ಶಿವಮೊಗ್ಗ ಜಿಲ್ಲೆಯ ಘಟಾನುಘಟಿ, ಹಿರಿಯ ರಾಜಕಾರಣಿಗಳಿಗೆ ನಿರ್ಣಾಯಕವಾದ 2018 ರ ವಿಧಾನಸಭೆ ಚುನಾವಣೆ

Update: 2018-05-05 18:03 GMT
ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಯಡಿಯೂರಪ್ಪ, ಈಶ್ವರಪ್ಪ

ಶಿವಮೊಗ್ಗ, ಮೇ 5: ರಾಜಕೀಯ ರಂಗಕ್ಕೂ ಶಿವಮೊಗ್ಗ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಕಳೆದ ಹಲವು ವರ್ಷಗಳಿಂದ ರಾಜ್ಯ ರಾಜಕಾರಣದಲ್ಲಿ ಜಿಲ್ಲೆಯು ತನ್ನದೆ ಆದ ಪ್ರಭಾವ, ಛಾಪು ಮೂಡಿಸಿಕೊಂಡು ಬರುತ್ತಿದೆ. ರಾಜ್ಯಕ್ಕೆ ಅತೀ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಯು ಜಿಲ್ಲೆಯದ್ದಾಗಿದೆ. ಇಲ್ಲಿನ ಹಲವು ರಾಜಕಾರಣಿಗಳು ರಾಜಕೀಯ ರಂಗದಲ್ಲಿ ಉತ್ತುಂಗ ಸ್ಥಾನ ಅಲಂಕರಿಸಿ ಗಮನ ಸೆಳೆದಿದ್ದಾರೆ. 

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳಿಂದ ಹಲವು ಘಟಾನುಘಟಿ, ಹಿರಿಯ ರಾಜಕಾರಣಿಗಳು ಅಖಾಡಕ್ಕಿಳಿದಿದ್ದಾರೆ. ಅದರಲ್ಲಿಯೂ ಕೆಲ ಪ್ರಭಾವಿ ರಾಜಕಾರಣಿಗಳಿಗಂತೂ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ರಾಜಕೀಯ ಜೀವನದ ಅಳಿವು - ಉಳಿವಿನ ಪ್ರಶ್ನೆಯಾಗಿದೆ. ಗೆಲ್ಲಲೇಬೇಕಾದ ಅನಿವಾರ್ಯ ಒತ್ತಡದಲ್ಲಿದ್ದಾರೆ. ಈ ಕಾರಣದಿಂದ ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. 

ಶಿಕಾರಿಪುರದಿಂದ ಕಣಕ್ಕಿಳಿದಿರುವ ಬಿಜೆಪಿ ಪಕ್ಷದ ಸಿಎಂ ಅಭ್ಯರ್ಥಿ ಎಂದೇ ಘೋಷಿತವಾಗಿರುವ ಹಾಗೂ ಆ ಪಕ್ಷದ ರಾಜ್ಯಾಧ್ಯಕ್ಷರೂ ಆದ ಬಿ.ಎಸ್.ಯಡಿಯೂರಪ್ಪ, ಶಿವಮೊಗ್ಗದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಡಿಸಿಎಂ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಸಾಗರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಚಿವ ಕಾಗೋಡು ತಿಮ್ಮಪ್ಪ, ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಖಾಡಕ್ಕಿಳಿಯುತ್ತಿರುವ ಮಾಜಿ ಸಚಿವ ಹರತಾಳು ಹಾಲಪ್ಪ, ಸೊರಬದಲ್ಲಿ ಕಣಕ್ಕಿಳಿಯುತ್ತಿರುವ ದಿವಂಗತ ಎಸ್. ಬಂಗಾರಪ್ಪ ಪುತ್ರರಾದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್, ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ, ಭದ್ರಾವತಿಯ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿಗೌಡ, ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರರವರಿಗೆ ನಾನಾ ಕಾರಣಗಳಿಂದ ಈ ಚುನಾವಣೆ ನಿರ್ಣಾಯಕವಾಗಿದೆ. 

ಕಾಂಗ್ರೆಸ್ ಚಿತ್ರಣ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರು ಇಲ್ಲಿಯವರೆಗೂ ಸಾಗರ ಕ್ಷೇತ್ರದಲ್ಲಿ 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. 5 ಬಾರಿ ಜಯ ಸಾಧಿಸಿ, 6 ಬಾರಿ ಸೋಲನುಭವಿಸಿದ್ದಾರೆ. ಇದು ಅವರ 12 ನೇ ಚುನಾವಣೆಯಾಗಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರು ನಾಲ್ಕು ಬಾರಿ ಕಣಕ್ಕಿಳಿದಿದ್ದು, ತಲಾ ಎರಡು ಬಾರಿ ಸೋಲು ಹಾಗೂ ಜಯ ಸಂಪಾದಿಸಿದ್ದಾರೆ. ಇದು ಅವರ ಐದನೇ ಎಲೆಕ್ಷನ್ ಆಗಿದೆ. ಭದ್ರಾವತಿಯಿಂದ ಕಣಕ್ಕಿಳಿಯುತ್ತಿರುವ ಬಿ.ಕೆ.ಸಂಗಮೇಶ್ವರ್ ರವರು ನಾಲ್ಕು ಬಾರಿ ಕಣಕ್ಕಿಳಿದಿದ್ದು, ತಲಾ ಎರಡು ಬಾರಿ ಸೋಲು - ಗೆಲುವು ಸಂಪಾದಿಸಿದ್ದಾರೆ. ಇದು ಅವರ ಐದನೇ ಚುನಾವಣೆಯಾಗಿದೆ. 

ಬಿಜೆಪಿ ಚಿತ್ರಣ: ಬಿ.ಎಸ್.ಯಡಿಯೂರಪ್ಪರವರು ಶಿಕಾರಿಪುರದಿಂದ 8 ಬಾರಿ ಕಣಕ್ಕಿಳಿದಿದ್ದು, ಇದರಲ್ಲಿ ಏಳು ಬಾರಿ ಜಯ ಸಾಧಿಸಿದ್ದಾರೆ. ಒಮ್ಮೆ ಸೋಲನುಭವಿಸಿದ್ದಾರೆ. ಇದು ಅವರು ಕಣಕ್ಕಿಳಿಯುತ್ತಿರುವ 9 ನೇ ಎಲೆಕ್ಷನ್ ಆಗಿದೆ. ಕೆ.ಎಸ್.ಈಶ್ವರಪ್ಪರವರು ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಸತತ ಆರು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಇದರಲ್ಲಿ ನಾಲ್ಕು ಬಾರಿ ಜಯ ಸಾಧಿಸಿ, ಎರಡು ಬಾರಿ ಸೋಲನುಭವಿಸಿದ್ದಾರೆ. ಇದು ಅವರು ಕಣಕ್ಕಿಳಿಯುತ್ತಿರುವ 7 ನೇ ಚುನಾವಣೆಯಾಗಿದೆ. 

ತೀರ್ಥಹಳ್ಳಿಯಿಂದ ಕಣಕ್ಕಿಳಿಯುತ್ತಿರುವ ಆರಗ ಜ್ಞಾನೇಂದ್ರರವರು ಇಲ್ಲಿಯವರೆಗೂ 8 ಚುನಾವಣೆಗಳಲ್ಲಿ ಕಣಕ್ಕಿಳಿದಿದ್ದಾರೆ. 5 ಬಾರಿ ಸೋಲನುಭವಿಸಿದ್ದು, ಮೂರು ಬಾರಿ ಜಯ ಸಾಧಿಸಿದ್ದಾರೆ. ಇದು ಅವರ 9 ನೇ ಚುನಾವಣೆಯಾಗಿದೆ. ಸಾಗರದಿಂದ ಕಣಕ್ಕಿಳಿಯುತ್ತಿರುವ ಹರತಾಳು ಹಾಲಪ್ಪರವರು ಇಲ್ಲಿಯವರೆಗೂ ಮೂರು ಎಲೆಕ್ಷನ್‍ನಲ್ಲಿ ಕಣಕ್ಕಿಳಿದು ಎರಡು ಬಾರಿ (ಹೊಸನಗರ ಕ್ಷೇತ್ರ ಹಾಗೂ ಸೊರಬ ಕ್ಷೇತ್ರ) ಆಯ್ಕೆಯಾಗಿ, ಒಮ್ಮೆ ಸೋಲು (ಸೊರಬದಲ್ಲಿ) ಕಂಡಿದ್ದಾರೆ. ಇದು ಅವರ 4 ನೇ ಚುನಾವಣೆಯಾಗಿದೆ.

ಸೊರಬದಿಂದ ಕಣಕ್ಕಿಳಿಯುತ್ತಿರುವ ಕುಮಾರ್ ಬಂಗಾರಪ್ಪರವರು ಇಲ್ಲಿಯವರೆಗೂ ನಾಲ್ಕು ಚುನಾವಣೆ ಎದುರಿಸಿದ್ದು, ಇದರಲ್ಲಿ ತಲಾ ಎರಡು ಬಾರಿ ಜಯ ಹಾಗೂ ಸೋಲನುಭವಿಸಿದ್ದಾರೆ. ಇದು ಅವರ 5 ನೇ ಚುನಾವಣೆಯಾಗಿದೆ.  

ಜೆಡಿಎಸ್ ಚಿತ್ರಣ: ಸೊರಬದಿಂದ ಕಣಕ್ಕಿಳಿಯುತ್ತಿರುವ ಮಧು ಬಂಗಾರಪ್ಪರವರು 3 ಬಾರಿ ಕಣಕ್ಕಿಳಿದಿದ್ದು, ಎರಡು ಬಾರಿ ಪರಾಭವಗೊಂಡು ಒಮ್ಮೆ ಜಯ ಸಾಧಿಸಿದ್ದಾರೆ. ಭದ್ರಾವತಿಯಿಂದ ಕಣಕ್ಕಿಳಿಯುತ್ತಿರುವ ಜೆಡಿಎಸ್‍ನ ಅಪ್ಪಾಜಿ ಗೌಡರವರು ಆರು ಬಾರಿ ಕಣಕ್ಕಿಳಿದು ತಲಾ ಮೂರು ಬಾರಿ ಗೆಲುವು - ಸೋಲು ಕಂಡಿದ್ದಾರೆ. ಇದು ಅವರ ಏಳನೇ ಎಲೆಕ್ಷನ್ ಆಗಿದೆ. 

ಅಖಾಡದಲ್ಲಿರುವ ಹಿರಿಯ, ಹೊಸ ಮುಖಗಳ ವಿವರ
ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ, 87 ವರ್ಷ ಪ್ರಾಯದ ಕಾಗೋಡು ತಿಮ್ಮಪ್ಪರವರು ಪ್ರಸ್ತುತ ಜಿಲ್ಲೆ ಮಾತ್ರವಲ್ಲದೆ ರಾಜ್ಯ ವಿಧಾನಸಭಾ ಚುನಾವಣಾ ಅಖಾಡದಲ್ಲಿರುವ ಅತ್ಯಂತ ಹಿರಿಯ ರಾಜಕಾರಣಿಯಾಗಿದ್ದಾರೆ. ಉಳಿದಂತೆ ಪ್ರಮುಖ ಪಕ್ಷಗಳಿಂದ ವಿಧಾನಸಭಾ ಚುನಾವಣಾ ಕಣಕ್ಕಿಳಿಯುತ್ತಿರುವ ವಿವರ ಗಮನಿಸಿದರೆ, ಕ್ರಮವಾಗಿ ಶಿವಮೊಗ್ಗ ಗ್ರಾಮಾಂತರ ಹಾಗೂ ಭದ್ರಾವತಿ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕೆ.ಬಿ.ಅಶೋಕ್‍ನಾಯ್ಕ್ ಮತ್ತು ಜಿ.ಆರ್.ಪ್ರವೀಣ್ ಪಟೇಲ್‍ರವರು ಎದುರಿಸುತ್ತಿರುವ ಪ್ರಥಮ ಚುನಾವಣೆ ಇದಾಗಿದೆ. ಅದೇ ರೀತಿ ಸೊರಬ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ರಾಜು ಎಂ. ತಲ್ಲೂರು, ಗೋಣಿ ಮಾಲತೇಶ್, ಡಾ. ಎಸ್.ಕೆ.ಶ್ರೀನಿವಾಸ್‍ರವರಿಗೂ ಇದು ಪ್ರಥಮ ಎಲೆಕ್ಷನ್ ಆಗಿದೆ. ಜೆಡಿಎಸ್ ಪಕ್ಷದಿಂದ ಕ್ರಮವಾಗಿ ಶಿವಮೊಗ್ಗ ನಗರ, ಸಾಗರ ಕ್ಷೇತ್ರದ ಅಭ್ಯರ್ಥಿಯಾಗಿರುವ ಹೆಚ್.ಎನ್.ನಿರಂಜನ್, ಗಿರೀಶ್‍ಗೌಡರವರಿಗೂ ಇದು ಪ್ರಥಮ ಚುನಾವಣೆಯಾಗಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News