ವಿಷ ಉಗುಳುತ್ತಿರುವ ನಗರಗಳು

Update: 2018-05-05 04:48 GMT

ಪ್ರಧಾನಿಯಾಗುವ ಮೊದಲು ನರೇಂದ್ರ ಮೋದಿಯವರು ಭಾಷಣವೊಂದರಲ್ಲಿ ದೇಶದ ಅಭಿವೃದ್ಧಿಯ ಕಲ್ಪನೆಯನ್ನು ವಿಚಿತ್ರ ವ್ಯಾಖ್ಯಾನದ ಮೂಲಕ ಮಂಡಿಸಿದ್ದರು. ಮತ್ತು ಆ ವ್ಯಾಖ್ಯಾನದ ತಳಹದಿಯಲ್ಲೇ ಅವರು ಅಹ್ಮದಾಬಾದ್-ಮುಂಬೈ ಬುಲೆಟ್ ಟ್ರೈನ್ ಯೋಜನೆಯನ್ನು ರೂಪಿಸಿದ್ದಾರೆ. ಅವರ ಪ್ರಕಾರ ‘ಜನರಿಗೆ ಅಗತ್ಯವಿರಲಿ, ಇಲ್ಲದಿರಲಿ ದೇಶದಲ್ಲಿ ಒಂದು ಬುಲೆಟ್ ಟ್ರೈನ್‌ನ್ನು ಆರಂಭಿಸಬೇಕು. ಜನರು ಪ್ರಯಾಣಿಸದಿದ್ದರೂ ಪರವಾಗಿಲ್ಲ, ಆಗ ವಿಶ್ವದ ಗಮನ ಭಾರತದ ಕಡೆಗೆ ಹರಿಯುತ್ತದೆ. ಚೀನಾ ಇದೇ ತಂತ್ರವನ್ನು ಮಾಡಿದೆ. ಅದು ಶಾಂಘೈಯನ್ನು ಮುಂದಿಟ್ಟು ತಾನು ಅಭಿವೃದ್ಧಿಯಾಗಿದ್ದೇನೆ ಎಂದು ಹೇಳುತ್ತಾ ಬರುತ್ತಿದೆ. ಭಾರತವೂ ಅದೇ ತಂತ್ರವನ್ನು ಅನುಸರಿಸಬೇಕು’’.

ಬಹುಶಃ ಮೋದಿಯವರು ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಮಾಡುವ ಬದಲು, ವಿಶ್ವಕ್ಕೆ ದೇಶ ಅಭಿವೃದ್ಧಿಯಾಗಿದೆ ಎಂಬ ಭ್ರಮೆ ಹುಟ್ಟಿಸುವುದಕ್ಕೆ ಆದ್ಯತೆಯನ್ನು ನೀಡುತ್ತಾ ಬಂದರು. ‘ಗುಜರಾತ್ ಅಭಿವೃದ್ಧಿ’ಯೂ ಇದೇ ತಂತ್ರದ ಭಾಗವಾಗಿದೆ ಎನ್ನುವುದನ್ನು ನಾವು ಗಮನಿಸಬೇಕು. ನರೇಂದ್ರ ಮೋದಿಯ ಆಡಳಿತ ನಗರಗಳಿಗೆ ಆದ್ಯತೆಯನ್ನು ನೀಡಿತು. ‘ಸ್ಮಾರ್ಟ್ ಸಿಟಿ’ಯ ಕಲ್ಪನೆಯನ್ನು ಹರಿಯಬಿಟ್ಟು ಮೋದಿ ಸುದ್ದಿ ಮಾಡಿದರು. ನಗರಗಳನ್ನೇ ಕೇಂದ್ರವಾಗಿಟ್ಟುಕೊಂಡು ಅಭಿವೃದ್ಧಿಯ ಭ್ರಮೆಗಳನ್ನು ಹರಡಿದ ಕಾರಣದಿಂದಾಗಿ ಇಂದು ದೇಶ ಸ್ಪಷ್ಟವಾಗಿ ನಗರ ಭಾರತ ಮತ್ತು ಗ್ರಾಮೀಣ ಭಾರತ ಎಂದು ಒಡೆದಿದೆ. ಗ್ರಾಮೀಣ ಭಾರತ ಈ ನಗರದ ಹಿತಾಸಕ್ತಿಗಾಗಿ ಬದುಕನ್ನು ತೆತ್ತುಕೊಳ್ಳುತ್ತಿದೆ. ಆದರೆ ಅಭಿವೃದ್ಧಿಯ ಪಾಲು ಬಂದಾಗ ಅದು ನಿರ್ಲಕ್ಷಕ್ಕೊಳಗಾಗಿದೆ. ಇಂದು ನಗರ ಪ್ರದೇಶದಲ್ಲಿ 24 ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದ್ದರೆ ಅದೇ ಸವಲತ್ತು ಗ್ರಾಮೀಣ ರೈತರಿಗೆ ಸಿಗುತ್ತಿಲ್ಲ. ಹಳ್ಳಿಗಳನ್ನು ಸುತ್ತಿಕೊಂಡು ಬರುವ ನದಿಗಳ ಫಲಾನುಭವಿಗಳೂ ನಗರದ ಜನರೇ ಆಗಿದ್ದಾರೆ. ಬೇಸಿಗೆ ಬಂದಾಗ ನಗರದ ಜನರಿಗಾಗಿ ಮತ್ತು ಕೈಗಾರಿಕೆಗಳಿಗೆ ನೀರು ಪೂರೈಸುವುದಕ್ಕಾಗಿ, ನದಿ ನೀರನ್ನು ಮುಟ್ಟದಂತೆ ರೈತರಿಗೆ ನಿರ್ದೇಶಿಸಲಾಗುತ್ತದೆ. ಕೆರೆಗಳನ್ನೆಲ್ಲ ಬೃಹತ್ ಕಟ್ಟಡಗಳು ಆಪೋಷನ ತೆಗೆದುಕೊಂಡಿದೆ. ಅಕ್ಕಿ, ಗೋಧಿಯನ್ನು ಬೆಳೆಯುವವರು ರೈತರಾದರೂ, ಅದರ ಸಕಲ ಫಲಾನುಭವಿಗಳು ನಗರದ ಜನರೇ ಆಗಿದ್ದಾರೆ.

ನಗರಗಳೇ ದೇಶದ ಕಿರೀಟ ಎಂದು ನಂಬಿದ ಪರಿಣಾಮವಾಗಿ, ಇಂದು ದೇಶವೆಂಬ ದೇಹದ ಗಡ್ಡೆಗಳಾಗಿ ನಗರಗಳು ಪರಿವರ್ತನೆಯಾಗುತ್ತಿವೆ. ವಿಲಾಸಿ ಜೀವನವನ್ನು ಅರಸುತ್ತಾ ನಗರ ಸೇರುವವರು ಒಂದೆಡೆಯಾದರೆ, ಕೃಷಿ ಬಿಕ್ಕಟ್ಟಿನಿಂದ ಹೊಲ ಗದ್ದೆ ಕಳೆದುಕೊಂಡು ಕೂಲಿ ಕಾರ್ಮಿಕರಾಗಿ ನಗರ ಸೇರುವ ರೈತರ ಸಂಖ್ಯೆಯೂ ಹೆಚ್ಚುತ್ತಿದೆ. ಅಭಿವೃದ್ಧಿಯ ಪಾದಬುಡದಲ್ಲಿ ಕೊಳೆಗೇರಿಗಳೆಂಬ ಕತ್ತಲು ನಿಧಾನಕ್ಕೆ ವಿಸ್ತಾರಗೊಳ್ಳುತ್ತಿದೆ. ಯಾವ ನಗರಗಳನ್ನು ಮುಂದಿಟ್ಟು ದೇಶದ ಹೆಗ್ಗಳಿಕೆಯನ್ನು ಸಾರಲು ಪ್ರಧಾನಿ ಮೋದಿ ಹೊರಟರೋ ಅದೇ ನಗರಗಳ ಕಾರಣದಿಂದ ದೇಶದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ. ಜಗತ್ತಿನ ಅತೀ ಮಾಲಿನ್ಯ ನಗರಗಳಲ್ಲಿ ಭಾರತದ ಪ್ರಮುಖ 14 ನಗರಗಳು ಗುರುತಿಸಲ್ಪಟ್ಟಿವೆ. ವಿಪರ್ಯಾಸವೆಂದರೆ, ಈ ದೇಶದ ರಾಜಧಾನಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುವ ದಿಲ್ಲಿ ಅತಿ ಹೆಚ್ಚು ಮಾಲಿನ್ಯ ಗೊಂಡಿರುವ ಬೃಹತ್ ನಗರಗಳಲ್ಲಿ ಸೇರಿಕೊಂಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ 108 ರಾಷ್ಟ್ರಗಳ 4,300 ಪ್ರಮುಖ ನಗರಗಳ ಅಧ್ಯಯನ ನಡೆಸಿ, ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ವಾಯು ಮಾಲಿನ್ಯಕ್ಕಾಗಿ ದಿಲ್ಲಿ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಮುಂಬೈ ಕೂಡ ಹಿಂದೆ ಬಿದ್ದಿಲ್ಲ. ವಾಯುಮಾಲಿನ್ಯದ ಆಧಾರದಲ್ಲಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಇಷ್ಟೇ ಅಲ್ಲ, ಕಾನ್ಪುರ, ಫರೀದಾಬಾದ್, ವಾರಣಾಸಿ, ಗಯಾ, ಪಾಟ್ನ್ನಾ, ಲಕ್ನೋ ಹೀಗೆ ದೇಶದ ಬಹುತೇಕ ಪ್ರಮುಖ ನಗರಗಳು ಅತಿ ಮಾಲಿನ್ಯ ನಗರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ವಾಯು ಮಾಲಿನ್ಯದ ಕಾರಣದಿಂದಲೇ ಇತ್ತೀಚೆಗೆ ದಿಲ್ಲಿಯ ಶಾಲಾಕಾಲೇಜು, ಕಚೇರಿಗಳಿಗೆ ಸಾಮೂಹಿಕ ರಜೆ ಸಾರಲಾಯಿತು. ಸದಾ ಕೆಮ್ಮುತ್ತಾ, ಮುಖಕ್ಕೆ ಮಫ್ಲರ್ ಸುತ್ತಿಕೊಂಡು ಓಡಾಡುವ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಸ್ಥಿತಿಗೆ ಒಂದು ರೂಪಕವೇ ಆಗಿದ್ದಾರೆ. ದಿಲ್ಲಿಯ ಬಳಿಕ ದೇಶ ನಂಬಿರುವುದು ಮುಂಬೈ ಶಹರವನ್ನು. ಕಾಯಕ ನಗರವೆಂದು ಗುರುತಿಸಲ್ಪಟ್ಟಿರುವ ಈ ಮಹಾಶಹರ ಎಲ್ಲ ಭಾಷೆ, ರಾಜ್ಯಗಳ ಜನರನ್ನು ತನ್ನ ಮಡಿಲಲ್ಲಿಟ್ಟು ಪೊರೆದಿದೆ. ಆದರೆ ಇಂದು ಈ ನಗರ ಅದೆಷ್ಟು ಕುಲಗೆಟ್ಟಿದೆಯೆಂದರೆ, ಜನರ ಒತ್ತಡವನ್ನು ತಾಳಿಕೊಳ್ಳಲು ಅಲ್ಲಿನ ಯಾವುದೇ ರೈಲು ನಿಲ್ದಾಣಗಳಿಗೆ ಸಾಧ್ಯವಾಗುತ್ತಿಲ್ಲ. ಅರ್ಧಗಂಟೆ ಧಾರಾಕಾರ ಮಳೆ ಸುರಿದರೆ ಕೊಚ್ಚಿ ಹೋಗುವಂತಹ ಸ್ಥಿತಿ ಇಡೀ ಮುಂಬೈಯದ್ದು. ‘ಮುಂಬೈ ಮಳೆ’ ಕುಖ್ಯಾತವಾದುದು. ಒಮ್ಮೆ ಈ ಮಳೆಯಿಂದಾದ ಭಾರೀ ಅನಾಹುತದಿಂದ ನಗರ ಇನ್ನೂ ಚೇತರಿಸಿಲ್ಲ. ಅಭಿವೃದ್ಧಿ ಉಗುಳುತ್ತಿರುವ ಹೊಗೆಯ ಜೊತೆ ಜೊತೆಗೇ ಜನಸಾಂದ್ರತೆ ಉಸಿರಾಟವನ್ನು ಇನ್ನಷ್ಟು ಮಲಿನಗೊಳಿಸಿದೆ.

ವಿಪರ್ಯಾಸವೆಂದರೆ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿಯೂ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರಗಳಲ್ಲಿ ಗುರುತಿಸಿಕೊಂಡಿದೆ. ನರೇಂದ್ರ ಮೋದಿಯವರ ಸ್ವಚ್ಛತಾ ಆಂದೋಲನಕ್ಕೇ ಇದು ಸವಾಲು ಹಾಕುವಂತಿದೆ. ಧಾರ್ಮಿಕವಾಗಿ ಖ್ಯಾತಿವೆತ್ತ ಸ್ಥಳಗಳು ಅತ್ಯಂತ ಶುಚಿಯಾಗಿರುತ್ತವೆ ಎಂದು ನಾವು ಭಾವಿಸಿದ್ದೇವೆ. ಆದರೆ ಧಾರ್ಮಿಕವಾಗಿ ದೇಶದಲ್ಲಿ ಗುರುತಿಸಿಕೊಂಡಿರುವ ಕಾಶಿ, ವಾರಣಾಸಿಯಂತಹ ನಗರಗಳು ಇಂದು ಪರಿಸರವನ್ನು ಗಬ್ಬೆಬ್ಬಿಸುವ ಮೂಲಕ ಕುಖ್ಯಾತವಾಗಿವೆ. ಗಂಗಾನದಿ ತನ್ನ ಭಕ್ತರ ಕಾರಣದಿಂದಲೇ ಸರಿಪಡಿಸಲಾಗದಷ್ಟು ಕೊಳೆತು ಹೋಗಿದೆ. ಒಂದೆಡೆ ಕೈಗಾರಿಕೆಗಳ ತ್ಯಾಜ್ಯಗಳು ಅದಕ್ಕೆ ಹರಿದು ಬರುತ್ತಿವೆಯಾದರೆ ಮಗದೊಂದೆಡೆ ಧಾರ್ಮಿಕ ತ್ಯಾಜ್ಯಗಳು ನದಿಯನ್ನು ಕುಲಗೆಡಿಸಿವೆ. ಹೀಗೆ ವಾಯು ಮತ್ತು ನೀರು ಎರಡನ್ನು ಕೆಡಿಸಿಕೊಂಡಿರುವ ನಗರವಾಗಿ ವಾರಣಾಸಿ ಗುರುತಿಸಿಕೊಳ್ಳುತ್ತಿದೆ.

ನಗರವೆಂದರೆ ಮನುಷ್ಯನೇ ಸೃಷ್ಟಿಸಿಕೊಂಡಿರುವ ಚಕ್ರವ್ಯೆಹ. ಅದರೊಳಗೀಗ ತಾನೇ ಸಿಲುಕಿಕೊಂಡು ಹೊರಬರಲೂ ಆಗದೆ ಒದ್ದಾಡುತ್ತಿದ್ದಾನೆ. ಬೃಹತ್ ಕೈಗಾರಿಕೆಗಳು ಉಗುಳುವ ವಿಷ, ವಾಯುಮಾಲಿನ್ಯ, ಜಲ ಮಾಲಿನ್ಯ ಇವೆಲ್ಲವೂ ಅಭಿವೃದ್ಧಿಯ ಪ್ರತಿಫಲವೇ ಆಗಿದೆ. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ನಿಂತ ನೆಲ ಇವೆಲ್ಲವುಗಳ ವೌಲ್ಯಗಳನ್ನು ಮರೆತು ಲೋಭಭರಿತವಾದ ಅಭಿವೃದ್ಧಿಯ ಬೆನ್ನು ಹಿಡಿದ ಪರಿಣಾಮವಾಗಿ ದೇಶ ಸ್ವತಃ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದೆ. ತಾನಷ್ಟೇ ಬದುಕಿದರೆ ಸಾಕು ಎಂದು ಗ್ರಾಮವನ್ನು ಮರೆತ ನಗರ ತನ್ನನ್ನು ಉಳಿಸಿಕೊಳ್ಳಬೇಕಾದರೆ ಹಳ್ಳಿಗಳನ್ನು ಉಳಿಸಿಕೊಳ್ಳಬೇಕು. ಹಳ್ಳಿ ಮತ್ತು ನಗರಗಳ ನಡುವೆ ಸಮನ್ವಯವನ್ನು ಕಂಡುಕೊಳ್ಳಬೇಕು. ಅಭಿವೃದ್ಧಿ ಸಮಾನವಾಗಿ ವಿಸ್ತಾರಗೊಳ್ಳಬೇಕು. ನೆಲ, ಗಾಳಿ, ಜಲವನ್ನು ಬಲಿಕೊಟ್ಟು ಅಭಿವೃದ್ಧಿಯನ್ನು ಬಯಸಿದರೆ, ‘ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಬಗೆದ ಜಿಪುಣ’ನ ಸ್ಥಿತಿಯಾಗುತ್ತದೆ ನಮ್ಮದು. ಮುಂದೊಂದು ದಿನ ನಗರಗಳು ಬದುಕಲು ಅಯೋಗ್ಯವಾದ ಪ್ರದೇಶಗಳಾಗಿ ಘೋಷಿತಗೊಂಡು ಅಲ್ಲಿಂದ, ಮರಳಿ ಹಳ್ಳಿಗಳ ಕಡೆಗೆ ಮರಳಬೇಕೆಂದರೆ ಹಳ್ಳಿಗಳನ್ನು ಉದ್ಧರಿಸುವ ಕಡೆಗೂ ಸರಕಾರ ಈಗಿನಿಂದಲೇ ಗಮನಕೊಡುವುದು ಅತ್ಯಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News