ಆದಿತ್ಯನಾಥ್ ಮುಖ ನೋಡಿ ಯಾರೂ ಮತ ಹಾಕುವುದಿಲ್ಲ: ಬಾಲಿವುಡ್ ಹಿರಿಯ ನಟ ರಾಜ್ ಬಬ್ಬರ್

Update: 2018-05-04 14:54 GMT

ಮೈಸೂರು,ಮೇ.4: ಉತ್ತರ ಪ್ರದೇಶದಲ್ಲಿ ಮಳೆ, ಬಿರುಗಾಳಿಗೆ ಜನಸಾಮಾನ್ಯರು ಸಾಯುತ್ತಿದ್ದರೆ, ಇತ್ತ ಸಿಎಂ ಆದಿತ್ಯನಾಥ್ ಬಿಜೆಪಿ ಪರ ಸ್ಟಾರ್ ಕ್ಯಾಂಪೇನ್ ಆಗಿ ಪ್ರಚಾರ ನಡೆಸುತ್ತಿದ್ದಾರೆ. ಇವರ ಮುಖ ನೋಡಿ ಯಾರು ಮತ ಹಾಕುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಹಾಗು ಬಾಲಿವುಡ್ ಹಿರಿಯ ನಟ ರಾಜ್ ಬಬ್ಬರ್ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದ ಹಲವು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪ್ರಚಾರ ನಡೆಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಆದಿತ್ಯನಾಥ್ ಮುಖ ನೋಡಿ ಇಲ್ಲಿ ಯಾರು ಮತಹಾಕುವುದಿಲ್ಲ, ಅವರ ಉಡುಗೆಗೂ ನಡವಳಿಕೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದಿತ್ಯನಾಥ್ ಇಲ್ಲಿ ಬಂದು ನಾಟಕವಾಡಿದರೆ ಜನ ಮರುಳಾಗುವುದಿಲ್ಲ ಎಂದ ಅವರು, ಬಿಜೆಪಿಯ ಅವನತಿ ಹಾದಿ ಕರ್ನಾಟಕದಿಂದಲೇ ಆರಂಭವಾಗಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪ್ರಣಾಳಿಕೆ ಬಡವರ ಪರವಾಗಿದೆ. ಬಿಜೆಪಿ ಪ್ರಣಾಳಿಕೆ ಫೈವ್ ಸ್ಟಾರ್ ಸಂಸ್ಕೃತಿಯದ್ದಾಗಿದೆ. ಕಾಂಗ್ರೆಸ್ ಜನಸಾಮಾನ್ಯರ ಜೊತೆ ಕುಳಿತು ಪ್ರಣಾಳಿಕೆ ಸಿದ್ದಪಡಿಸಿದೆ. ಆದರೆ ಬಿಜೆಪಿ ಆರೆಸ್ಸೆಸ್ ಕಚೇರಿಯಲ್ಲಿ ಕುಳಿತು ಸಿದ್ದಪಡಿಸಿದೆ ಎಂದು ಟೀಕಿಸಿದರು.

ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರಿಗೆ ಕುಟುಂಬ ಇದ್ದ ಹಾಗೆ. ಇಲ್ಲಿಯ ಜನರು ಸಿದ್ದರಾಮಯ್ಯ ಕುಟುಂಬಸ್ಥರು. ಸಿದ್ದರಾಮಯ್ಯ ಸರಕಾರ  ಬಡವರ ಹಾಗೂ ಅಲ್ಪಸಂಖ್ಯಾತರ ಪರವಾಗಿದೆ ಎಂದರು.  

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ರಾಜ್ ಬಬ್ಬರ್, ಅಧಿಕಾರಕ್ಕೆ ಬರುವ ಮೊದಲು ಎಲ್ಲಾ ವರ್ಗಗಳ ಬೆಂಬಲ ಪಡೆದ ಇವರು ಅಧಿಕಾರಕ್ಕೆ ಬಂದ ಮೇಲೆ ದಲಿತರು ಅಲ್ಪಸಂಖ್ಯಾತರನ್ನು ತುಳಿಯುವ ಯತ್ನಕ್ಕೆ ಕೈಹಾಕಿದ್ದಾರೆ. ಇವರ ಬಣ್ಣ ಈಗ ಬಯಲಾಗಿದ್ದು, ಇವರ ಮಾತನ್ನು ಯಾರು ನಂಬುವುದಿಲ್ಲ ಎಂದು ಹೇಳಿದರು. ಇನ್ನು ಜೆಡಿಎಸ್ ಮತ್ತು ಬಿಜೆಪಿಯವರು ತಮ್ಮ ಕಾಲುಗಳನ್ನು ತಾವೇ ಎಳೆದುಕೊಳ್ಳುತ್ತಿದಾರೆ ಎಂದು ಟೀಕಿಸಿದರು.

ಇದೇ ವೇಳೆ ನಿರ್ದೇಶಕ ರಾಜೇಂದ್ರ ಸಿಂಗ್‍ಬಾಬು, ನಟಿ ರಿಷಿಕಾ ಸಿಂಗ್, ಕಾಂಗ್ರೆಸ್ ಮುಖಂಡ ಮದನ್ ಪಟೇಲ್ ಹಾಜರಿದ್ದು, ಪ್ರಚಾರ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News