ನಾನು ಅಧಿಕಾರ ಪಡೆಯಲು ಬಂದಿಲ್ಲ, ಜನರ ಕೆಲಸ ಮಾಡಲು ಬಂದಿದ್ದೇನೆ: ದರ್ಶನ್ ಪುಟ್ಟಣ್ಣಯ್ಯ
ಮಂಡ್ಯ, ಮೇ 4: ನಾನು ಯಾವುದೇ ಅಧಿಕಾರ ಪಡೆಯಲು ಇಲ್ಲಿಗೆ ಬಂದಿಲ್ಲ. ಜನರೊಂದಿಗೆ ಬೆರೆತು ಕೆಲಸ ಮಾಡಬೇಕು. ನಮ್ಮ ತಂದೆಯ ಕನಸುಗಳನ್ನು ನನಸಾಗಿಸಬೇಕು ಎಂಬ ಕಾರಣಕ್ಕಾಗಿ ರೈತ ಚಳವಳಿ ಹಾಗೂ ರಾಜಕೀಯಕ್ಕೆ ಬಂದಿದ್ದೇನೆ ಎಂದು ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು, ಮಾಡರಹಳ್ಳಿ, ಈರೇಗೌಡನಕೊಪ್ಪಲು, ನಲ್ಲಹಳ್ಳಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಶುಕ್ರವಾರ ಮನೆಮನೆಗೆ ತೆರಳಿ ಬಿರುಸಿನ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ಕನಸುಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಹೊಸ ಆಲೋಚನೆಯೊಂದಿಗೆ ಉದ್ಯೋಗ ಸೃಷ್ಠಿ, ಹಳ್ಳಿ ಜನರು ಹಾಗೂ ರೈತರ ಬದುಕು ಹಸನಗೊಳಿಸುವುದೇ ನನ್ನ ಗುರಿ ಎಂದರು.
ಈ ಚುನಾವಣೆಯಲ್ಲಿ ಕೇವಲ ನಾನು ಗೆಲ್ಲೋದಲ್ಲ, ನಾವೆಲ್ಲರೂ ಸೇರಿ ಗೆಲ್ಲೋಣ. ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡುವ ಅಗತ್ಯವಿಲ್ಲ. ನಾನು ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗೊಲ್ಲ. ಜತೆಗೆ ಅಮೇರಿಕಾಕ್ಕೂ ಹೋಗುವುದಿಲ್ಲ. ನಿಮ್ಮ ಜತೆಯಲ್ಲಿದ್ದೇ ಕ್ಷೇತ್ರಾಭಿವೃದ್ಧಿ ಕೆಲಸ ಮಾಡುತ್ತೇನೆ. ಹೀಗಾಗಿ ನೀವು ಹೆಚ್ಚು ಮತಗಳನ್ನು ನೀಡಿ ನನ್ನನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಅತ್ತಿಗಾನಹಳ್ಳಿ ನಾಗರಾಜು, ರೈತಸಂಘದ ಮುಖಂಡರಾದ ನಗ್ಗಹಳ್ಳಿ ಅರುಣ್‍ಕುಮಾರ್ ಹಾಗೂ ಸುಂಕಾತೊಣ್ಣೂರು, ಮಾಡರಹಳ್ಳಿ ಗ್ರಾಮಗಳ ಮುಖಂಡರು ಸೇರಿದಂತೆ ಇತರರಿದ್ದರು.
ಅಣ್ಣನ ಪರ ಅಖಾಡಕ್ಕಿಳಿದ ಸಹೋದರಿಯರು: ಮತ್ತೊಂದೆಡೆ ದರ್ಶನ್ ಪುಟ್ಟಣ್ಣಯ್ಯ ಪರ ಸಹೋದರಿಯರಾದ ಸ್ಮಿತಾ ಪುಟ್ಟಣ್ಣಯ್ಯ ಹಾಗೂ ಅಕ್ಷತಾ ಪುಟ್ಟಣ್ಣಯ್ಯ ಅವರು ಮಹಿಳಾ ತಂಡದ ಜತೆ ಅಖಾಡಕ್ಕಿಳಿದು ತಾಲೂಕಿನ ಹರಳಹಳ್ಳಿ, ವಿಶ್ವೇಶ್ವರನಗರ ಸೇರಿದಂತೆ ಇತರೆ ಗ್ರಾಮಗಳಲ್ಲಿ ಬಿರುಸಿನ ಮತ ಪ್ರಚಾರ ನಡೆಸಿದರು.
ತಮ್ಮ ಅಣ್ಣ ದರ್ಶನ್ ಬಗ್ಗೆ ವಿರೋಧಿಗಳು ಅಪಪ್ರಚಾರ ಮಾಡುತ್ತಿವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸ್ಮಿತಾ ಪುಟ್ಟಣ್ಣಯ್ಯ ಹಾಗೂ ಅಕ್ಷತಾ ಪುಟ್ಟಣ್ಣಯ್ಯ ಅವರು, ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯರವರು ಬದುಕಿದ್ದಾಗಲೂ ಕೆಲವರು ಅವಮಾನಿಸಿ ಅಪಪ್ರಚಾರ ಮಾಡುತ್ತಿದ್ದರು. ಈಗ ರೈತ ನಾಯಕನ ಮಗನನ್ನು ಅವಮಾನಿಸಿ ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ, ನಮ್ಮಣ್ಣ ದರ್ಶನ್ ವಿದೇಶದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದನೇ ಹೊರತು ಮಜಾ ಮಾಡುತ್ತಿರಲಿಲ್ಲ ಎಂದರು.
ಆತನ ಶ್ರಮದ ಬಗ್ಗೆ ಗೌರವ, ನಂಬಿಕೆ ಇದೆ. ದಿನದ 18 ಗಂಟೆ ಕೆಲಸ ಮಾಡುತ್ತಾನೆ. ರೈತರು, ದುಡಿಯುವ ವರ್ಗದ ಪರ ಕಾಳಜಿ ಇರುವುದರಿಂದಲೇ ರೈತ ಚಳವಳಿ ಹಾಗೂ ರಾಜಕೀಯಕ್ಕೆ ಧುಮುಕಿರುವುದು ಎಂದು ಅವರು ವಿರೋಧಿಗಳ ಟೀಕೆಗೆ ತಿರುಗೇಟು ನೀಡಿದರು.