ರಾಜಕೀಯ ನಾಯಕನಿಗೆ ಇರಬೇಕಾದ ಅರ್ಹತೆ ರಾಹುಲ್‍ ಗಾಂಧಿಗಿಲ್ಲ: ಡಿ.ವಿ.ಸದಾನಂದಗೌಡ

Update: 2018-05-05 18:13 GMT

ಮಡಿಕೇರಿ, ಮೇ.5:  ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶಾದ್ಯಂತ ಬಿಜೆಪಿ ಪ್ರಬಲ ಪಕ್ಷವಾಗಿ ಬೆಳವಣಿಗೆಯನ್ನು ಕಂಡಿದ್ದು, ಕರ್ನಾಟಕದಲ್ಲಿ ಕೂಡ ಭಾರತೀಯ ಜನತಾ ಪಕ್ಷ ‘ಮಿಷನ್-150’ ಗುರಿಯನ್ನು ಮೀರಿ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಜಾತಿ, ಧರ್ಮಗಳನ್ನು ಒಡೆಯುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಹೇಳುವುದಾದರೆ ಅವರು ಬಿಹಾರದ ಚುನಾವಣೆಗಳ ಪ್ರಚಾರಕ್ಕೆ ಹೋದರು. ಅಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್‍ನಿಂದ ಸಿಂಗಲ್ ಡಿಜಿಟ್‍ಗೆ ಬಂತು. ಅದೇ ರೀತಿ ಉತ್ತರ ಪ್ರದೇಶದಲ್ಲಿ ಅವರ ಸಾಧನೆ ಶೂನ್ಯ ಸಂಪಾದನೆಯಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕನಿಗೆ ಇರಬೇಕಾದ ಅರ್ಹತೆಗಳು ಅವರಿಗಿದ್ದಂತೆ ಕಾಣುತ್ತಿಲ್ಲ. ರಾಜಕೀಯವಾಗಿ ಅವರು ಕಲಿಯಬೇಕಾದ್ದು ಬಹಳಷ್ಟಿದೆ. ಭಾರತೀಯ ಜನತಾ ಪಕ್ಷದ ಪರವಾಗಿ ನರೇಂದ್ರ ಮೋದಿಯವರು ಪ್ರಚಾರದಲ್ಲಿ ಇನ್ನೂ 15 ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರ ಪ್ರವೇಶದಿಂದ ಚುನಾವಣಾ ಫಲಿತಾಂಶದಲ್ಲಿ ಸಾಕಷ್ಟು ಬದಲಾವಣೆಯಾಲಿದೆ ಎಂದರು.

ಯಡಿಯೂರಪ್ಪ ಅವರ ಪುತ್ರ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಎಂದು ಭಾರತೀಯ ಜನತಾ ಪಕ್ಷ ನಿರ್ಧರಿಸಿರಲಿಲ್ಲ. ಅದೇ ರೀತಿ ಪಕ್ಷದ ನಾಯಕನೊಬ್ಬನಿಗೆ ಯಾವುದೇ ರೀತಿಯ ಪುತ್ರ ವ್ಯಾಮೋಹದಂತಹ ಸ್ವಾರ್ಥ ಇರಬಾರದೆಂಬ ಉದ್ದೇಶದಿಂದ ಅಲ್ಲಿಯ ಅಭ್ಯರ್ಥಿಯಾಗಿ ಬೇರೆಯವರನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಪಕ್ಷದ ನಾಯಕತ್ವ ಪಾರದರ್ಶಕತೆಯನ್ನು ಮೆರೆದಿದೆ. ಜಿಲ್ಲೆಯಲ್ಲಿ ಸಂಘ ಪರಿವಾರದ ಸದಸ್ಯರದಲ್ಲಿ ಸ್ವಲ್ಪಮಟ್ಟಿನ ಅಸಮಾಧಾನ ಪ್ರಾರಂಭದಲ್ಲಿ ಇತ್ತು. ಆದರೆ, ಈಗ ಅದೆಲ್ಲ ಪರಿಹಾರವಾಗಿ ಪಕ್ಷದ ಪರವಾಗಿ ಎಲ್ಲರೂ ಸಂಘಟಿತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

1991ರಿಂದ ಕೊಡಗು ಜಿಲ್ಲೆ ಭಾರತೀಯ ಜನತಾ ಪಕ್ಷವನ್ನು ಕೈಬಿಟ್ಟಿಲ್ಲ. ಇಲ್ಲಿ ಪಕ್ಷದ ನಾಯಕರಲ್ಲಿ ಅಲ್ಪಸ್ವಲ್ಪ ಭಿನ್ನಾಭಿಪ್ರಾಯಗಳಿದ್ದರೂ, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಿದ್ಧಾಂತದಡಿಯಲ್ಲಿ ಭಾರತೀಯ ಜನತಾಪಕ್ಷಕ್ಕೆ ಪ್ರತಿ ಬಾರಿಯೂ ಉತ್ತಮ ಫಲಿತಾಂಶವನ್ನು ನೀಡಲಾಗಿದೆ. ಅದೇ ರೀತಿ ಈ ಬಾರಿ ಕೂಡ ಭಾರತೀಯ ಜನತಾ ಪಕ್ಷದ ಪರ ಉತ್ತಮ ವಾತಾವರಣ ಕಂಡು ಬಂದಿದೆ ಎಂದು ಹೇಳಿದರು.

ಕೊಡಗಿನ ಜನತೆ ಶಾಂತಿ, ಶಿಸ್ತು, ಸಂಸ್ಕರತಿ, ಸಂಸ್ಕಾರ, ದೇಶಪ್ರೇಮ ಇವುಗಳಿಗೆ ಆದ್ಯತೆ ಕೊಡುತ್ತಾರೆ. ಅದೇ ರೀತಿ ಯಾವುದೇ ಜಾತಿ ಧರ್ಮಗಳ ಓಲೈಕೆಯ ರಾಜಕಾರಣ ಮಾಡುವುದಿಲ್ಲ. ಒಟ್ಟಾರೆ ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕಳೆದ ಚುನಾವಣೆಗಳಲ್ಲಿ ಮೂರನೇ ಸ್ಥಾನದಲ್ಲಿ ಭಾರತೀಯ ಜನತಾ ಪಕ್ಷ ಮತಗಳನ್ನು ಪಡೆದಿದ್ದರೂ ಕೊಡಗು ಜಿಲ್ಲೆ ಅದಕ್ಕೆ ಹೊರತಾಗಿ ಉತ್ತಮ ಫಲಿತಾಂಶವನ್ನು ಕೊಟ್ಟಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೋಲಿನ ಹತಾಶೆಯಿಂದ ಸಮ್ಮಿಶ್ರ ಸರ್ಕಾರಗಳ ಚಿಂತನೆಯಲ್ಲಿ ಮುಳುಗಿವೆ. ಅದೆಲ್ಲವನ್ನೂ ಹುಸಿಗೊಳಿಸಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಸ್ವತಂತ್ರವಾಗಿ ಸರ್ಕಾರ ರಚಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಜನಸಾಮಾನ್ಯರಿಗೆ, ಉತ್ತಮ ಅಧಿಕಾರಿಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಭ್ರಷ್ಟಾಚಾರ, ದುರಾಡಳಿತ, ಲೂಟಿ, ಗೂಂಡಾಗಿರಿ ನಿರಂತರ ನಡೆಯುತ್ತಾ ಬಂದಿವೆ. ಕಳೆದ ಐದು ವರ್ಷಗಳಲ್ಲಿ ಅಧಿಕಾರ ನಡೆಸಿದ್ದರೂ ತಾವು ಮಾಡಿದ ಸಾಧನೆಯ ಆಧಾರದ ಮೇಲೆ ಮತದಾರರ ಬಳಿಗೆ ಹೋಗುವ ನೈತಿಕತೆಯನ್ನು ಕಳೆದುಕೊಂಡು ರಾಜ್ಯದ ಮುಖ್ಯಮಂತ್ರಿಯಾಗಿರುವವರೇ  ತಮಗೆ ಪ್ರಶಸ್ತವಾದ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಬಂದು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವ  ಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.

ಭಾರತೀಯ ಜನತಾ ಪಕ್ಷ 224 ಕ್ಷೇತ್ರಗಳಲ್ಲಿ ಪರಿವರ್ತನಾ ರ್ಯಾಲಿ ನಡೆಸಿದಾಗ ರಾಜ್ಯದ ಜನತೆ ಅಭೂತ ಪೂರ್ವ ಸ್ಪಂದನೆ ನೀಡಿದ್ದಾರೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲೂ ಉತ್ತಮ ವಾತಾವರಣ ವ್ಯಕ್ತವಾಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ ಚುನಾವಣಾ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಜನರ ಪ್ರತಿಕ್ರಿಯೆ ನಮ್ಮ ಪಕ್ಷಕ್ಕೆ ಸ್ಪೂರ್ತಿ ನೀಡಿದೆ. ಕೊಡಗು ಜಿಲ್ಲೆಗೆ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದ್ದ ಅವಧಿಯಲ್ಲಿ ಪ್ರತಿವರ್ಷವೂ ವಿಶೇಷ ಪ್ಯಾಕೇಜ್ ಪಡೆದುಕೊಂಡಿರುವುದು ಐತಿಹಾಸಿಕವಾಗಿದ್ದು, ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಸರ್ಕಾರ ಮತ್ತು ನಮ್ಮ ಶಾಸಕರ ಸಾಧನೆಗಳು ಈ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ತಂದುಕೊಡಲಿವೆ ಎಂದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಪಕ್ಷದ ಅಧ್ಯಕ್ಷ ಬಿ.ಬಿ.ಭಾರತೀಶ್, ಉಪಾಧ್ಯಕ್ಷ ಗಣಿಪ್ರಸಾದ್,  ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಪಕ್ಷದ ಮುಖಂಡರಾದ ಕುಮಾರಪ್ಪ, ಪಟ್ಟೆಮನೆ ಕೆ.ಶೇಷಪ್ಪ, ಅಭಿಮನ್ಯುಕುಮಾರ್, ಪಟ್ಟಣ ಪಂಚಾಯತ್ ಅಧ್ಯಕ್ಷೆ ರೇಣುಕಾ, ಸದಸ್ಯರಾದ ಚರಣ್, ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ನೂರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು, ಗೌಡ ಸಮಾಜದ ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News