×
Ad

ಮೈಸೂರು: ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ; ಐವರಿಗೆ ಗಂಭೀರ ಗಾಯ

Update: 2018-05-06 21:23 IST

ಮೈಸೂರು,ಮೇ.6: ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಐವರು ಗಾಯಗೊಂಡಿರುವ ಘಟನೆ ಚಾಮುಂಡೇಶ್ವರಿ ಕ್ಷೇತ್ರದ ನಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಲನಚಿತ್ರ ನಟ ದರ್ಶನ್ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ದರ್ಶನ್ ಚುನಾವಣ ಪ್ರಚಾರಕ್ಕೆ ಬರಬಾರದು ಎಂದು ಜೆಡಿಎಸ್ ಕಾರ್ಯಕರ್ತರು ದರ್ಶನ್ ವಿರುದ್ಧ ಪ್ರತಿಭಟನೆ ನಡೆಸಿ ಜೆಡಿಎಸ್ ಬಾವುಟ ಪ್ರದರ್ಶಿಸಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯರ್ತರು ಸಹ ಕಾಂಗ್ರೆಸ್ ಬಾವುಟ ಪ್ರದರ್ಶಿಸಿದರು. ಈ ಸಮಯದಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಗುಂಪನ್ನು ಚದುರಿಸಿದ್ದರು.

ಶನಿವಾರ ತಡರಾತ್ರಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಈ ವೇಳೆ ಐವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಅವರನ್ನು ಕೆ.ಆರ್.ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಶಾಸಕ ಜಿ.ಟಿ.ಡಿಗೆ ಘೇರಾವ್: ಘಟನೆ ತಿಳಿದು ರವಿವಾರ ಬೆಳಿಗ್ಗೆ ನಾಗನಹಳ್ಳಿ ಗ್ರಾಮಕ್ಕೆ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಜಿ.ಟಿ.ದೇವೇಗೌಡ ಆಗಮಿಸುತ್ತಿದ್ದಂತೆ ಕೆರಳಿದ ಗ್ರಾಮದ ಮಹಿಳೆಯರು ಅವರನ್ನು ತರಾಟೆಗೆ ತೆಗೆದುಕೊಂಡರು. 'ನಿಮ್ಮಿಂದಲೇ ಇಲ್ಲಿ ಗಲಾಟೆ ನಡೆದಿರುವುದು. ನಾವು ಅಣ್ಣ ತಮ್ಮಂದಿರ ಹಾಗೆ ಇದ್ದೆವು. ಆದರೆ ನಿಮ್ಮ ಕುಮ್ಮಕ್ಕಿನಿಂದ ಈ ಅವಘಡ ಸಂಭವಿಸಿದೆ' ಎಂದು ಘೇರಾವ್ ಹಾಕಿದರು ಎಂದು ತಿಳಿದುಬಂದಿದ್ದು, ನಂತರ ಅವರು ಸ್ಥಳದಿಂದ ಹೊರಟು ಹೋದರು ಎನ್ನಲಾಗಿದೆ.

ಈ ಸಂಬಂಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಎರಡು ಕಡೆಯವರು ದೂರು ಪ್ರತಿದೂರು ನೀಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News