×
Ad

ಜಿಹಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ: ಉ.ಪ್ರದೇಶ ಸಿ.ಎಂ ಆದಿತ್ಯನಾಥ್

Update: 2018-05-04 23:11 IST

ದಾವಣಗೆರೆ,ಮೇ.04: ಜನರ ಕಣ್ಣಲ್ಲಿ ರಕ್ತದ ಕಣ್ಣೀರು ಹರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಹಾಗೂ ಜಿಹಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮನವಿ ಮಾಡಿದರು.

ನಗರದ ಕಾಯಿಪೇಟೆ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಹಾದಿ ಶಕ್ತಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಸಿದ್ದರಾಮಯ್ಯ ಆಡಳಿತದಿಂದಾಗಿ ರಾಜ್ಯದಲ್ಲಿ ನಿರಂತರವಾಗಿ ರಾಷ್ಟ್ರೀಯವಾದಿಗಳ ಹತ್ಯೆಯಾಗುತ್ತಿದೆ. ನಮ್ಮ ಹಬ್ಬ-ಹರಿದಿನಗಳ ಆಚರಣೆಗಳಿಗೂ ನೂರೆಂಟು ನಿಬಂಧನೆ ಹೇರುವ ಮೂಲಕ ಜನರ ಭಾವನೆಗಳನ್ನು ಕಾಂಗ್ರೆಸ್ ಘಾಸಿಗೊಳಿಸುತ್ತಿದೆ. ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವ ಕಾಂಗ್ರೆಸ್ ಅಭಿವೃದ್ಧಿ ವಿರೋಧಿ, ಯುವಜನವಿರೋಧಿ, ರೈತ ವಿರೋಧಿಯಾಗಿದ್ದು, ಅಧಿಕಾರದಲ್ಲಿರುವ ನೈತಿಕತೆ ಉಳಿಸಿಕೊಂಡಿಲ್ಲ ಎಂದು ಆರೋಪಿಸಿದರು.

ಜಾತಿ, ಧರ್ಮಗಳ ಮಧ್ಯೆ ಒಡಕು ಮೂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ, ಸಮಾಜದಲ್ಲಿ ವಿಭಜನೆಯ ರಾಜಕೀಯ ಮಾಡುತ್ತಿದ್ದಾರೆ ಎಂದರು. ಕಳೆದ 5 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದ ರೈತರು ಸಾಕಷ್ಟು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೈತರು ಸಾಲದ ಶೂಲಕ್ಕೆ ಸಿಲುಕಿದ್ದಾರೆ. ಸಂಕಷ್ಟದಲ್ಲಿರುವ ರೈತರು ಕಾಂಗ್ರೆಸ್ ಆಡಳಿತದಿಂದ ಹತಾಶರಾಗಿದ್ದಾರೆ ಎಂದು ಟೀಕಿಸಿದರು.

ನಮ್ಮ ಒಂದು ವರ್ಷದ ಆಡಳಿತದಲ್ಲಿ ಉತ್ತರ ಪ್ರದೇಶದಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದೇವೆ. ರೈತರು, ಯುವಜನರ ಬದುಕು ಹಸನಾಗಿದ್ದು, ಇಡೀ ರಾಜ್ಯ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ. ನಾನು ಪ್ರತಿನಿಧಿಸುವ ಉತ್ತರ ಪ್ರದೇಶವು ರಾಮ ಜನ್ಮಭೂಮಿಯಾಗಿದ್ದು, ಕರ್ನಾಟಕವು ರಾಮಭಂಟ ಹನುಮಂತನ ಜನ್ಮಭೂಮಿಯಾಗಿದೆ. ರಾಮ, ಹನುಮರ ಮಿಲನವಾದರೆ ರಾಮರಾಜ್ಯ ಸ್ಥಾಪನೆಯಾಗಿ ರಾವಣನ ಸಂಹಾರವಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಇರುವಂತೆ ರಾಜ್ಯದಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಿದೆ. ಆಗ ಕರ್ನಾಟಕದಲ್ಲೂ ವಿಕಾಸದ ಹೊಸ ಪರ್ವ ಆರಂಭವಾಗಲಿದೆ ಎಂದರು.

ದಾವಣಗೆರೆ ಉತ್ತರ ಅಭ್ಯರ್ಥಿ ಎಸ್.ಎ.ರವೀಂದ್ರನಾಥ್, ದಕ್ಷಿಣ ಅಭ್ಯರ್ಥಿ ಯಶವಂತರಾವ್ ಜಾಧವ್, ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಜಯಪ್ರಕಾಶ ಅಂಬರಕರ್, ದಕ್ಷಿಣ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ರಾಜಶೇಖರ, ಮುಖಂಡರಾದ ಹೆಚ್.ಎಂ.ರುದ್ರಮುನಿಸ್ವಾಮಿ, ಗೌತಮ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News