ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ
ಕೋಲಾರ,ಮೇ.04: ಕಳೆದ 10 ವರ್ಷಗಳಿಂದ ಶಾಸಕರಾಗಿರುವ ವರ್ತೂರ್ಪ್ರಕಾಶ್ ತಮ್ಮ ವಾರ್ಡಿನಲ್ಲಿನ ಯಾವುದೇ ಸಮಸ್ಯೆಗೂ ಈವರೆಗೂ ಸ್ಪಂದಿಸದೆ ಇದೀಗ ಚುನಾವಣೆ ಸಮಯದಲ್ಲಿ ಮತಯಾಚನೆಗೆ ಮಾತ್ರ ಆಗಮಿಸುತ್ತಿದ್ದಾರೆ ಎಂದು ಆರೋಪಿಸಿ, 13ನೇ ವಾರ್ಡಿನ ಯುವಕರು ಕ್ಲಾಕ್‍ಟವರ್ ವೃತ್ತದಲ್ಲಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾನಿರತ ಯುವಕರು, ತಮ್ಮ ವಾರ್ಡ್‍ನಲ್ಲಿ ರಸ್ತೆಗಳು ಸಾಕಷ್ಟು ಹಾಳಾಗಿದ್ದು, ನೀರಿನ ಸಮಸ್ಯೆ ನಿರಂತರವಾಗಿದೆ. ಈ ಬಗ್ಗೆ ಅನೇಕ ಬಾರಿ ಶಾಸಕರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತಯಾಚನೆಗೆ ಆಗಮಿಸುತ್ತಿದ್ದು, ಯಾವುದೇ ಕಾರಣಕ್ಕೂ ತಮ್ಮ ವಾರ್ಡಿನೊಳಗೆ ಬರುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಈಗಾಗಲೇ ನಗರದ ಗಾಂಧಿನಗರ ಬಡಾವಣೆಯಲ್ಲಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶಾಸಕ ವರ್ತೂರ್ ಪ್ರಕಾಶ್ ಗೆ ಘೇರಾವ್ ಹಾಕಲಾಗಿದೆ. 10 ವರ್ಷಗಳಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಅವರನ್ನು ಹೊರ ಹಾಕಲು ಎಲ್ಲರೂ ತೀರ್ಮಾನಿಸಿದ್ದು, ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ. ಹೀಗಾಗಿಯೇ ನಾವೂ ಸಹ ವರ್ತೂರ್ ಹಠಾವೋ ಕೋಲಾರ್ ಬಚಾವೋ ಘೋಷಣೆಯಡಿ ಅವರಿಗೆ ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯ ಅಭ್ಯರ್ಥಿಗೆ ಬೆಂಬಲ ಸೂಚಿಸಿ, ಗೆಲ್ಲಿಸುವುದಾಗಿ ಹೇಳಿದರು.
ಪ್ರತಿಭಟನೆಯಲ್ಲಿ 13ನೇ ವಾರ್ಡಿನ ಯುವಕರಾದ ಅಹಮದ್, ಜಾಕೀರ್, ಆಜಂ, ಮುಜ್ಜು, ಅಲ್ತಮಾಶ್, ಮುನ್ಸೂರ್, ಶಾಹೀದ್, ಇಮ್ರಾನ್, ನದೀಂ, ಮುಶೀರ್ ಉಪಸ್ಥಿತರಿದ್ದರು.
ವರ್ತೂರ್ ಪರ ಮತ್ತೊಂದು ಗುಂಪು ಪ್ರಚಾರ:
ಇತ್ತ ಕ್ಲಾಕ್‍ಟವರ್ನಲ್ಲಿ ಶಾಸಕ ವರ್ತೂರ್ ಪ್ರಕಾಶ್ ವಿರುದ್ಧ ಯುವಕರು ಕಪ್ಪುಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿದ್ದರೆ, ಇವರ ಮುಂದೆಯೇ ಮತ್ತೊಂದು ಗುಂಪು ವರ್ತೂರ್ ಪ್ರಕಾಶ್ ಪರ ಮತಯಾಚನೆಗೆ ವಾರ್ಡ್‍ನೊಳಗೆ ತೆರಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾನಿರತ ಯುವಕರು, ಅವರೂ ನಮ್ಮ ವಾರ್ಡಿನವರೇ, ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ. ಆದರೆ ಶಾಸಕ ವರ್ತೂರ್ ಪ್ರಕಾಶ್ ಬಂದರೆ ಯಾವುದೇ ಕಾರಣಕ್ಕೂ ವಾರ್ಡಿನೊಳಗೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.