ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಕೇವಲ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-05-04 18:27 GMT

ಸೊರಬ,ಮೇ.04: ಬಿಜೆಪಿಯವರು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲದವರಾಗಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಪಟ್ಟಣದ ಶ್ರೀರಂಗನಾಥ ದೇವಾಲಯದ ಮುಂಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು.ಎಂ.ತಲ್ಲೂರ್ ಪರವಾಗಿ ಮತಯಾಚನೆ ಮಾಡಿ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ರಾಜ್ಯದಲ್ಲಿ ಮುಸ್ಲೀಮರು ಶೇ.14, ಕ್ರಿಶ್ಚಯನ್ ಸಮುದಾಯದವರು ಶೇ 2.5 ರಷ್ಟಿದ್ದರೂ ಚುನಾವಣೆಯಲ್ಲಿ ಇವರಿಗೆ ಒಂದೇ ಒಂದು ಟಿಕೆಟ್ ನೀಡಿಲ್ಲ. ಆದರೆ ಕಾಂಗ್ರೆಸ್ ಎಲ್ಲಾ ಸಮುದಾಯದವರಿಗೂ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ವದಗಿಸಿದೆ ಎಂದರು.

ಗುಂಡ್ಲುಪೇಟೆ ಹಾಗು ನಂಜನಗೂಡು ಉಪ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು 2018 ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು, ಮಿಷನ್ 150 ಎಂದು ಅಬ್ಬರದ ಪ್ರಚಾರ ನಡೆಸಿದ್ದರು. ಚುನಾವಣಾ ಫಲಿತಾಂಶದ ನಂತರ ಗುಂಡ್ಲಪೇಟೆಯಲ್ಲಿ 12 ಸಾವಿರ ಮತ್ತು ನಂಜನಗೂಡಿನಲ್ಲಿ 21 ಸಾವಿರ ಮತಗಳ ಅಂತರದಿಂದ ಕಾಂಗ್ರೇಸ್ ಜಯಗಳಿಸಿದ್ದು, ಯಡಿಯೂರಪ್ಪನವರ ಮಿಷನ್-150 ಠುಸ್ಸಾಯಿತು ಎಂದರು. 

ನಾನು ತಿನ್ನಲ್ಲ, ತಿನ್ನಲೂ ಬಿಡುವುದಿಲ್ಲ ಎನ್ನುವ ಪ್ರಧಾನಿ ನರೇದ್ರ ಮೋದಿ, ಬಡವರು ಬ್ಯಾಂಕ್‍ನಲ್ಲಿಟ್ಟಿದ್ದ ಸಾವಿರಾರು ಕೋಟಿ ಹಣ ಲಲಿತ್ ಮೋದಿ, ವಿಜಯ ಮಲ್ಯರಂತವರು ಲೂಟಿ ಮಾಡಿ, ವಿದೇಶಕ್ಕೆ ಓಡಿ ಹೋದರೂ ಗೊತ್ತಿದ್ದೂ ಗೊತ್ತಿಲ್ಲದಂತೆ ಇದ್ದಾರೆ. ಇದೇನಾ ಮೋದಿಯ ಮನ್ ಕಿ ಬಾತ್ ಎಂದು ವ್ಯಂಗ್ಯವಾಡಿದ ಅವರು, ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ನೀಡುತ್ತೇನೆಂದ ಹೇಳಿದ್ದ ಇವರು, ಅಧಿಕಾರ ಮುಗಿಯುವ ಹಂತದಲ್ಲಿದ್ದರೂ ಈವರೆಗೂ 15 ಪೈಸೆಯನ್ನು ಸಹ ಹಾಕಿಲ್ಲ. ರೈತರ ಸಾಲಮನ್ನಾ, ಮಹದಾಯಿ ಯೋಜನೆ, ಮೆಕ್ಕೇ ಜೋಳ ಖರಿದಿಗೆ ಈವರೆಗೂ ಒಪ್ಪಿಗೆ ನೀಡಿಲ್ಲ. ಲೂಟಿಕೋರರನ್ನು, ಜೈಲಿಗೆ ಹೋಗಿಬಂದವರನ್ನು ಪಕ್ಕಕ್ಕೆ ಕೂರಿಸಿಕೊಂಡು ಭಾಷಣ ಮಾಡುವ ಇವರಿಗೆ ನಾಚಿಕೆಯಾಗಬೇಕು. ಅಮಿತ್‍ ಶಾ, ಮೋದಿ ಎಷ್ಟು ಬಾರಿ ರಾಜ್ಯಕ್ಕೆ ಬಂದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು. 

ಪ್ರಧಾನಿ ನರೇಂದ್ರ ಮೋದಿ ಮೇ1 ಕ್ಕೆ ದೇವೇಗೌಡರನ್ನು ಹೊಗಳಿದ್ದರು. ಅದೇ ಮೋದಿ ಮೇ3 ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ, ಆ ಪಕ್ಷಕ್ಕೆ ಮತ ನೀಡಿದರೆ ವ್ಯರ್ಥ ಎಂದು ತೆಗಳಿದ್ದಾರೆ. ಈ ಬಾರಿ ಜೆಡಿಎಸ್ 20 ರಿಂದ 25 ಸ್ಥಾನ ಗಳನ್ನು ಗಳಿಸಿದರೆ ಅದೇ ಹೆಚ್ಚು. ಬಿಜೆಪಿ ಮಿಷನ್-150 ಬದಲು ಕೇವಲ 50 ಕ್ಕೆ ಮಾತ್ರ ಸೀಮಿತವಾಗಲಿದ್ದು, ಕಾಂಗ್ರೆಸ್ 128 ಸ್ಥಾನ ಗಳಿಸಲಿದ್ದು, ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. 

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಬಗ್ಗೆ ಅಪಾರ ಗೌರವವಿದ್ದು, ತಂದೆ ಆದಿಯಾಗಿ ಮಕ್ಕಳು ತಾಲೂಕಿನ ಅಭಿವೃದ್ದಿಗಾಗಲಿ, ನೀರಾವರಿ ಯೋಜನೆಗಳ ಅನುಷ್ಟಾನಕ್ಕಾಗಲೀ ಪ್ರಯತ್ನಿಸದಿರುವ ಕಾರಣ ಸೊರಬ ತಾಲೂಕು ನಂಜುಂಡಪ್ಪ ವರದಿಯನ್ವಯ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಶಾಸಕ ಮಧುಬಂಗಾರಪ್ಪ ತಾಲೂಕಿನಲ್ಲಿ ತುರ್ತಾಗಿ ಅವಶ್ಯಕವಿರುವ ನೀರಾವರಿ ಯೋಜನೆಗಳ ಕುರಿತು ತಮ್ಮ ಐದು ವರ್ಷದ ಅಧಿಕಾರಾವಧಿಯಲ್ಲಿ ಒಮ್ಮೆಯೂ ಸಹ ಮನವಿ ಸಲ್ಲಿಸಿಲ್ಲ. ಐದು ವರ್ಷ ಮುಖ್ಯಮಂತ್ರಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಅನುಷ್ಟಾನಕ್ಕಾಗಿ 50 ಸಾವಿರ ಕೋಟಿಗೂ ಹೆಚ್ಚು ಸುಮಾರು 6.5 ಲಕ್ಷ ಎಕರೆ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಮಾಡಿಕೊಟ್ಟಿರುವ ನನಗೆ ಸೊರಬ ತಾಲೂಕಿನ ಏತ ನೀರಾವರಿಗಳ ಅನುಷ್ಟಾನ ದೊಡ್ಡ ವಿಷಯವಾಗಿರಲಿಲ್ಲ. ಚುನಾವಣೆಯ ನಂತರದಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸಹ ಅಷ್ಟೇ ಸತ್ಯ. ನಾನೇ ಮುಖ್ಯಮಂತ್ರಿಯಾಗಲಿದ್ದೇನೆ ಎಂದ ಅವರು, ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರುವುದು ಕೇವಲ ಕನಸು ಮಾತ್ರ. ಮುಂದಿನ ದಿನದಲ್ಲಿ ತಾಲೂಕಿನ ಏತ ನೀರಾವರಿಗಳಿಗೆ ಮಂಜೂರಾತಿ ನೀಡಿ ನೀರಾವರಿಗೆ ಆದ್ಯತೆ ನೀಡಲಾಗುವುದು ಎಂದರು.  

ರಾಜ್ಯ ಸರ್ಕಾರ ಮಾಹಾನ್ ಪುರುಷರ 27 ಜಯಂತಿಗಳನ್ನು ಆಚರಣೆಗೆ ತಂದಿದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆಂಪಗೌಡ ಜಯಂತಿಯನ್ನು ಜಾರಿಗೆ ತಂದಿದ್ದಾರಾ ಎಂದು ಪ್ರಶ್ನಿಸಿದ ಅವರು, ಕೆಜೆಪಿಯಲ್ಲಿದ್ದಾಗ ಬಿ.ಎಸ್.ಯಡಿಯೂರಪ್ಪ ಶೋಭಾ ಕರಂದ್ಲಾಜೆಯನ್ನು ಪಕ್ಕಕ್ಕಿಟ್ಟುಕೊಂಡು ಟಿಪ್ಪು ಸುಲ್ತಾನ್ ಪೇಟಾ ಧರಿಸಿ, ಖಡ್ಗ ಹಿಡಿದು ಆತ ಸ್ವಾತಂತ್ರ್ಯ ಹೋರಾಟಗಾರ, ದೇಶ ಪ್ರೇಮಿ ಎಂದೆಲ್ಲಾ ಹೊಗಳಿ, ಪುನಃ ಬಿಜೆಪಿ ಸೇರಿ ಅಧಿಕಾರದ ಹಪಾಹಪಿಯಿಂದಾಗಿ ಟಿಪ್ಪು ಜಯಂತಿಯನ್ನು ವಿರೋಧಿಸಿದರು ಎಂದ ಅವರು, ಇವರಿಗೆ ಎಷ್ಟು ನಾಲಿಗೆ ಇದೆ ಎಂದು ಪ್ರಶ್ನಿಸಿದರು.

ಅತ್ಯಂತ ಹಿಂದುಳಿದ ಸಮುದಾಯದ ಅಭ್ಯರ್ಥಿಯಾಗಿರುವ ರಾಜು.ಎಂ.ತಲ್ಲೂರ್ ರವರನ್ನು ತಾಲೂಕಿನಿಂದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದು, ಸಾಮಾಜಿಕ ನ್ಯಾಯವನ್ನು ಕಾಂಗ್ರೆಸ್ ಎತ್ತಿಹಿಡಿದಿದೆ. ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ವಿನಂತಿಸಿದರು. 

ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕೆ.ದಿವಾಕರ್, ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ, ಜೆ.ಶಿವಾನಂದಪ್ಪ, ತಿ.ನಾ.ಶ್ರೀನಿವಾಸ್, ಆರ್.ಪ್ರಸನ್ನ ಕುಮಾರ್, ರಾಜಪ್ಪ, ಪ್ರಫುಲ್ಲಾಮಧುಕರ್, ಕೆ.ಮಂಜುನಾಥ್, ಕರುಣಾಕರ್. ಲಕ್ಷ್ಮಿಕಾಂತ್ ಚಿಮಣೂರು, ಹುಲ್ತಿಕೊಪ್ಪ ಶ್ರೀಧರ್, ಬಾಸೂರು ಚಂದ್ರೇಗೌಡ, ಚೌಟಿ ಚಂದ್ರಶೇಖರ್ ಪಾಟೀಲ್, ಅಭ್ಯರ್ಥಿ ರಾಜು.ಎಂ.ತಲ್ಲೂರ್, ಯೋಗೇಶ್ವರಿ. ಆಗಾಸುಲ್ತಾನ್, ಫಯಾಜ್ ಉಳವಿ, ಸುಜಾಯತ್ ಉಲ್ಲಾ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News