×
Ad

ಬಿಜೆಪಿ ಅಧಿಕಾರಕ್ಕೆ ಬಂದರೆ 6 ತಿಂಗಳಲ್ಲಿ ಮಹದಾಯಿ ಸಮಸ್ಯೆ ಇತ್ಯರ್ಥ: ಅಮಿತ್ ಶಾ

Update: 2018-05-06 19:24 IST

ಬೆಳಗಾವಿ, ಮೇ 6: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇವಲ ಆರು ತಿಂಗಳಲ್ಲಿ ಮಹದಾಯಿ ವಿವಾದ ಇತ್ಯರ್ಥಪಡಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದಿಲ್ಲಿ ಭರವಸೆ ನೀಡಿದ್ದಾರೆ.

ರವಿವಾರ ಜಿಲ್ಲೆಯ ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆನಂದ್ ಮಾಮನಿ ಪರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆಯನ್ನು ಆರು ತಿಂಗಳಲ್ಲಿ ಪರಿಹರಿಸುವ ಮೂಲಕ ಈ ಭಾಗದ ಜನರಿಗೆ ನೀರು ಒದಗಿಸಲಾಗುವುದು ಎಂದು ಘೋಷಿಸಿದರು.

ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಅಧಿಕ ಸಂಖ್ಯೆಯಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ 100 ದಿನದೊಳಗೆ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿಯೂ ನೂರು ದಿನದೊಳಗೆ ಬೆಳೆಗಾರರಿಗೆ ಕಬ್ಬಿನ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಕೃಷಿಕರ ವಿರೋಧಿ. ಮಲಪ್ರಭಾ ನದಿ ತೀರದ ಅನೇಕ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದುದರಿಂದ ರಾಜ್ಯದಲ್ಲಿನ ರೈತರ ಏಳ್ಗೆಗಾಗಿ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಕೋರಿದ ಅವರು, ಮೇ 17ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.

ಕೇಂದ್ರ ಕೋಟ್ಯಂತರ ರೂ.ಅನುದಾನ ಬಿಡುಗಡೆ ಮಾಡಿದೆ. ಆ ಹಣವನ್ನು ರಾಜ್ಯ ಸರಕಾರ ಸದ್ಬಳಕೆ ಮಾಡಿಕೊಂಡಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಒಂದು ಮಹಡಿಯಿದ್ದ ಆ ಪಕ್ಷದ ನಾಯಕರ ಮನೆ ಇದೀಗ ನಾಲ್ಕು ಮಹಡಿಗೆ ಏರಿಕೆ ಕಂಡಿವೆ. ಕೇಂದ್ರದ ಹಣವೆಲ್ಲ ಕೈ ನಾಯಕರ ಮನೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News