ಕಳಸ: ಉಚಿತ ಸಾಮೂಹಿಕ ವಿವಾಹ, ಗ್ರಾಮೀಣಾಭಿವೃದ್ಧಿ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮ
ಕಳಸ, ಮೇ 4: ಶ್ರಮ ವಹಿಸಿ ದುಡಿದು ತಿನ್ನುತ್ತ ಬದುಕನ್ನು ನಡೆಸುವವರು ಯಾವತ್ತು ಇನ್ನೊಬ್ಬರ ಮುಂದೆ ಕೈಯೊಡ್ಡಬಾರದೆಂಬ ಉದ್ದೇಶದಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ತಿಳಿಸಿದರು.
ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದ ಅಮೃತ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಮೂಹಿಕವಾಗಿ ವಿವಾಹವಾಗಿ ನಂತರ ಮನೆಯಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಂದು ವೆಚ್ಚ ಮಾಡುವ ಬದಲು ಅದೇ ವೆಚ್ಚವನ್ನು ಉಳಿಸಿ ಮುಂದೆ ಹುಟ್ಟುವ ನಿಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸಕ್ಕಾಗಿ ವಿನಿಯೋಗ ಮಾಡಿ. ಮಕ್ಕಳನ್ನೇ ನಿಮ್ಮ ಆಸ್ತಿಯನ್ನಾಗಿ ಮಾಡಿದ್ದಲ್ಲಿ ಸಾಮೂಹಿಕ ವಿವಾಹಗಳ ಉದ್ದೇಶ ಸಾರ್ಥಕವಾಗಲಿದೆ ಎಂದು ಅವರು ಅಭಿಪ್ರಾಯಿಸಿದರು.
1991ರಿಂದ ಶ್ರೀಕ್ಷೇತ್ರದ ಧರ್ಮಕರ್ತರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಇಂದಿನವರೆಗೂ ಕಡು ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ 855 ಜೋಡಿಗಳ ವಿವಾಹವನ್ನು ನೆರವೇರಿಸಲಾಗಿದೆ. 457 ಬಡಕುಟುಂಬಗಳ ವಟುಗಳಿಗೆ ಉಪನಯನ, ಗೃಹಲಕ್ಷ್ಮಿ ಯೋಜನೆಯಡಿ 5,344 ಫಲಾನುಭವಿಗಳಿಗೆ ಉಚಿತ ಹೆಂಚುಗಳ ವಿತರಣೆ, ಆನಂದ ಜ್ಯೋತಿ ಯೋಜನೆಯಡಿ 1,245 ಮನೆಗಳಿಗೆ ವಿದ್ಯುತ್ ಸೌಲಭ್ಯ, ಅನ್ನದಾಸೋಹ ಯೋಜನೆಯಡಿ ರಾಜ್ಯದ ಒಟ್ಟು1,265 ಶಾಲೆಗಳಿಗೆ 1,43,497 ತಟ್ಟೆ-ಲೋಟ ವಿತರಣೆ, ಮಹಿಳಾಭಿವೃದ್ಧಿ ಯೋಜನೆಯಡಿಯಲ್ಲಿ 332 ಫಲಾನುಭಿವಿಗಳಿಗೆ ಹೊಲಿಗೆ ಯಂತ್ರ ವಿತರಣೆ, ಧನ್ವಂತರಿ ಯೋಜನೆ, ಧಾರ್ಮಿಕ ಯೋಜನೆ, ಶೈಕ್ಷಣಿಕ ಯೋಜನೆ, ಸಾಮಾಜಿಕ ಯೋಜನೆ, ಸಾಂಸ್ಕೃತಿಕ ಯೋಜನೆ ಸೇರಿದಂತೆ ಇನ್ನಿತರ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, 13, 51,351 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗಿದೆ ಎಂದರು.
ಬಂಟ್ವಾಳ ತಾಲೂಕಿನ ದಕ್ಷಿಣ ಗಾಣಗಾಪುರ ಒಡಿಯೂರಿನ ಶ್ರೀ ಗುರುದೇವದತ್ತಾ ಮಹಾಸಂಸ್ಥಾನದ ಪರಮಪೂಜ್ಯರಾದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಅರಿತು ಬರೆತು ಬಾಳಿದರೆ ಜೀವನ ಸಾಕ್ಷತ್ಕಾರ, ಇಚ್ಚಾಶಕ್ತಿ, ಜ್ಞಾನ ಶಕ್ತಿ ಇರುವ ಆಧಿಶಕ್ತ್ಯಾತ್ಮಕ ಅನ್ನಪುರ್ಣೇಶ್ವರಿ ದೇವಿಯ ಕೃಪೆಯಿಂದ ಅಭಿವೃದ್ಧಿಯಾಗಿದೆ. ವದು ವರರು ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕು. ಶ್ರೀಕ್ಷೇತ್ರದ ಧರ್ಮಕರ್ತರು ಸಾರ್ವಜನಿಕವಾಗಿ ಹತ್ತು -ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ 27 ವರ್ಷಗಳನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ಪ್ರಸಾದವನ್ನು ಸ್ವೀಕರಿಸಿದವರು ಆತ್ಮದಲ್ಲಿ ತೃಪ್ತಿಯನ್ನು ಹೊಂದುತ್ತಾರೆ. ಸಾಧ್ಯವಾದಷ್ಟು ಮಟ್ಟಿಗೆ ಜೀವ ಹಿಂಸೆಯನ್ನು ಮಾಡದೇ ನಿಮ್ಮ ಜೀವನದ ರಕ್ಷಣಗೆ ತಾವೇ ಮುಂದಾಗುವಂತೆ ನೂತನ ವದು ವರರಿಗೆ ತಿಳಿ ಹೇಳಿದರು.
31 ಜೋಡಿಗಳ ಸಾಮೂಹಿಕ ವಿವಾಹವು ಉದಯಶಂಕರ ಶರ್ಮ ತಂತ್ರಿಗಳ ಪೌರೋಹಿತ್ಯದಲ್ಲಿ ಸಾಂಗವಾಗಿ ನೆರವೇರಿಸಿದರು. ವೇದಿಕೆಯಲ್ಲಿ ರಾಜಲಕ್ಷ್ಮೀ ಜೋಷಿ, ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭೆ ಅಧ್ಯಕ್ಷ ವೆಂಕಟನಾರಾಯಣ, ಹವ್ಯಕ ಮಹಾಸಭೆ ಅಧ್ಯಕ್ಷ ಗಿರಿಧರ್ ಕಜೆ, ಬೆಂಗಳೂರಿನ ಶಂಕಾಚಾರ್, ಮತ್ತಿತರರು ಉಪಸ್ಥಿತರಿದ್ದರು.