ಶಿವಮೊಗ್ಗ: ರಸ್ತೆ ಅಪಘಾತ; ಕಾರು ಚಾಲಕ ಸ್ಥಳದಲ್ಲೇ ಮೃತ್ಯು
ಶಿವಮೊಗ್ಗ, ಮೇ 4: ಚಲಿಸುವ ಲಾರಿಯ ಮುಂಬದಿಯ ಎರಡು ಚಕ್ರಗಳು ಕಳಚಿ ಕಾರಿಗೆ ಬಡಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಟಿಪ್ಪು ನಗರದ ನಿವಾಸಿ, ಮಂಡಗದ್ದೆಯಲ್ಲಿ ಗ್ಯಾರೇಜ್ ಶಾಪ್ ಇಟ್ಟುಕೊಂಡಿರುವ ಸೊಹೈಲ್ (31) ಮೃತಪಟ್ಟ ಕಾರು ಚಾಲಕ ಎಂದು ಗುರುತಿಸಲಾಗಿದೆ. ಇವರು ವಿವಾಹಿತರಾಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಘಟನೆಯ ವಿವರ: ಬುಧವಾರ ರಾತ್ರಿ 11.30 ಸರಿಸುಮಾರಿಗೆ ಸೊಹೈಲ್‍ರವರು ಮಂಡಗದ್ದೆಯಿಂದ ಶಿವಮೊಗ್ಗದೆಡೆಗೆ ಕಾರು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಈ ವೇಳೆ ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗದೆಡೆಗೆ ಇವರ ಹಿಂಬದಿಯಿಂದ ಲಾರಿಯೊಂದು ವೇಗವಾಗಿ ಆಗಮಿಸುತ್ತಿತ್ತು. ಈ ವೇಳೆ ಲಾರಿಯ ಮುಂಬದಿಯ ಎರಡೂ ಚಕ್ರಗಳು ದಿಢೀರ್ ಆಗಿ ಕಳಚಿಕೊಂಡು, ಕಾರಿಗೆ ಬಡಿದಿವೆ ಎನ್ನಲಾಗಿದೆ. ಇದರಿಂದ ಚಾಲಕ ಸೊಹೈಲ್‍ರವರಿಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಅಸುನೀಗಿದ್ದಾರೆ ಎಂದು ಹೇಳಲಾಗಿದೆ. ಕಾರಿನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯ ನಂತರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.