ವಿಧಾನಸಭಾ ಚುನಾವಣೆ: ಸ್ಪರ್ಧಾಕಣದಲ್ಲಿರುವ 391 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು

Update: 2018-05-06 15:14 GMT

ಬೆಂಗಳೂರು, ಮೇ 6: ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳಲ್ಲಿ 391 ಮಂದಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದು, 59 ಮಂದಿ ಬಿಜೆಪಿ, 32 ಕಾಂಗ್ರೆಸ್, 29 ಮಂದಿ ಜೆಡಿಎಸ್ ಅಭ್ಯರ್ಥಿಗಳಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸುವ ಎಡಿಆರ್ ಸಂಸ್ಥೆ ಸುದ್ದಿಗೋಷ್ಠಿಯಲ್ಲಿ ವರದಿ ಬಿಡುಗಡೆ ಮಾಡಿದ್ದು, ಚುನಾವಣಾ ಸ್ಪರ್ಧಾ ಕಣದಲ್ಲಿರುವ 2560 ಮಂದಿಯ ಪೈಕಿ 391 ಮಂದಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಇವರಲ್ಲಿ 254 ಮಂದಿ ಗಂಭೀರ ಪ್ರಕರಣ ಎದುರಿಸುತ್ತಿದ್ದಾರೆ.

4 ಮಂದಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಹಾಗೂ 24 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. 23 ಮಂದಿ ವಿರುದ್ಧ ಮಹಿಳಾ ದೌರ್ಜನ್ಯ ಮೊಕದ್ದಮೆ ದಾಖಲಾಗಿದೆ. ಕ್ರಿಮಿನಲ್ ಪ್ರಕರಣದಲ್ಲಿ ಮುಂದುವರಿದಂತೆ 3 ಜೆಡಿಯು, ಓರ್ವ ಆಮ್ ಆದ್ಮಿ, 70 ಪಕ್ಷೇತರರು ಭಾಗಿಯಾಗಿರುವುದಾಗಿ ಎಡಿಆರ್ ವರದಿಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಸ್ತಿ ಮೌಲ್ಯ ಕಲೆ ಹಾಕಿರುವ ಸಂಸ್ಥೆ, ಕಾಂಗ್ರೆಸ್‌ನಲ್ಲಿ 207 ಮಂದಿ, ಬಿಜೆಪಿಯಲ್ಲಿ 208 ಮಂದಿ, ಜೆಡಿಎಸ್ ನಲ್ಲಿ 154, ಜೆಡಿಯು 13, ಆಮ್‌ಆದ್ಮಿಯ 9 ಮಂದಿ ಹಾಗೂ 199 ಮಂದಿ ಪಕ್ಷೇತರರು ಕೋಟ್ಯಧಿಪತಿಗಳಿದ್ದಾರೆ.

ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಯನ್ನು ನೋಡಿದರೆ ಅದರಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಾಕೃಷ್ಣ ಹೆಸರು ಅಗ್ರಸ್ಥಾನದಲ್ಲಿದೆ. ಅವರ ಆಸ್ತಿ ಮೌಲ್ಯ 1020 ಕೋಟಿ ರೂ.ಗಳಾಗಿದೆ. ನಂತರ 2ನೆ ಸ್ಥಾನದಲ್ಲಿ ಹೊಸಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ಆಸ್ತಿ 1015 ಕೋಟಿ ರೂ.ಗಳು, ಸಚಿವ ಡಿ.ಕೆ. ಶಿವಕುಮಾರ್ ಆಸ್ತಿ ಮೌಲ್ಯ 840 ಕೋಟಿ ರೂ.ಗಳು ಹಾಗೂ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಸ್ತಿ ಮೌಲ್ಯ 416 ಕೋಟಿ ರೂ. ಆಗಿದೆ.

ಬಿಜೆಪಿಯ 224 ಮಂದಿ ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 17.86 ಕೋಟಿ ರೂ.ಗಳಾಗಿದ್ದರೆ, ಕಾಂಗ್ರೆಸ್‌ನ 220 ಅಭ್ಯರ್ಥಿಗಳ ಸರಾಸರಿ ಆಸ್ತಿ ಮೌಲ್ಯ 38.75 ಕೋಟಿಗಳಾಗಿದೆ. ಜೆಡಿಎಸ್‌ನ 199 ಅಭ್ಯರ್ಥಿಗಳ ಆಸ್ತಿ ಮೌಲ್ಯ 20.91 ಕೋಟಿ ರೂ.ಗಳಾಗಿದೆ. 1099 ಪಕ್ಷೇತರರ ಸರಾಸರಿ ಆಸ್ತಿ ಮೌಲ್ಯ 1.58 ಕೋಟಿ ರೂ. ಆಗಿದೆ. ವಿಶೇಷ ಎಂದರೆ ಬೊಮ್ಮನಹಳ್ಳಿ ಪಕ್ಷೇತರ ಅಭ್ಯರ್ಥಿ ದಿಲೀಪ್ ಕುಮಾರ್ ಎಂಬುವವರ ಆಸ್ತಿ ಮೌಲ್ಯ ಕೇವಲ 1 ಸಾವಿರ ರೂ. ಮಾತ್ರ.

ಸಾಕ್ಷರತೆಗೆ ಸಂಬಂಧಿಸಿದಂತೆ 1351 ಮಂದಿ ಅಭ್ಯರ್ಥಿಗಳು 5 ರಿಂದ 12ನೆ ತರಗತಿ ಉತ್ತೀರ್ಣರಾಗಿದ್ದಾರೆ. 981 ಮಂದಿ ಪದವೀಧರರು, ಒಟ್ಟಾರೆ ಶೇ. 52 ರಷ್ಟು ಮಂದಿ ಸಾಕ್ಷರರಾಗಿದ್ದಾರೆ. 11 ಮಂದಿ ಅಭ್ಯರ್ಥಿಗಳು ತಮ್ಮ ಶಿಕ್ಷಣದ ಕುರಿತು ಪ್ರಮಾಣಪತ್ರದಲ್ಲಿ ದಾಖಲು ಮಾಡಿಲ್ಲ.

ಸ್ಪರ್ಧಾ ಕಣದಲ್ಲಿ ಇರುವ ವ್ಯಕ್ತಿಗಳಲ್ಲಿ ಓರ್ವ ಮಾತ್ರ 20 ವರ್ಷ ಎಂದು ನಮೂದು ಮಾಡಿದ್ದರೆ, 849 ಮಂದಿ ಅಭ್ಯರ್ಥಿಗಳು 25ರಿಂದ 40 ವಯೋಮಿತಿಯವರು, 1351 ಮಂದಿ 41ರಿಂದ 60 ವರ್ಷ, 347 ಮಂದಿ 61 ರಿಂದ 80 ವರ್ಷ, 7 ಮಂದಿ 80ಕ್ಕಿಂತ ಹೆಚ್ಚು ವಯೋಮಾನದವರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News