ಮೈಸೂರು: ಸಿಎಂ ಸಿದ್ದರಾಮಯ್ಯ, ಡಾ.ಯತೀಂದ್ರ ಅವರಿಗೆ ವೈದ್ಯರ ಬೆಂಬಲ
ಮೈಸೂರು, ಮೇ.4: ರೈತರು, ಬಡವರು, ದಲಿತರು, ಶೋಷಿತರು ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಐದು ವರ್ಷಗಳ ಕಾಲ ಸ್ಥಿರ ಆಡಳಿತ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಹಾಗೂ ವೈದ್ಯರಾಗಿರುವ ಡಾ.ಯತೀಂದ್ರ ಅವರಿಗೆ ವೈದ್ಯರು ಬೆಂಬಲ ನೀಡಲಿದ್ದೇವೆ ಎಂದು ಪ್ರಸೂತಿ ತಜ್ಞೆ ಡಾ.ವಿಜಯಲಕ್ಷ್ಮಿ ಪರಮೇಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವೈದ್ಯರಾಗಿ ವೈದ್ಯರನ್ನು ಬೆಂಬಲಿಸುವ ನಿಟ್ಟಿನಲ್ಲಿ ಇಂದಿನಿಂದ ವರುಣಾ ಕ್ಷೇತ್ರದ ಅಭ್ಯರ್ಥಿ ಡಾ.ಯತೀಂದ್ರ ಹಾಗೂ ಸಾಮಾಜಿಕ ನ್ಯಾಯ ನೀಡಿದ ಸಿಎಂ ಸಿದ್ದರಾಮಯ್ಯನವರ ಪರವಾಗಿ ಚಾಮುಂಡೇಶ್ವರಿಯಲ್ಲಿ ಪ್ರಚಾರ ಕೈಗೊಳ್ಳುತ್ತೇವೆ, ಸುಮಾರು ನೂರಕ್ಕೂ ಹೆಚ್ಚು ವೈದ್ಯರು ಸರದಿಯಂತೆ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದೇವೆ ಎಂದು ಹೇಳಿದರು.
ಯುವ ವಿದ್ಯಾವಂತರು ರಾಜಕಾರಣದಿಂದ ದೂರವುಳಿದಿದ್ದು, ಈ ನಿಟ್ಟಿನಲ್ಲಿ ರಾಜಕಾರಣ ಪ್ರವೇಶಿಸಿರುವ ಡಾ.ಯತೀಂದ್ರ ಅವರನ್ನು ಬೆಂಬಲಿಸಲು ವೈದ್ಯ ಸಮುದಾಯವು ನಿರ್ಣಯಿಸಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ನಾಗೇಶ್ ಉಪಸ್ಥಿತರಿದ್ದರು.