ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 10 ದಿನಗಳಲ್ಲಿ ರೈತರ ಸಾಲ ಮನ್ನಾ: ರಾಹುಲ್‌ ಗಾಂಧಿ

Update: 2018-05-04 14:59 GMT

ಕಲಬುರ್ಗಿ, ಮೇ 4: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರದ ಅಧಿಕಾರಾವಧಿಯು ಇನ್ನೂ ಒಂದು ವರ್ಷ ಬಾಕಿಯಿದೆ. ಆದರೂ, ಅವರಿಂದ ರೈತರ ಸಾಲ ಮನ್ನಾ ಅಸಾಧ್ಯ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದಾರೆ.

ಶುಕ್ರವಾರ ಕಲಬುರ್ಗಿ ಜಿಲ್ಲೆಯ ಕಾಳಗಿ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ 10 ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗುವುದು ಎಂದರು.

ನರೇಂದ್ರ ಮೋದಿ ಮಾತೆತ್ತಿದ್ದರೆ ಬೇಟಿ ಪಡಾವೋ, ಬೇಟಿ ಬಚಾವೋ ಎನ್ನುತ್ತಾರೆ. ಆದರೆ, ಈಗ ಅದನ್ನು ಸ್ವಲ್ಪ ಮಾರ್ಪಡಿಸಿ ಬೇಟಿ ಬಚಾವೋ ಬಿಜೆಪಿ ಎಂಎಲ್‌ಎ ಸೆ ಎಂದಾಗಿದೆ. ರಕ್ಷಣೆ ಮಾಡಬೇಕಾದವರೆ ಭಕ್ಷಣೆ ಮಾಡಲು ಇಳಿದಿದ್ದಾರೆ ಎಂದು ರಾಹುಲ್‌ಗಾಂಧಿ ವಾಗ್ದಾಳಿ ನಡೆಸಿದರು.

ಬಿಜೆಪಿ ಮುಖಂಡರು ನಡೆಸುತ್ತಿರುವ ದೌರ್ಜನ್ಯಗಳು, ಕಂದಮ್ಮಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಬಗ್ಗೆ ನರೇಂದ್ರಮೋದಿ ಯಾಕೆ ಮಾತನಾಡುವುದಿಲ್ಲ. ಬಸವಣ್ಣ ನುಡಿದಂತೆ ನಡೆ ಎಂದಿದ್ದಾರೆ. ಆದರೆ ಮೋದಿ ನುಡಿದಂತೆ ನಡೆಯದೆ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ ಎಂದು ಅವರು ದೂರಿದರು.

ದಲಿತರ ಪರವಾಗಿ ಮೋದಿ ಮಾತನಾಡುತ್ತಾರೆ. ಆದರೆ, ಬಿಜೆಪಿ ಮುಖಂಡರಿಂದಲೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದಾಗಿ ಹೇಳುತ್ತಾರೆ. ಅವರ ಅಕ್ಕ-ಪಕ್ಕದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದ ಯಡಿಯೂರಪ್ಪ ಸೇರಿದಂತೆ ನಾಲ್ವರು ಭ್ರಷ್ಟ ಸಚಿವರು ಕುಳಿತಿರುತ್ತಾರೆ ಎಂದು ರಾಹುಲ್‌ಗಾಂಧಿ ಹೇಳಿದರು.

‘ನುಡಿದಂತೆ ನಡೆ ಮೋದೀಜಿ’ ದೇಶದ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಜಾರಿಗೆ ತನ್ನಿ. ನನ್ನ ವಿರುದ್ಧ ಹಗುರವಾದ ಮಾತುಗಳನ್ನಾಡಿ ನನ್ನ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ. ನಾನು ಪ್ರಧಾನಿ ಸ್ಥಾನಕ್ಕೆ ಗೌರವ ನೀಡುತ್ತೇನೆಯೆ ಹೊರತು, ನರೇಂದ್ರ ಮೋದಿಗಲ್ಲ ಎಂದು ಅವರು ತಿಳಿಸಿದರು.
ನಾನು ಮುಂದಿನ ದಿನಗಳಲ್ಲಿಯೂ ನಿಮ್ಮ ಬಳಿ ಪ್ರಶ್ನೆಗಳನ್ನು ಕೇಳುತ್ತಲೆ ಹೋಗುತ್ತೇನೆ. ನಾನು ಮೋದಿಗೆ ಹೆದರುವುದಿಲ್ಲ. ಕಳ್ಳರನ್ನು ವಿಧಾನಸೌಧ ಪ್ರವೇಶಿಸಲು ಬಿಡುವುದಿಲ್ಲ ಎಂದು ರಾಹುಲ್‌ಗಾಂಧಿ ಹೇಳಿದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನನ್ನ ಆಸ್ತಿ ಎಷ್ಟು ಎಂದು ಪ್ರಶ್ನಿಸುತ್ತಾರೆ. ಕೇಂದ್ರದಲ್ಲಿ ನಿಮ್ಮದೆ ಸರಕಾರವಿದ್ದು, ಯಾವುದೆ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸಿ, ಅಕ್ರಮ ಆಸ್ತಿ ಗಳಿಸಿದ್ದರೆ ನನ್ನನ್ನು ಜೈಲಿಗೆ ಕಳುಹಿಸಿ ಎಂದು ಸವಾಲು ಹಾಕಿದರು.

ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದೇಶದಲ್ಲಿ ಪ್ರತಿಭಟನೆ ಎದುರಿಸಿದ ಮೊದಲ ಪ್ರಧಾನಿ
ದೇಶದ ಮಹಿಳೆಯರಿಗೆ ರಕ್ಷಣೆ ನೀಡಲು ವಿಫಲವಾಗಿದ್ದೀರ ಎಂದು ವಿದೇಶಿ ನೆಲದಲ್ಲಿ ಪ್ರತಿಭಟನೆಗಳನ್ನು ಎದುರಿಸಿದ ಮೊದಲ ಪ್ರಧಾನಿ ನರೇಂದ್ರಮೋದಿ. ಈ ಹಿಂದೆ ಅಧಿಕಾರ ನಡೆಸಿದ ಜವಾಹರ್‌ಲಾಲ್ ನೆಹರು, ಇಂದಿರಾಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್‌ಸಿಂಗ್, ಎಚ್.ಡಿ.ದೇವೇಗೌಡ ಸೇರಿದಂತೆ ಯಾವ ಪ್ರಧಾನಿಯೂ ವಿದೇಶಿ ನೆಲದಲ್ಲಿ ಪ್ರತಿಭಟನೆ ಎದುರಿಸಿಲ್ಲ ಎಂದು ರಾಹುಲ್‌ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News