ಶೋಷಿತರ ಹಿತಾಸಕ್ತಿಗಾಗಿ ಜೆಡಿಎಸ್ ಜೊತೆಗೆ ಒಪ್ಪಂದ: ಮಾಯಾವತಿ

Update: 2018-05-05 17:37 GMT

ಕೋಲಾರ,ಮೇ.05: ಎಲ್ಲ ಸಮಾಜದ ಬಡವರು ಮತ್ತು ಶೋಷಿತರ ಹಿತಾಸಕ್ತಿಗಾಗಿ ಜೆಡಿಎಸ್ ಜತೆಗೆ ಬಿಎಸ್ಪಿ ಕೈ ಜೋಡಿಸಿದೆ ಎಂದು ಮಾಯಾವತಿ ಸ್ಪಷ್ಟಪಡಿಸಿದರು.

ನಗರದಲ್ಲಿ ನಡೆದ ಕುಮಾರಪರ್ವದಲ್ಲಿ ಮಾತನಾಡಿದ ಅವರು, ಬಿಜೆಪಿ ದಲಿತರ ಮೀಸಲಾತಿ ವಿರೋಧಿ ನಿಲುವು ಹೊಂದಿದ್ದು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕು ಎಂಬ ಮಂಡಲ್ ಆಯೋಗದ ಶಿಫಾರಸ್ಸು ವಿರುದ್ಧ ಹೋರಾಟ ಮಾಡಿದ್ದೂ ಇದೇ ಕಮಲ ಪಾರ್ಟಿ ಎಂದು ಆರೋಪಿಸಿದರು.

ದೇಶಕ್ಕೆ ಸಂವಿಧಾನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತರತ್ನ ಗೌರವ ನೀಡದೆ ಇದ್ದ ಕಾಂಗ್ರೆಸ್‍ಗೆ ಇಂದು ಬಾಬಾ ಸಾಹೇಬರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ಟೀಕಿಸಿದರು. 

ನೋಟ್‍ಬ್ಯಾನ್ ಬಳಿಕ ದೇಶದಲ್ಲಿ ಬಡತನ ಹೆಚ್ಚಿ, ಭ್ರಷ್ಟಾಚಾರ ಮಿತಿಮೀರಿದೆ. ದೇಶದ ಆರ್ಥಿಕತೆ ಕುಸಿತಕ್ಕೆ ಪ್ರಧಾನಿ ಮೋದಿ ನೇರ ಹೊಣೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಕೇವಲ ಮಾತಿನಲ್ಲಿ  ಚೆನ್ನಾಗಿ ಹೇಳುತ್ತಾರೆ. ಬಡವರಿಗೆ ಯಾವುದೂ ಸೇರಿಲ್ಲ. ನಮ್ಮ ಮೈತ್ರಿ ಎಲ್ಲಾ ಸಮುದಾಯಕ್ಕೆ ಒಳಿತು ಮಾಡುವಂತಾಗಿದೆ. ವಿಧಾನಸಭೆ ಅಲ್ಲದೆ ಸಂಸತ್‍ನಲ್ಲೂ ನಮ್ಮ ಮೈತ್ರಿ ಉಳಿಸಬೇಕಿದ್ದು, ಇದರಿಂದ ದಲಿತರಿಗೆ ಮತ್ತು ಆದಿವಾಸಿಗಳಿಗೆ ರಕ್ಷಣೆ ಸಿಗಲಿದೆ. ದೇಶದ ಸದ್ಯದ ಸ್ಥಿತಿಯಲ್ಲಿ ಅಲ್ಪಸಂಖ್ಯಾತರಿಗೆ ಉತ್ತಮ ವಾತಾವರಣವಿಲ್ಲ. ಎಲ್ಲಾ ವರ್ಗದ ಬಡವರಿಗೂ ಆರ್ಥಿಕ ಸದೃಢತೆ ನೀಡಲು ಕೇಂದ್ರಕ್ಕೆ ಮನವಿ ಮಾಡಿದರೂ ಪ್ರಧಾನಿ ಮೋದಿ ಅವರು ಸ್ಪಂದನೆ ನೀಡುತ್ತಿಲ್ಲ ಎಂದು ದೂರಿದರು.

ಮೋದಿಯವರು ದೊಡ್ಡ ಭಾಷಣ ಮಾಡುತ್ತಾರೆ, ಆದರೆ ಒಂದೂ ಕಾರ್ಯರೂಪಕ್ಕೆ ಬರುವುದಿಲ್ಲ. ಕೇಂದ್ರದ ಯೋಜನೆಗಳು ಸರಕಾರಿ ಫೈಲ್‍ಗಳಲ್ಲಿ ಮಾತ್ರ ಇವೆ. ಕೇಂದ್ರದ ತಪ್ಪು ಆರ್ಥಿಕ ನಿರ್ಧಾರಗಳಿಂದ ಬಡವರಿಗೆ ನಷ್ಟ ಆಗುತ್ತಿದ್ದು, ಆದರೆ ಶ್ರೀಮಂತರಿಗೆ ಅನುಕೂಲ ಮಾಡಿಕೊಡುತ್ತಿದೆ. ಉತ್ತರ ಪ್ರದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಲಾಗುತ್ತಿದ್ದು, ಭ್ರಷ್ಟರನ್ನು ಜೈಲಿಗೆ ಕಳುಹಿಸಲಾಗಿದೆ. ಜಾತಿವಾದಿಗಳು ಇನ್ನೂ ದಲಿತರನ್ನು ಶೋಷಣೆ ಮಾಡುತ್ತಿದ್ದು ರಾಜ್ಯದಲ್ಲಿ ಚುನಾವಣೆಗೆ ಮೊದಲು ನಡೆದ ಎಲ್ಲ ಸಮೀಕ್ಷೆಗಳನ್ನು ತಮ್ಮ ಪರವಾಗಿ ಬರುವಂತೆ ನೋಡಿಕೊಂಡಿವೆ. ಆದರೆ ನೀವು ರಾಜ್ಯದಲ್ಲಿ ಜೆಡಿಎಸ್‍ನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ನಾಡಿನಲ್ಲಿ ಬದಲಾವಣೆಯ ಪರ್ವವನ್ನು ನೋಡಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News