ಮೇ 12 ರಂದು ಶಾಲಾ-ಕಾಲೇಜು ಸಹಿತ ಖಾಸಗಿ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ
ಬೆಂಗಳೂರು, ಮೇ 4: ರಾಜ್ಯ ವಿಧಾನಸಭೆಗೆ ಇದೇ 12 ರಂದು ಜರುಗಲಿರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಚೇರಿಗಳಿಗೆ, ಶಾಲೆ-ಕಾಲೇಜುಗಳಿಗೆ, ಸಂಘ-ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ ಮೇ 12ಕ್ಕೆ ಸಾರ್ವತ್ರಿಕ ರಜೆ ಘೋಷಿಸಿದೆ.
ಈ ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರಕಾರಿ ನೌಕರರು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದ್ದು. ಆಯಾ ಕ್ಷೇತ್ರಗಳಲ್ಲಿ ಮತದಾನವು ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಮತಗಟ್ಟೆ ಸ್ಥಾಪಿಸಲು ಸರಕಾರಿ ಕಚೇರಿಗಳಲ್ಲಿ ಹಾಗೂ ಸರಕಾರಿ ಶಾಲೆಗಳನ್ನು ಮೇ 11ಕ್ಕೆ (ಪೂರ್ವ ತಯಾರಿಗಾಗಿ) ನೀಡತಕ್ಕದ್ದು. ಅಲ್ಲದೆ, ಮೇ 15ರಂದು ಮತ ಎಣಿಕೆ ನಡೆಯುವ ಕೇಂದ್ರಗಳಲ್ಲಿ ಮಾತ್ರ ರಜೆ ಘೋಷಿಸುವ ಅವಶ್ಯಕತೆ ಇದ್ದಲ್ಲಿ ಸಂಬಂಧಪಟ್ಟ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳತಕ್ಕದ್ದು ಎಂದು ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವೇತನ ಸಹಿತ ರಜೆ: ಎಲ್ಲ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕುಗಳು, ಇತರೆ ಬ್ಯಾಂಕುಗಳು ಹಾಗೂ ಕೈಗಾರಿಕೆಗಳು, ಸಾರ್ವಜನಿಕ ಸಂಸ್ಥೆಗಳು ಖಾಯಂ ಮತ್ತು ದಿನಗೂಲಿ ನೌಕರರಿಗೆ ಮತದಾನದ ದಿನ (ಮೇ 12) ವೇತನ ಸಹಿತ ರಜೆ ನೀಡಬೇಕು ಎಂದು ಆದೇಶದಲ್ಲಿ ನಿರ್ದೇಶಿಸಲಾಗಿದೆ.