×
Ad

ಮಂಡ್ಯ: ತಾರಕಕ್ಕೇರಿದ ಪ್ರಮುಖ ಅಭ್ಯರ್ಥಿಗಳ ಪ್ರಚಾರ ಭರಾಟೆ

Update: 2018-05-04 22:17 IST

ಮಂಡ್ಯ, ಮೇ 4: ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಪ್ರಚಾರ ಭರಾಟೆ ತಾರಕ್ಕೇರಿದ್ದು, ಮತದಾರರನ್ನು ಸೆಳೆಯಲು ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮತ್ತು ಪ್ರಮುಖ ಪಕ್ಷೇತ್ರ ಅಭ್ಯರ್ಥಿಗಳು ಬೆಂಬಲಿಗರ ರೋಡ್ ಶೋ, ಮನೆ ಮನೆಗೆ ಭೇಟಿ ಮೂಲಕ ಮತದಾರರನ್ನು ಭೇಟಿಯಾಗಿ ಮತ ಬೇಡುತ್ತಿದ್ದಾರೆ.

ಈ ನಡುವೆ ಪಕ್ಷಗಳ ರಾಜ್ಯ ನಾಯಕರು, ಮುಖಂಡರು ತಮ್ಮ ಅಭ್ಯರ್ಥಿಗಳ ಪ್ರಚಾರಕ್ಕೆ ಸಾಥ್ ನೀಡುತ್ತಿರುವುದಲ್ಲದೆ, ಪಕ್ಷದಲ್ಲಿ ಭಿನ್ನಾಭಿಪ್ರಾಯ ಹೋಗಲಾಡಿಸಿ, ಎದುರು ಪಕ್ಷದ ಅಸಂತೃಪ್ತರನ್ನು ಸೆಳೆಯುವ ಯತ್ನ ನಡೆಸುತ್ತಿದ್ದಾರೆ.

ರವಿಕುಮಾರ್ ಗೆ ಸೇಬಿನ ಹಾರದ ಸ್ವಾಗತ:
ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ.ರವಿಕುಮಾರ್ ಗಣಿಗ ಕರಡಿಕೊಪ್ಪಲು ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಸಿ.ಪುಟ್ಟಸ್ವಾಮಿ ನೇತೃತ್ವದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು.

ರವಿಕುಮಾರ್ ಮಾತನಾಡಿ, ಪ್ರಚಾರಕ್ಕೆ ಬಂದಂತಹ ಗ್ರಾಮಗಳಲ್ಲಿ ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ರಾಜಕಾರಣ ಬದಿಗಿಟ್ಟು ಮನೆ ಮಗನನ್ನು ಕರೆಯುವಂತೆ ಪ್ರೀತಿಯಿಂದ ಆರತಿ ಬೆಳಗಿ ಬರಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆಯಿದ್ದು, ನನ್ನ ಗೆಲುವು ಶತಸಿದ್ದ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಂಬರೀಶ್ ಅವರ ಆಶೀರ್ವಾದದಿಂದ, ಕ್ಷೇತ್ರದ ಮುಖಂಡರ ಬೆಂಬಲದಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಪಕ್ಷಕ್ಕೆ ಬಲ ತುಂಬಿದಂತಾಗಿದೆ ಎಂದು ಅವರು ಹೇಳಿದರು.

ಕೆ.ಸಿ.ಪುಟ್ಟಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ಸಿಗಬೇಕಾದರೆ ರವಿಕುಮಾರ್ ಅವರನ್ನು ಗೆಲ್ಲಿಸಬೇಕಾಗಿದೆ. ಕುರುಬ ಸಮಾಜದ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಚ್.ಬಿ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ, ತಾಪಂ ಸದಸ್ಯ ಬೋರೇಗೌಡ, ಮನ್‍ಮುಲ್ ನಿರ್ದೇಶಕ ಚಂದ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಅಪ್ಪಾಜಿ ಇತರರು ಭಾಗವಹಿಸಿದ್ದರು.

ತೆರೆದ ವಾಹನದಲ್ಲಿ ಎಂ.ಶ್ರೀನಿವಾಸ್ ಪ್ರಚಾರ:

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರೂ ಪ್ರಚಾರ ಚುರುಕುಗೊಳಿಸಿದ್ದು, ಶುಕ್ರವಾರ ನಗರದ ವಿವಿಧೆಡೆ ತೆರೆದ ವಾಹನದಲ್ಲಿ ಮುಖಂಡರ ಜತೆ ಮತಯಾಚಿಸಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ರೈತರ ಪರವಾಗಿ ಹೋರಾಟ ನಡೆಸುತ್ತಾ ಬಂದಿರುವ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಅಗತ್ಯವಿದೆ ಎಂದು ಕೋರಿದರು. ಜಲಾಶಯದಲ್ಲಿ ನೀರಿಲ್ಲದ ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ 4 ಟಿಎಂಸಿ ಅಡಿ ನೀರು ಬಿಡುಗಡೆಗೆ ಸುಪ್ರೀಂಕೋರ್ಟ್ ಸೂಚಿಸಿರುವುದು ಅವೈಜ್ಞಾನಿಕ. ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ನೀರು ಹರಿಸಬಾರದು ಎಂದು ಅವರು ತಾಕೀತು ಮಾಡಿದರು.

ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಕೀಲಾರ ರಾಧಾಕೃಷ್ಣ, ಅಶೋಕ್ ಜಯರಾಂ, ಗೌರೀಶ್, ಶಂಕರ್ ಇತರ ಮುಖಂಡರು ಪ್ರಚಾರದಲ್ಲಿ ಭಾಗವಹಿಸಿದ್ದರು.

ದರ್ಶನ್ ಪರ ಸಹೋದರಿ ಅಕ್ಷತಾ ಪ್ರಚಾರ:
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರ ಪರ ಸಹೋದರಿ ಅಕ್ಷತಾ ಮಂಡ್ಯ ತಾಲೂಕು ದುದ್ದ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು.

ನಮ್ಮ ತಂದೆ ಪುಟ್ಟಣ್ಣಯ್ಯ ಅವರು ದುದ್ದ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೆರೆ-ಕಟ್ಟೆಗಳನ್ನು ತುಂಬಿಸಲು ಹೋರಾಟ ನಡೆಸಿದ್ದಾರೆ. ಪುಟ್ಟಣ್ಣಯ್ಯ ಅವರ ಜನಪರ ಕಾರ್ಯಗಳನ್ನು ಮೆಚ್ಚಿ ಜನತೆ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಆಯ್ಕೆ ಮಾಡುವಂತೆ ಮನವಿ ಅಕ್ಷತಾ ಮನವಿ ಮಾಡಿದರು.

ನಮ್ಮ ತಂದೆ ಮಾಡಿರುವ ಕೆಲಸಗಳ ಬಗ್ಗೆ ಜನ ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ. ಹೋದಲೆಲ್ಲಾ ಮತದಾರರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ತಂದೆಯ ಹಾದಿಯಲ್ಲಿ ಸಾಗಲಿರುವ ದರ್ಶನ್‍ಗೆ ಮತ ಹಾಕುವ ಮೂಲಕ ಹೆಚ್ಚು ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹುಳ್ಳೇನಹಳ್ಳಿ ಸುಚೀಂದ್ರ, ವಿಜಯಕುಮಾರ್, ಸಿದ್ದೇಶ್, ಇತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News