×
Ad

ಜನರ ಬದುಕು ಕಟ್ಟುವುದೇ ಕಾಂಗ್ರೆಸ್ ಪಕ್ಷದ ಗುರಿ: ಬಿ.ಎಲ್.ಶಂಕರ್

Update: 2018-05-04 22:53 IST

ಚಿಕ್ಕಮಗಳೂರು, ಮೇ 4: ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಜನರ ಬದುಕನ್ನು ಕಟ್ಟುವ ಅಜೆಂಡಾದೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆ ಎದುರಿಸುತ್ತಿದ್ದಾರೆ. ಚಿಕ್ಕಮಗಳೂರಿನ ವಿಧಾನಸಭೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸಂಕಲ್ಪ ಮಾಡಿದೆ ಎಂದು ಅಭ್ಯರ್ಥಿ ಬಿ.ಎಲ್.ಶಂಕರ್ ಅಭಿಪ್ರಾಯಿಸಿದರು.

ನಗರದ ಪ್ರೆಸ್‍ಕ್ಲಬ್‍ನಲ್ಲಿ ಶುಕ್ರವಾರ ಕರೆಯಲಾಗಿದ್ದ ಕಾಂಗ್ರೆಸ್ ಹಾಗೂ ಸಿಪಿಐ ಜಂಟಿ ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಪಕ್ಷದ ಚುನಾವಣಾ ಪ್ರನಾಳಿಕೆ 'ಭರವಸೆ-ಬದ್ಧತೆ' ಬಿಡುಗಡೆಗೊಳಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಕ್ಷೇತ್ರದ ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಯೋಜನೆಗಳ ಜಾರಿ ಹಾಗೂ ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಮೂಲಸೌಕರ್ಯ ಒದಗಿಸುವ ಆದ್ಯತೆಯೊಂದಿಗೆ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಮತದಾರರು ತಮ್ಮನ್ನು ಚುನಾಯಿಸಿದಲ್ಲಿ ಪ್ರಣಾಳಿಕೆಯಲ್ಲಿನ ಭರವಸೆಗಳ ಪೈಕಿ ಕೆಲವನ್ನು ಶೀಘ್ರವಾಗಿಯೂ, ಉಳಿದವನ್ನು ಹಂತಹಂತವಾಗಿಯೂ ಜಾರಿ ಮಾಡಲಾಗುವುದು ಎಂದರು.

ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಜನರೊಂದಿಗೆ ನಡೆಸಿದ ಸಂವಾದಗಳಲ್ಲಿ ಎದ್ದ ವಿಷಯಗಳ ಆಧಾರದ ಮೇಲೆ ಅಭಿವೃದ್ಧಿ ಯೋಜನಗಳ ಅನುಷ್ಠಾನವನ್ನು ಪ್ರಣಾಳಿಕೆಯಲ್ಲಿ ಸೂಚಿಸಲಾಗಿದೆ. ಪರಿಸರ, ನೀರು, ಉದ್ಯೋಗದ ಮೂಲಭೂತ ವಿಷಯಗಳಿಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಜನರ ಬದುಕಿನ ಬವಣೆಯ ಬಾರ ಇಳಿಸುವ ಅಂಶಗಳಿಗೆ ಒತ್ತು ನೀಡಲಾಗಿದೆ ಎಂದ ಅವರು, ಕಳೆದ 15 ವರ್ಷಗಳಲ್ಲಿ ಶಿವಮೊಗ್ಗ, ಹಾಸನದಂತಹ ನೆರೆಯ ಜಿಲ್ಲೆಗಳಲ್ಲಾಗಿರುವ ಅಭಿವೃದ್ಧಿಗೆ ಹೋಲಿಸಿದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ದೂರಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಲಿ ಶಾಸಕರ ಆಡಳಿತ ವೈಖರಿ ಬಗ್ಗೆ ಅಸಮಾದಾನ, ಅಸಹನೆ ಆಕ್ರೋಶವಾಗಿ ಹೊರಹೊಮ್ಮುತ್ತಿದೆ. ಆದರೆ ಕಾಂಗ್ರೆಸ್ ಸರಕಾರದ ಬಗ್ಗೆ ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿದೆ. ಅನ್ನ ಕೊಟ್ಟವರನ್ನು ಎಂದಿಗೂ ಮರೆಯಲ್ಲ ಎಂಬ ಧ್ವನಿ ಒಕ್ಕೊರಲಿನಿಂದ ಕೇಳಿ ಬರುತ್ತಿದೆ. ವಿದ್ಯಾರ್ಥಿಗಳು, ಮಹಿಳೆಯರೂ ಸೇರಿದಂತೆ ಜನಸಾಮಾನ್ಯರಲ್ಲಿ ಸದಾಭಿಪ್ರಾಯ ಹಾಗೂ 15 ವರ್ಷಗಳಿಂದ ಓರ್ವ ಶಾಸಕರ ಹಾಗೂ ಅವರ ಹಿಂಬಾಲಕರ ಆಡಳಿತ ವೈಫಲ್ಯಗಳೆಲ್ಲವೂ ಈ ಬಾರಿ ಕಾಂಗ್ರೆಸ್‍ಗೆ ಮತಗಳಾಗಿ ಪರಿವರ್ತನೆಯಾಗಲಿವೆ ಎಂದ ಅವರು, ಕಾಂಗ್ರೆಸ್‍ಗೆ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಸಿಪಿಐ ಬೆಂಬಲ ನೀಡಿ ಖುದ್ದು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು, ಬಿಜೆಪಿಯನ್ನು ಜಿಲ್ಲೆಯಲ್ಲಿ ಕಟ್ಟಿ ಬೆಳಸಿದ ರೇಖಾ ಹುಲಿಯಪ್ಪಗೌಡ, ಅತ್ತಿಕಟ್ಟೆ ಜಗನ್ನಾಥ್ ಹಾಗೂ ಮತ್ತಿತರರು ಪಕ್ಷ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಆನೆ ಬಲ ಬಂದಿದೆ. ಈ ಬೆಳವಣಿಗೆಯಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಂತಹ ವಾತಾವರಣ ನಿರ್ಮಾಣವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್, ಮಾಜಿ ಸಚಿವ ಸಗೀರ್ ಅಹ್ಮದ್, ಸಿಪಿಐನ ರಾಧಾಸುಂದರೇಶ್, ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಮೂರ್ತಿ, ಎ.ಎನ್.ಮಹೇಶ್, ಶಿವಾನಂದಸ್ವಾಮಿ, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.

ಈ ಚುನಾವಣೆ ಧರ್ಮ ಹಾಗೂ ಅಧರ್ಮಗಳ ಚುನಾವಣೆ, ಅಡ್ರೆಸ್ ಇರುವವರು ಮತ್ತು ಇಲ್ಲದವರ ನುಡುವಿನ ಹೋರಾಟ' ಎಂದು ಸಖರಾಯಪಟ್ಟಣದ ಬಿಜೆಪಿ ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಎಲ್.ಶಂಕರ್, ಯಾವುದು ಧರ್ಮ, ಯಾವುದು ಧರ್ಮವಲ್ಲ ಎಂಬುದನ್ನು ಜನತೆ ತೀರ್ಮಾನಿಸಲಿದ್ದಾರೆ. ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸದಿರುವುದು, ಉತ್ತಮ ಆಸ್ಪತ್ರೆ ನಿರ್ಮಾಣವಾಗದಿರುವುದು, ಕುಡಿಯುವ ನೀರು ಕಲ್ಪಿಸದಿರುವುದು, ಉದ್ಯೋಗ, ಕಾರ್ಖಾನೆಗಳ ನಿರ್ಮಾಣವಾಗದಿರುವುದೂ ಸೇರಿದಂತೆ ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ, ಕಪ್ಪುಹಣ ತರುತ್ತೇವೆ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ, 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಚುನಾವಣೆಗೂ ಮುನ್ನ ಭರವಸೆ ನೀಡಿ ನಂತರ ಮೌನಕ್ಕೆ ಜಾರಿದ ಪ್ರಧಾನಿ ಮಾತುಗಳೇ ಬಿಜೆಪಿಯವರಿಗೆ ಧರ್ಮವಾಗಿದೆ. ಆದರೆ ಕಾಂಗ್ರೆಸ್ ಸಿದ್ಧಾಂತದ ಪ್ರಕಾರ ಇದು ಅಧರ್ಮ ಎಂದ ಅವರು, ಜನರ ಬದುಕು ಕಟ್ಟುವುದೇ ಧರ್ಮ ಎಂದು ತರುಗೇಟು ನೀಡಿದರು.

ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಕಾರ್ಯಕ್ರಮಕ್ಕೆ ಅನುಮತಿ ನೀಡದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಸಂವಾದ, ಚರ್ಚೆ ನಡೆಯಲೇಬೇಕು. ಮೇವಾನಿ ಹಾಗೂ ಪ್ರಕಾಶ್ ರೈ ಸಾಮಾನ್ಯರಲ್ಲ. ಇವರೊಂದಿಗಿದ್ದವರು ಒಂದಲ್ಲ ಒಂದು ಜನಪರ ಹೋರಾಟಗಳ ಮೂಲಕ ಜನರೊಂದಿಗೆ ಬೆರೆತರವರು, ಅಸ್ತಿತ್ವ ಹೊಂದಿದವರು. ಅವರು ಯಾವುದೇ ಪಕ್ಷಗಳ ವಕ್ತಾರರಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ವಿರುದ್ಧವಾಗಿ ಬಂದ ಹೇಳಿಕೆಗಳ ವಿರುದ್ಧ ಅವರು ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಅವರಿಗೆ ತಮ್ಮದೇಯಾದ ಅಭಿಪ್ರಾಯ, ಜಾತ್ಯತೀತ ನಿಲುವು ವ್ಯಕ್ತಪಡಿಸಲು ಅಭಿವೃಕ್ತಿ ಸ್ವಾತಂತ್ರ್ಯವಿದೆ. ಅಂದ ಮಾತ್ರಕ್ಕೆ ಇದು ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮವಲ್ಲ. ಇದನ್ನು ಹತ್ತಿಕ್ಕುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಜಿಲ್ಲಾಡಳಿತ ಗುರುವಾರ ಅವರ ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡದೇ ಚುನಾವಣಾಧಿಕಾರಿಗಳು ಉದ್ಧಟತನ ಮೆರೆದಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಶಂಕರ್ ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಪ್ರಣಾಳಿಕೆ 'ಭರವಸೆ -ಬದ್ಧತೆ' ಮುಖ್ಯಾಂಶಗಳು: ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಸಾಕಷ್ಟು ಗಮನಾರ್ಹ ಯೋಜನೆಗಳ ಜಾರಿಗೆ ಒತ್ತು ನೀಡಲಾಗಿದೆ.

1. ಜಿಲ್ಲಾಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದು, ಸರಕಾರಿ ಮೆಡಿಕಲ್ ಕಾಲೇಜು ಕಾಮಗಾರಿಗೆ ಚಾಲನೆ
2. ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ಪ್ರತ್ಯೇಕ ಹಾಲಿನ ಡೈರಿ ಅನುಷ್ಠಾನ
3. ಕರಗಡ ನೀರಾವರಿ ಯೋಜನೆ ಪೂರ್ಣಗೊಳಿಸುವುದು
4. ಹಬ್ಬೆ ಜಲಪಾತದಿಂದ ಮದಗದ, ಅಯ್ಯನಕೆರೆ, ದೇವನೂರು ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವುದು
5. ಭದ್ರಾನದಿಯಿಂದ ಏತ ನೀರಾವರಿ ಮೂಲಕ ಕಡೂರು, ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು
6. ಹೇಮಾವತಿ, ಯಗಚಿ, ಎತ್ತಿನ ಹೊಳೆ ಯೋಜನೆಗಳ ವ್ಯಾಪ್ತಿಯನ್ನು ಜಿಲ್ಲೆಗೂ ವಿಸ್ತರಣೆ
7. ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಕಂಟ್ರ್ಯಾಕ್ಟರ್ ಮಾಫಿಯಾದಿಂದ ಜಿಲ್ಲೆಗೆ ಮುಕ್ತಿ
8. ಕೃಷಿ ಉತ್ಪನ್ನಗಳ ಸಂರಕ್ಷಣಗೆ ಕೋಲ್ಡ್ ಸ್ಟೋರೆಜ್‍ಗಳ ನಿರ್ಮಾಣ
9. ನಗರದಲ್ಲಿ ಖಾಸಗಿ ಬಸ್ ಮತ್ತು ಟ್ರಕ್ ಟರ್ಮಿನಲ್ ನಿರ್ಮಾಣ
10 ಸರಕಾರಿ ಬಸ್ ನಿಲ್ದಾಣದ ಆಧುನೀಕರಣ
11 ಚಿಕ್ಕಮಗಳೂರು ನಗರದಲ್ಲಿ ಫುಡ್ ಕೋರ್ಟ್ ನಿರ್ಮಾಣ
12. ನಗರದಲ್ಲಿ ಬೃಹತ್ ಉದ್ಯಾನವನ ನಿರ್ಮಾಣ
13. ದೇವನೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿ ಮೂಲಕ ಉದ್ಯೋಗ ಕಲ್ಪಿಸುವುದು
14. ಸಖರಾಯಪಟ್ಟಣದಲ್ಲಿ ತೆಂಗಿನ ನಾರು ಘಟಕ ನಿರ್ಮಾಣ
15: ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಸಮುಚ್ಚಯ ನಿರ್ಮಾಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News