ಪ್ರಧಾನಿ ಮೋದಿ ದೇಶದಲ್ಲೇ ನಂ.1 ಮಹಾನ್ ಸುಳ್ಳುಗಾರ: ಮುಖ್ಯಮಂತ್ರಿ ಸಿದ್ದರಾಮಯ್ಯ
ಚನ್ನಗಿರಿ,ಮೇ.04: ಪ್ರಧಾನಿ ಮೋದಿಯವರು ಈ ದೇಶದಲ್ಲೇ ನಂ.1 ಮಹಾನ್ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಕಾಂಗ್ರೆಸ್ ಚನ್ನಗಿರಿ ತಾಲೂಕು ಸಂತೆಬೆನ್ನೂರು ಬ್ಲಾಕ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಈ ದೇಶದ ಜನತೆಗೆ ಬಿಜೆಪಿ ಕೇಂದ್ರ ಸರ್ಕಾರದ ಪ್ರಧಾನಿ ಮೊದಿಯವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಳನ್ನು ಹೇಳುತ್ತಾ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಜಮೀನಿನ ಡಿನೋಟಿಪಿಕೇಶನ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿ ಜೈಲಿಗೆ ಹೋಗಿ ಬಂದಿರುವ ಸಂಗತಿ ಎಲ್ಲರಿಗೂ ತಿಳಿಸಿದೆ. ಆದರೆ, ಈ ಸಾವಿರಾರು ಕೋಟಿಗಳನ್ನು ಲೂಟಿ ಮಾಡಿರುವುದು ಮೋದಿಯವರ ಕುಮ್ಮಕ್ಕಿನಿಂದಲೇ ಎಂದು ಅವರು ನೇರವಾಗಿ ಆರೋಪ ಮಾಡಿದರು.
ಬಿಜೆಪಿ ಪಕ್ಷದ ಕತೆ ಒಂದು ರೀತಿ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕತೆಯಾಗಿದೆ. ಬಿಜೆಪಿ ನಾಯಕರು ಡೋಂಗಿ ರಾಜಕಾರಣ ಮಾಡುತ್ತಿದ್ದಾರೆ, ಇಂತಹ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಒಪ್ಪುವುದಿಲ್ಲ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ 5 ವರ್ಷಗಳಿಂದ ರಾಜ್ಯದ ಜನತೆಗೆ ಕೊಟ್ಟಂತಹ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಲಾಗಿದೆ. ಜೊತೆಗೆ ರಾಜ್ಯದ ದೀನ ದಲಿತರ ಮತ್ತು ಬಡವರ ಪರವಾದಂತಹ ಯೋಜನೆ ನೀಡಲಾಗಿದೆ. ಚನ್ನಗಿರಿ ಕ್ಷೇತ್ರದಲ್ಲಿ ವಡ್ನಾಳ್ ರಾಜಣ್ಣ ಅವರು ಸಾವಿರಾರು ಕೋಟಿಗಟ್ಟಲೆ ಅನುದಾನ ತರುವ ಮೂಲಕ ಕ್ಷೇತ್ರದ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಾಂಗ್ರೆಸ್ ಶ್ರಮವಹಿಸಿದೆ ಎಂದರು.
ಶಾಸಕ ವಡ್ನಾಳ್ ರಾಜಣ್ಣ ಮಾತನಾಡಿ, ಚನ್ನಗಿರಿ ಕ್ಷೇತ್ರದ ಇತಿಹಾಸದಲ್ಲೇ ಯಾರೊಬ್ಬರು ತರದಂತಹ ಅನುದಾನ ತಂದು ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಅದರಲ್ಲಿ ತಾಲೂಕಿನ ಜನತೆ ನೆಮ್ಮದಿಯಿಂದ ಬದುಕನ್ನು ಬದುಕಲು ಬೇಕಾದ 446 ಕೋಟಿ ವೆಚ್ಚದ ಸಾಸ್ವೆಹಳ್ಳಿ ಏತಾನೀರಾವರಿ ಯೋಜನೆ ನೀಡಿರುವ ಕೀರ್ತಿ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದ 5 ವರ್ಷಗಳಿಂದ ಮಾಡಿದಂತಹ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಲಿದೆ ಎಂದರು.
ಈ ಸಂದರ್ಭ ಮಾಜಿ ಕೇಂದ್ರ ಸಚಿವ ಸಿಲಂ, ಜಿಪಂ ಸದಸ್ಯ ಎಂ. ಯೋಗೇಶ್, ಜಿಲ್ಲಾ ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಶಶಿಕಲಾ, ತಾಲೂಕು ಅಧ್ಯಕ್ಷೆ ಉಮಾಬಸವರಾಜ್, ಬ್ಲಾಕ್ ಅಧ್ಯಕ್ಷ ಶ್ರೀನಿವಾಸ್, ಅಮಾನುಲ್ಲಾ, ಅಸಾದುಲ್ಲಾ, ಜಗಣ್ಣ ಇದ್ದರು.