾಗ ಅದು ಅಸಮಾನತೆಯನ್ನು ಎತ್ತಿ ಹಿಡಿಯುತ್ತದೆ. ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗಿ ಅವರ ಪಾದವನ್ನು ತೊಳೆದಿದ್ದರೆ ನಿಜಕ್ಕೂ ಅದು ಸಮಾಜಕ್ಕೆ ಅತಿ ದೊಡ್ಡ ಸಂದೇಶವನ್ನು ನೀಡುತ್ತಿತ್ತು. ಆದರೆ ಅಲ್ಲಿ ಪೇಜಾವರಶ್ರೀಗಳು ತನ್ನ ಪಾದವನ್ನೇ ದಲಿತರ ಕೈಯಲ್ಲಿ ತೊಳೆಸಿ ಅದನ್ನೇ ಅವರಿಗೆ ಮಾಡಿದ ಮಹದುಪಕಾರವೆಂಬಂತೆ ಬಿಂಬಿಸಿದರು. ಇದರಿಂದ ದಲಿತರು ಇನ್ನಷ್ಟು ಅವಮಾನಿತರಾದರೇ ಹೊರತು ಅವರ ಬದುಕಿನ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಇದೀಗ ದಲಿತರ ಮನೆಯಲ್ಲಿ ವಾಸ್ತವ್ಯದ ಕೆಟ್ಟ ರಾಜಕಾರಣವನ್ನು ಕೇಂದ್ರದಲ್ಲಿ ಬಿಜೆಪಿ ಮಾಡಲು ಹೊರಟಿದೆ.

ಆರೆಸ್ಸೆಸ್‌ನ ಕುಮ್ಮಕ್ಕಿನಿಂದ ಬಿಜೆಪಿ ದೇಶಾದ್ಯಂತ ದಲಿತರ ಆಕ್ರೋಶವನ್ನು ಕಟ್ಟಿಕೊಂಡಿದೆ. ಕೋರೆಗಾಂವ್ ವಿಜಯ ದಿನಾಚರಣೆಯ ಬಳಿಕ ಈ ಆಕ್ರೋಶ ಬಹಿರಂಗವಾಗಿ ಸ್ಫೋಟಗೊಂಡಿದೆ. ದಲಿತರ ಮೇಲೆ ಸಾಮೂಹಿಕ ದೌರ್ಜನ್ಯ ನಡೆಯುತ್ತಿರುವ ಬೆನ್ನಿಗೇ ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ನ್ಯಾಯಾಲಯದ ಮೂಲಕ ಸರಕಾರ ದುರ್ಬಲಗೊಳಿಸಿತು. ಇದನ್ನು ವಿರೋಧಿಸಿ ದಲಿತರು ಬೀದಿಗಿಳಿದರು. ಉತ್ತರ ಭಾರತ ರಣರಂಗವಾಯಿತು. ಪ್ರತಿಭಟನೆ ನಡೆಸಿದ ದಲಿತರ ಮೇಲೆ ಪೊಲೀಸರು ಮಾತ್ರವಲ್ಲ, ಬಿಜೆಪಿ ಮುಖಂಡರೂ ಗುಂಡು ಹಾರಿಸಿದ ಪ್ರಕರಣಗಳು ವರದಿಯಾಗಿವೆ. 10ಕ್ಕೂ ಅಧಿಕ ಮಂದಿ ಮೃತಪಟ್ಟರು. ಇದೇ ಸಂದರ್ಭದಲ್ಲಿ ಸಂಘಪರಿವಾರದ ನಾಯಕರು ಮೀಸಲಾತಿ ಮತ್ತು ಸಂವಿಧಾನ ಬದಲಾವಣೆಗಳ ಕುರಿತಂತೆ ಮಾತನಾಡ ತೊಡಗಿದರು. ಅಷ್ಟೇ ಅಲ್ಲ, ಇದನ್ನು ಪ್ರತಿಭಟಿಸಿದ ದಲಿತ ನಾಯಕರನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ‘ಬೀದಿ ನಾಯಿಗಳು’ ಎಂದು ಕರೆದರು.

ಇದರ ವಿರುದ್ಧ ಕರ್ನಾಟದಲ್ಲಿ ಅಮಿತ್ ಶಾ ಎದುರಿಗೇ ದಲಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಎಲ್ಲ ರಾಜ್ಯಗಳಲ್ಲಿ ದಲಿತರು ಬಿಜೆಪಿ ಮತ್ತು ಸಂಘಪರಿವಾರಕ್ಕೆ ತಿರುಗಿ ಬಿದ್ದಿದ್ದಾರೆ. ಇದೀಗ ದಲಿತರ ಆಕ್ರೋಶವನ್ನು ತಣಿಸಲು ಬಿಜೆಪಿಯ ನಾಯಕರು ‘ದಲಿತರ ಮನೆಯಲ್ಲಿ ಊಟ ಮಾಡುವ’ ಹೊಸ ಪ್ರಹಸನಕ್ಕೆ ಇಳಿದಿದ್ದಾರೆ. ಆದರೆ ಅದೂ ಕೂಡ ಬಿಜೆಪಿಯ ನಾಯಕರಿಗೆ ತಿರುಗು ಬಾಣವಾಗುವ ಸೂಚನೆಗಳು ಕಾಣುತ್ತಿವೆ. ಪ್ರಾಮಾಣಿಕತೆಯಿಲ್ಲದ ಈ ಕಪಟ ವಾಸ್ತವ್ಯ ದೇಶದ ದಲಿತರ ಗಾಯಗಳಿಗೆ ಬರೆ ಎಳೆಯುವಂತಿದೆ. ಉತ್ತರ ಪ್ರದೇಶದ ಬಿಜೆಪಿ ಸಚಿವನೊಬ್ಬ ದಲಿತರ ಮನೆಯಲ್ಲಿ ಊಟ ಮಾಡಿದ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ದಲಿತನ ಮನೆಗೆ ಭೇಟಿ ನೀಡಿದ ಸಚಿವ, ಹೊರಗಿನಿಂದ ಪಾರ್ಸೆಲ್ ಊಟ ತರಿಸಿ ಉಂಡಿದ್ದಾರೆ. ನೀರನ್ನು ಕೂಡ ಹೊರಗಿನಿಂದ ತರಿಸಿದ್ದಾರೆ ಎಂದ ಮೇಲೆ ದಲಿತರ ಕುರಿತಂತೆ ಈ ಸಚಿವರ ಮನಸ್ಥಿತಿಯೇನು ಎನ್ನುವುದನ್ನು ವಿವರಿಸುವ ಅಗತ್ಯವಿದೆಯೇ? ಜೊತೆಗೆ ಕೆಲವು ಬಿಜೆಪಿ ನಾಯಕರ ಹೇಳಿಕೆಗಳಂತೂ ಬೆಚ್ಚಿ ಬೀಳಿಸುವಂತಿದೆ. ಉತ್ತರ ಪ್ರದೇಶದ ಸಂಸದರೊಬ್ಬರು ‘‘ಬಿಜೆಪಿಯ ನಾಯಕರು ದಲಿತರ ಮನೆಯಲ್ಲಿ ಊಟ ಮಾಡುವುದೆಂದರೆ ಶ್ರೀರಾಮನೇ ಊಟ ಮಾಡಿದಂತೆ’’ ಎಂದು ಹೇಳಿದ್ದಾರೆೆ. ಅವರ ಪ್ರಕಾರ, ಬಿಜೆಪಿಯ ರಾಜಕಾರಣಿಗಳು ದಲಿತರ ಮನೆಯಲ್ಲಿ ಊಟ ಮಾಡುವುದರಿಂದ ದಲಿತರು ಪವಿತ್ರರಾಗುತ್ತಾರಂತೆ. ಈ ಹೇಳಿಕೆಯನ್ನು ಸ್ವತಃ ಕೇಂದ್ರ ಸಚಿವೆ ಉಮಾಭಾರತಿಯೇ ಖಂಡಿಸಿದ್ದಾರೆ.

‘‘ದಲಿತರನ್ನು ಪವಿತ್ರಗೊಳಿಸಲು ನಾನು ಶ್ರೀರಾಮನಲ್ಲ’’ ಎಂದು ಉಮಾಭಾರತಿ ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಇದು ಕೂಡ ದಲಿತರ ನಿಂದನೆಯೇ ಆಗಿದೆ. ಇವರೆಲ್ಲರೂ ಒಂದೇ ಧ್ವನಿಯಲ್ಲಿ ಹೇಳುತ್ತಿರುವುದು ಏನೆಂದರೆ ‘ದಲಿತರು ಅಪವಿತ್ರರು’. ನೌಗಾಂವ್‌ನಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಭೋಜನ ಕೂಟದಲ್ಲಿ ಆಹಾರ ಸೇವಿಸಲು ನಿರಾಕರಿಸಿದ ಉಮಾಭಾರತಿ, ‘‘ದಲಿತರನ್ನು ಪವಿತ್ರಗೊಳಿಸಲು ನಾನು ಶ್ರೀರಾಮನಲ್ಲ. ದಲಿತರು ನಮ್ಮ ಮನೆಗೆ ಆಗಮಿಸಿ ಹಾಗೂ ನಮ್ಮಿಂದಿಗೆ ಆಹಾರ ಸೇವಿಸಿದರೆ ಆಗ ನಾವು ಪವಿತ್ರರಾಗುತ್ತೇವೆ’’ ಎಂದಿದ್ದಾರೆ. ಉಮಾಭಾರತಿಯ ಮಾತಿನ ಕೊನೆಯಲ್ಲಿ ಪ್ರಬುದ್ಧತೆಯಿದೆ. ಬಿಜೆಪಿಯ ಸಚಿವನ ಹೇಳಿಕೆಯನ್ನು ಈ ಮೂಲಕ ಅವರು ಖಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಇನ್ನೊಂದು ಹೇಳಿಕೆಯನ್ನೂ ಉಮಾ ಭಾರತಿ ಸೇರಿಸಿದ್ದಾರೆ. ‘‘ದಲಿತರೊಂದಿಗೆ ಪಕ್ಷ ಉತ್ತಮ ಸಂಬಂಧ ಹೊಂದಿದೆ ಎಂಬುದಕ್ಕೆ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿರುವುದೇ ಸಾಕ್ಷಿ’’ ಎಂದು. ಮೇಲ್ನೋಟಕ್ಕೆ ಉಮಾಭಾರತಿಯವರ ಮಾತುಗಳು ಸರಿಯೇ ಇದೆ. ಆದರೆ ಮನುವಾದದಲ್ಲಿ ಇನ್ನೂ ನಂಬಿಕೆ ಇರಿಸಿಕೊಂಡಿರುವ ಪಕ್ಷವೊಂದು ದಲಿತನನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತದೆ ಎಂದರೆ ಅದನ್ನು ಅನುಮಾನದ ಕಣ್ಣಿನಿಂದ ನೋಡಬೇಕಾಗುತ್ತದೆ.

ದಲಿತ ರಾಷ್ಟ್ರಪತಿಯ ಮುಖಾಂತರವೇ ಸಂವಿಧಾನವನ್ನು ಬದಲಿಸುವ ಹುನ್ನಾರಗಳೂ ಇದರ ಹಿಂದಿರಬಹುದು. ಹೇಗೆ ಕೋಮುಗಲಭೆಗಳಲ್ಲಿ ದಲಿತರು, ಹಿಂದುಳಿದವರ್ಗದವರನ್ನು ಸಂಘಪರಿವಾರ ಬಳಸಿಕೊಳ್ಳುತ್ತಿದೆಯೋ ಹಾಗೆಯೇ, ದಲಿತರ ವಿರೋಧಿ ಕಾನೂನನ್ನು ಜಾರಿಗೊಳಿಸಲು, ಮೀಸಲಾತಿಯನ್ನು ಕಿತ್ತು ಹಾಕಲು, ಸಂವಿಧಾನವನ್ನು ಬದಲಿಸಲು ಬಿಜೆಪಿ ದಲಿತರನ್ನೇ ಬಳಸಿಕೊಳ್ಳಲು ಹೊರಟಿದೆ. ಸಂಘಪರಿವಾರದ ಚಿಂತನೆಗಳನ್ನು ತಲೆಯೊಳಗೆ ತುಂಬಿಕೊಂಡ ದಲಿತ ಮುಖಂಡನೊಬ್ಬನನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕುಳ್ಳಿರಿಸಿದರೆ ಅದರಿಂದ ದಲಿತ ಸಮುದಾಯಕ್ಕೆ ಇನ್ನಷ್ಟು ಅಪಾಯವಿದೆ. ದಲಿತರನ್ನು ರಾಷ್ಟ್ರಪತಿ ಮಾಡಿದ ಬಳಿಕವೂ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಯಾಕೆ ಹೆಚ್ಚುತ್ತಿವೆ? ದಲಿತ ದೌರ್ಜನ್ಯದ ಕಾಯ್ದೆಯನ್ನು ನ್ಯಾಯಾಲಯ ಯಾಕೆ ದುರ್ಬಲಗೊಳಿಸಿತು? ಪ್ರತಿಭಟನೆಗಾಗಿ ಬೀದಿಗಿಳಿದ ದಲಿತರನ್ನು ಗೋಲಿಬಾರ್‌ನಲ್ಲಿ ಯಾಕೆ ಸಾಯಿಸಲಾಯಿತು? ಈ ಪ್ರಶ್ನೆಗೂ ಉಮಾ ಭಾರತಿ ಉತ್ತರಿಸಬೇಕಾಗಿದೆ.

ದಲಿತರ ಮನೆಯಲ್ಲಿ ಊಟ ಮಾಡುವುದೇ ಸಾಧನೆ, ಕ್ರಾಂತಿ ಎಂದು ಭಾವಿಸುವವರು ಇನ್ನೂ ಮನು ಸಿದ್ಧಾಂತದ ಕೊಳಚೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ. ದಲಿತರ ಮನೆಯಲ್ಲಿ ಉಣ್ಣುವುದರಿಂದ ದಲಿತರು ಪವಿತ್ರರಾಗುವುದಿಲ್ಲ. ಸಂವಿಧಾನ ದಲಿತರಿಗೆ ಏನೆಲ್ಲ ಹಕ್ಕುಗಳನ್ನು ನೀಡಿದೆಯೋ ಅದನ್ನು ಅವರಿಗೆ ಎಟಕುವಂತೆ ಮಾಡಿದರೆ ಸಾಕು, ದಲಿತರು ತಮಗೆ ತಾವೇ ಉದ್ಧಾರವಾಗಬಲ್ಲರು. ಈ ನಿಟ್ಟಿನಲ್ಲಿ ಸರಕಾರ ಯಾವ ಕ್ರಮ ತೆಗೆದುಕೊಂಡಿದೆ ಎನ್ನುವುದರ ವಿವರಗಳನ್ನು ಬಿಜೆಪಿ ನಾಯಕರು ದೇಶದ ದಲಿತರಿಗೆ ನೀಡಲಿ. ಇದು ಬಿಟ್ಟು ದಲಿತರನ್ನು ಪವಿತ್ರಗೊಳಿಸಲು ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಊಟಮಾಡುವುದೆಂದರೆ ಜಾತಿಯೆಂಬ ಹುಣ್ಣಿನ ಮೇಲೆ ನೊಣಗಳು ಕುಳಿತು ಉಂಡಂತೆ. ಇದರಿಂದ ಹುಣ್ಣು ಇನ್ನಷ್ಟು ವಿಕಾರವಾಗುತ್ತದೆಯೇ ಹೊರತು ಗುಣವಾಗದು. ಮಹಾತ್ಮಾಗಾಂಧೀಜಿ ದಲಿತರನ್ನು ‘ಹರಿಜನರು’ ಎಂದು ಕರೆದು ಅನುಕಂಪ ತೋರಿಸಿದಾಗ ‘ದಲಿತರು ದೇವರ ಮಕ್ಕಳಾದರೆ ಉಳಿದವರು ದೆವ್ವದ ಮಕ್ಕಳೇ?’ ಎಂದು ಅಂಬೇಡ್ಕರ್ ಅಬ್ಬರಿಸಿದ್ದನ್ನು ನಾವಿಂದು ಸ್ಮರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News